- ಬೆಳ್ತಂಗಡಿ ತಾ. ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಸೂಚನೆ ನೀಡಿದ ಪೊಲೀಸರು
- ಸಾರ್ವಜನಿಕರಲ್ಲಿ ಅನುಮಾನ, ಅಸಮಾಧಾನಕ್ಕೆ ಕಾರಣವಾದ ನಡೆ
ಧರ್ಮಸ್ಥಳದಲ್ಲಿ ಕಳೆದ 11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ರಾಜ್ಯಾದ್ಯಂತ ಚರ್ಚೆಯಲ್ಲಿರುವಾಗಲೇ ಒಂದೊಂದು ದಿನ ಒಂದೊಂದು ಬೆಳವಣಿಗೆಗಳಾಗುತ್ತಿದೆ.
ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ಕುಮಾರ್‌ನನ್ನು ಸಿಬಿಐ ನ್ಯಾಯಾಲಯವು ನಿರ್ದೋಷಿ ಎಂದು ತೀರ್ಪು ನೀಡಿದ ಬಳಿಕ, ಹಾಗಾದರೆ ಅತ್ಯಾಚಾರಗೈದು ಕೊಲೆ ನಡೆಸಿದವರು ಯಾರು ಎಂಬ ಪ್ರಶ್ನೆ ಎಲ್ಲೆಡೆ ಭುಗಿಲೆದ್ದಿದೆ.
ಈ ನಡುವೆ ಧರ್ಮಸ್ಥಳ ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಹೆಸರನ್ನು ಸೌಜನ್ಯ ಪ್ರಕರಣದಲ್ಲಿ ಎಳೆದುತಂದು ಹಾಳುಗೆಡವಲಾಗುತ್ತಿದೆ ಎಂದು ಆರೋಪಿಸಿ ಕಳೆದ ಶುಕ್ರವಾರ ಧರ್ಮಸ್ಥಳದ ಪರ ಇರುವವರು ಪ್ರತಿಭಟನೆಯೂ ನಡೆಸಿದ್ದರು. ಈ ವೇಳೆ ಸೌಜನ್ಯಳಿಗೆ ನ್ಯಾಯ ಕೊಡಿ ಎಂದು ಪ್ಲೆಕಾರ್ಡ್ ಇಟ್ಟು ವೇದಿಕೆಯ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದ ಸೌಜನ್ಯಳ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿ, ಬೆದರಿಕೆಯೊಡ್ಡಿದ್ದ ಘಟನೆಯೂ ನಡೆದಿತ್ತು.
ಎಲ್ಲ ಬೆಳವಣಿಗೆಗಳು ಚರ್ಚೆಯಲ್ಲಿರುವಾಗಲೇ ಸೌಜನ್ಯ ಪರ ಹಾಕಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆಯು ಬೆಳ್ತಂಗಡಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಸೂಚನೆ ನೀಡಿರುವ ಪತ್ರವು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಹಾಕಿರುವ ಬ್ಯಾನರ್‌ಗಳ ತೆರವಿಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರ ಮನವಿಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ನ ಪಿಡಿಓಗಳಿಗೆ ತಾ ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತಾಲೂಕಿನಾದ್ಯಂತ ಹಾಕಲಾದ ಸೌಜನ್ಯ ಪರ ಹಾಕಿರುವ ಎಲ್ಲ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನ ಮತ್ತು ಅಸಮಾಧಾನ ಉಂಟು ಮಾಡಿದೆ.

ಆಗಸ್ಟ್ 3ರಂದು ಹೊರಡಿಸಿರುವ ಆದೇಶದ ಪ್ರತಿಯು ಈ ದಿನ.ಕಾಮ್‌ಗೂ ಲಭ್ಯವಾಗಿದ್ದು, ಆದೇಶದಲ್ಲಿ, ‘ಪ್ರಜ್ಞಾವಂತ ನಾಗರಿಕರು, ಬೆಳ್ತಂಗಡಿ ಎಂಬ ಹೆಸರಿನಲ್ಲಿ ತಾಲೂಕಿನಾದ್ಯಂತ ಹಾಕಲಾದ ಸೌಜನ್ಯ ಪರ ಬ್ಯಾನರ್ ತೆರವು ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿತ್ತು. ದೂರಿನಲ್ಲಿ ಕು. ಸೌಜನ್ಯ ಪ್ರಕರಣದ ತೀರ್ಪನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ನಿಟ್ಟಿನಲ್ಲಿ, ಯಾರು ಯಾರನ್ನೋ ಆರೋಪಿತರನ್ನಾಗಿ ಬಿಂಬಿಸಿಕೊಂಡು, ಧರ್ಮ ಧರ್ಮಗಳ ನಡುವೆ ಒಡಕು ಉಂಟುಮಾಡಲಾಗುತ್ತಿದೆ. ಇದರಿಂದಾಗಿ ಸಮಾಜದಲ್ಲಿ, ಅಶಾಂತಿ ಉಂಟಾಗಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ, ಕಾನೂನುಬಾಹಿರವಾಗಿ ಅಳವಡಿಸಿರುವ ಸೌಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಫ್ಲೆಕ್ಸ್‌ಗಳನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿತ್ತು’ ಎಂದು ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಸೂಚನೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು, ಬೆಳ್ತಂಗಡಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೂ ನಿರ್ದೇಶನ ನೀಡಿದ್ದರು. ಹೀಗಾಗಿ, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಯ ಪಿಡಿಓಗಳು ‘ಸೌಜನ್ಯಪರ’ ಬ್ಯಾನರ್ ತೆರವು ಮಾಡುವಂತೆ ಆದೇಶ ಹೊರಡಿಸಿದ್ದಾರೆ.