ಹಿಂದಿ ಹೇರಿಕೆ ವಿರುದ್ಧ, ಮರಾಠಿ ಭಾಷೆ ಉಳಿವು ಅಭಿಯಾನದ ಮೂಲಕ ಇತ್ತೀಚೆಗೆ ಠಾಕ್ರೆ ಸೋದರಸಂಬಂಧಿಗಳು ಒಂದಾಗಿದ್ದಾರೆ. ಇದೀಗ ಸುಮಾರು 13 ವರ್ಷಗಳ ಬಳಿಕ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಮುಂಬೈನಲ್ಲಿರುವ ಠಾಕ್ರೆಗಳ ಅಂತಸ್ತಿನ ನಿವಾಸವಾದ ಮಾತೋಶ್ರೀಗೆ ಆಗಮಿಸಿದ್ದಾರೆ. ತಮ್ಮ ಸೋದರಸಂಬಂಧಿ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಜನ್ಮದಿನ ಆಚರಣೆಗೆ ರಾಜ್ ಜೊತೆಯಾಗಿದ್ದಾರೆ.
ರಾಜ್ ಕೊನೆಯ ಬಾರಿಗೆ 2012ರಲ್ಲಿ ಬಾಳಾಸಾಹೇಬ್ ಠಾಕ್ರೆ ಅವರ ಮರಣದ ಸಮಯದಲ್ಲಿ ಉದ್ಧವ್ ನಿವಾಸವನ್ನು ಪ್ರವೇಶಿಸಿದ್ದರು. ಅದಾದ 13 ವರ್ಷಗಳ ನಂತರ ಈಗ ಮತ್ತೆ ಭೇಟಿ ನೀಡಿದ್ದಾರೆ. ರಾಜ್ ಜೊತೆಗೆ ಎಂಎನ್‌ಎಸ್ ನಾಯಕರಾದ ಬಾಲಾ ನಂದಗಾಂವ್ಕರ್ ಮತ್ತು ನಿತಿನ್ ಸರ್ದೇಸಾಯಿ ಇದ್ದರು.
ಇದನ್ನು ಓದಿದ್ದೀರಾ? ರಾಜಕೀಯ ಮೈತ್ರಿ ಬಗ್ಗೆ ರಾಜ್ ಠಾಕ್ರೆ ಜೊತೆ ಉದ್ಧವ್ ಮಾತುಕತೆ
ಇಬ್ಬರು ಸೋದರಸಂಬಂಧಿಗಳಾದ ರಾಜ್ ಮತ್ತು ಉದ್ಧವ್, ಮಾತೋಶ್ರೀ ಒಳಗೆ ಬಾಳಾಸಾಹೇಬ್ ಅವರ ಭಾವಚಿತ್ರದ ಬಳಿಕ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಹಾಗೆಯೇ ಇನ್ನೊಂದು ಚಿತ್ರದಲ್ಲಿ ಉದ್ಧವ್‌ಗೆ ರಾಜ್ ಹೂಗುಚ್ಛ ನೀಡುವುದು ಕಂಡುಬಂದಿದೆ. ಸದ್ಯ ಎರಡೂ ಚಿತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉದ್ಧವ್ ತಮ್ಮ ಕುಟುಂಬಸ್ಥರೊಂದಿಗೆ ಕೇಕ್ ಕತ್ತರಿಸುತ್ತಿರುವುದನ್ನು ಮತ್ತು ಶಿವಸೇನೆ ನಾಯಕರು ಹುಟ್ಟುಹಬ್ಬದ ಶುಭಾಶಯ ಕೋರುವ ವಿಡಿಯೋ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಈ ವಿಡಿಯೋದಲ್ಲಿ ರಾಜ್ ಕಾಣಿಸಿಕೊಂಡಿಲ್ಲ.
ಈ ಹಿಂದೆ ಮರಾಠಿ ವಿಜಯ ಕಾರ್ಯಕ್ರಮದಲ್ಲಿ ಠಾಕ್ರೆ ಸೋದರಸಂಬಂಧಿಗಳು ಒಂದೇ ವೇದಿಕೆಯನ್ನು ಸುಮಾರು ಎರಡು ದಶಕಗಳ ನಂತರ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ್ದ ಉದ್ಧವ್ ಮುಂಬರುವ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದರು.

“ನಾವು ಜೊತೆಯಾಗಿರಲು ಜೊತೆಗೆ ಬಂದಿದ್ದೇವೆ. ಮುಂಬೈ ನಾಗರಿಕ ಸಂಸ್ಥೆ ಮತ್ತು ಮಹಾರಾಷ್ಟ್ರದಲ್ಲಿ ನಾವು ಒಟ್ಟಾಗಿ ಅಧಿಕಾರವನ್ನು ಪಡೆಯುತ್ತೇವೆ” ಎಂದು ಮಾಜಿ ಸಿಎಂ ಉದ್ದವ್ ಹೇಳಿದ್ದರು. ಇನ್ನೊಂದೆಡೆ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಗೆ ಆಗದ ಕೆಲಸವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಡಿದ್ದಾರೆ ಎಂದು ರಾಜ್ ಠಾಕ್ರೆ ವ್ಯಂಗ್ಯವಾಡಿದ್ದರು.
2005ರಲ್ಲಿ ಮಾಲ್ವನ್ ವಿಧಾನಸಭಾ ಉಪಚುನಾವಣೆ ಪ್ರಚಾರದ ಸಮಯದಲ್ಲಿ ರಾಜ್ ಮತ್ತು ಉದ್ಧವ್ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಆಂತರಿಕ ಭಿನ್ನಾಭಿಪ್ರಾಯಗಳ ಕಾರಣ ರಾಜ್ ಠಾಕ್ರೆ ಶಿವಸೇನೆಯನ್ನು ತೊರೆದರು. 2005ರ ನವೆಂಬರ್‌ನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ ತಮ್ಮ ಚಿಕ್ಕಪ್ಪ ಸ್ಥಾಪಿಸಿದ ಶಿವಸೇನೆಗೆ ರಾಜೀನಾಮೆ ನೀಡುವುದಾಗಿ ಭಾವನಾತ್ಮಕವಾಗಿ ಹೇಳಿದ್ದರು. “ನಾನು ಕೇಳಿದ್ದು ಗೌರವ ಮಾತ್ರ. ನನಗೆ ಸಿಕ್ಕಿದ್ದು ಅವಮಾನ ಮಾತ್ರ” ಎಂದು ಠಾಕ್ರೆ ಹೇಳಿದ್ದರು. ಇದೀಗ ಮತ್ತೆ ರಾಜ್, ಉದ್ಧವ್ ಜೊತೆಯಾಗಿದ್ದಾರೆ.
