ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ಮೋದಿ ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೊತೆ ಹೋಲಿಸಿದ್ದಾರೆ.
ವಾಜಪೇಯಿ ಅವರ ನೇತೃತ್ವದಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಬಿಜೆಪಿಯ ನಡವಳಿಕೆಗೆ ತೀವ್ರ ವ್ಯತಿರಿಕ್ತವಾಗಿ ಇಂದಿನ ನಡವಳಿಕೆಯಿದೆ ಎಂದಿದ್ದಾರೆ. 1999ರ ಯುದ್ಧದ ನಂತರ ನಾಲ್ವರು ಸದಸ್ಯರ ಕಾರ್ಗಿಲ್ ಪರಿಶೀಲನಾ ಸಮಿತಿಯನ್ನು ಸ್ಥಾಪಿಸುವ ವಾಜಪೇಯಿ ಅವರ ನಿರ್ಧಾರವನ್ನು ಉಲ್ಲೇಖಿಸಿದ ರಮೇಶ್, “ಆ ವೇಳೆ ಪ್ರಧಾನಿ ಬೇರೆಯವರು, ಬಿಜೆಪಿಯೂ ಬೇರೆಯೇ ಆಗಿತ್ತು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮುಂಗಾರು ಅಧಿವೇಶನದ ವೇಳೆಯೇ ಮೋದಿ ವಿದೇಶ ಪ್ರವಾಸ: ವಿಪಕ್ಷಗಳ ಎದುರಿಸಲಾಗದೆ ಪಲಾಯನವೇ?
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಭಾರತ-ಪಾಕಿಸ್ತಾನ ಯುದ್ಧ ಮುಗಿದ ಮೂರು ದಿನಗಳ ನಂತರ, 1999ರ ಜುಲೈ 30ರಂದು ವಾಜಪೇಯಿ ಸರ್ಕಾರವು ನಾಲ್ಕು ಸದಸ್ಯರ ಕಾರ್ಗಿಲ್ ಪರಿಶೀಲನಾ ಸಮಿತಿಯನ್ನು ಸ್ಥಾಪಿಸಿತ್ತು ಎಂಬುದನ್ನು ನಾವು ಈಗ ನೆನೆಪಿಸಿಕೊಳ್ಳಬೇಕು. ಈ ಸಮಿತಿ ಅಧ್ಯಕ್ಷತೆಯನ್ನು ಕೆ. ಸುಬ್ರಹ್ಮಣ್ಯಂ ವಹಿಸಿದ್ದರು. ಅವರ ಮಗ ಈಗ ಭಾರತದ ವಿದೇಶಾಂಗ ಸಚಿವರಾಗಿದ್ದಾರೆ. ಸಮಿತಿಯು 1999ರ ಡಿಸೆಂಬರ್ 15ರಂದು ವರದಿಯನ್ನು ಸಲ್ಲಿಸಿತ್ತು” ಎಂದು ಪೋಸ್ಟ್ ಮಾಡಿದ್ದಾರೆ.
“2000ರ ಫೆಬ್ರವರಿಯಲ್ಲಿ ಸೂಕ್ತ ಪರಿಷ್ಕರಣೆಗಳೊಂದಿಗೆ ಸಂಸತ್ತಿನಲ್ಲಿ ವರದಿಯನ್ನು ಸಲ್ಲಿಸಲಾಗಿತ್ತು. ಅದರ ಬಗ್ಗೆಯೂ ಚರ್ಚಿಸಲಾಗಿತ್ತು. ಆದರೆ ಅದು ಬೇರೆ ಪ್ರಧಾನಿ, ಆಡಳಿತ ಪಕ್ಷವಾಗಿ ಬೇರೆ ಬಿಜೆಪಿ ಮತ್ತು ಬೇರೆ ರಾಜಕೀಯ ವಾತಾವರಣವಾಗಿತ್ತು” ಎಂದು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಸೋಮವಾರ ಲೋಕಸಭೆಯಲ್ಲಿ ಮತ್ತು ಮರುದಿನ ರಾಜ್ಯಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಇದಕ್ಕೂ ಒಂದು ದಿನ ಮುನ್ನ ಜೈರಾಮ್ ರಮೇಶ್ ಅವರು ಹೇಳಿಕೆಯನ್ನು ನೀಡಿದ್ದಾರೆ.
“2025ರ ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನ್ಯಾಯದ ವ್ಯಾಪ್ತಿಗೆ ತರಲಾಗಿಲ್ಲ. ವರದಿಯ ಪ್ರಕಾರ ಅವರು ಪೂಂಚ್ (ಡಿಸೆಂಬರ್ 2023) ಮತ್ತು ಗಂಗಾಗಿರ್ ಮತ್ತು ಗುಲ್ಮಾರ್ಗ್ (ಅಕ್ಟೋಬರ್ 2024) ನಲ್ಲಿ ನಡೆದ ಹಿಂದಿನ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದರು” ಎಂದೂ ಕಾಂಗ್ರೆಸ್ ನಾಯಕರು ವಿವರಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸದ ಪ್ರಧಾನಿ ನರೇಂದ್ರ ಮೋದಿಯವರನ್ನು ರಮೇಶ್ ಟೀಕಿಸಿದರು. ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಒಮ್ಮತದಿಂದ ಇರುವಲ್ಲಿ ಸರ್ಕಾರದ ಗಂಭೀರತೆಯನ್ನೂ ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಭಾರತ-ಪಾಕ್ ಕದನ ವಿರಾಮದ ಬಗ್ಗೆ 13 ಬಾರಿ ‘ತುತ್ತೂರಿ ಊದಿದ’ ಟ್ರಂಪ್; ಪ್ರಧಾನಿ ಪ್ರತಿಕ್ರಿಯೆ ಯಾವಾಗ: ಕಾಂಗ್ರೆಸ್ ಪ್ರಶ್ನೆ
“ಕಾಂಗ್ರೆಸ್ ಕೋರಿಕೆಯ ಮೇರೆಗೆ ಏಪ್ರಿಲ್ 22ರಂದು ಸರ್ವಪಕ್ಷ ಸಭೆಯನ್ನು ನಡೆಸಲಾಯಿತು. ಆದರೆ ಪ್ರಧಾನಿಯವರ ಬೇಡಿಕೆಯಂತೆ ಅಲ್ಲ, ರಕ್ಷಣಾ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಭೆಯಲ್ಲಿ ಗುಪ್ತಚರ ವೈಫಲ್ಯಗಳ ಕುರಿತು ಪ್ರಶ್ನೆಗಳನ್ನು ಎತ್ತಲಾಯಿತು” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ಬಗ್ಗೆಯೂ ರಮೇಶ್ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. “ಪಾಕಿಸ್ತಾನ ಸೇನಾ ಮುಖ್ಯಸ್ಥರಿಗೆ ಊಟಕ್ಕೆ ಹೇಗೆ ಆತಿಥ್ಯ ವಹಿಸಲಾಯಿತು” ಎಂದು ಪ್ರಶ್ನಿಸಿದರು.
“ಮೇ 10ರಿಂದ ಅಧ್ಯಕ್ಷ ಟ್ರಂಪ್ ಭಾರತದೊಂದಿಗಿನ ವ್ಯಾಪಾರವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕುವ ಮೂಲಕ ಆಪ್ ಸಿಂಧೂರ ಅನ್ನು ನಿಲ್ಲಿಸಿದ್ದೇನೆ ಎಂದು 26 ಬಾರಿ ಹೇಳಿಕೊಂಡಿದ್ದಾರೆ. ಹಾಗೆಯೇ ಐದು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿರಬಹುದು ಎಂದಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅದ್ಭುತ ಪಾಲುದಾರ ಎಂದು ಕರೆದಿದ್ದರು” ಎಂದು ಹೇಳಿದ್ದಾರೆ.
