ಹಲವಾರು ಕಾರ್ಮಿಕರು ಹದಿನೈದು, ಇಪ್ಪತ್ತು ವರ್ಷಗಳಿಂದ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಕಾರ್ಮಿಕರ ಕಾರ್ಡ್ ಮಾಡಿಸಿಲ್ಲ. ಅಲ್ಲದೆ ಯಾವುದೇ ರೀತಿಯ ಸೌಲಭ್ಯವನ್ನೂ ಪಡೆದುಕೊಂಡಿಲ್ಲ. ಸೌಲಭ್ಯಗಳ ಕುರಿತು ಮಾಹಿತಿ ಇಲ್ಲದೇ ಇರುವುದೇ ಇದಕ್ಕೆ ಕಾರಣ ಎಂದು ಕಟ್ಟಡ ಕಾರ್ಮಿಕರ ಸಂಘದ ಸಹ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.
ರಾಮನಗರದ ಸ್ಪೂರ್ತಿನಗರದಲ್ಲಿರುವ ಸ್ಪಂದನ ಸಂಸ್ಥೆಯಲ್ಲಿ ಭಾನುವಾರ ನಡೆದ ಕಟ್ಟಡ ಕಾರ್ಮಿಕರ ಹಕ್ಕುಗಳ ಕುರಿತ ಕಾರ್ಯಗಾರದಲ್ಲಿ ಮಾತನಾಡಿ, ಕಾರ್ಮಿಕರಿಗೆ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.
“ರಾಮನಗರದ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಕಾರ್ಮಿಕರ ಕಾರ್ಡ್ ಮಾಡಿಸಬೇಕೆಂದಿದ್ದರೂ ಕೂಡ ಅವರಿಗೆ ಉಚಿತವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬುದು ಸ್ಪಂದನ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಈ ಕಾರಣದಿಂದಾಗಿ ಕಟ್ಟಡ ಕಾರ್ಮಿಕರಿಗೆ ಅರಿವು ಮೂಡಿಸುವ ಸಲುವಾಗಿ ಕಟ್ಟಡ ಕಾರ್ಮಿಕರ ಹಕ್ಕುಗಳ ಕುರಿತ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು, ಸರ್ಕಾರದಿಂದ ಕಾರ್ಮಿಕರಿಗೆ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದ ವಿಧಾನ, ಬೇಕಾಗಿರುವ ದಾಖಲೆಗಳ ಕುರಿತು ಕಾರ್ಮಿಕರು ತಿಳಿದುಕೊಳ್ಳಬೇಕು” ಎಂದರು.

“ಕಾರ್ಮಿಕರಿಗೆ ಹಲವಾರು ಯೋಜನೆಗಳು ಇದ್ದು, ಇದನ್ನು ಕಾರ್ಮಿಕರಿಗಿಂತ ಹೆಚ್ಚಾಗಿ ಇತರರು ಬಳಸುತ್ತಿದ್ದಾರೆ. ಆದ್ದರಿಂದ ಕಾರ್ಮಿಕರು ಒಟ್ಟುಗೂಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕು ಹಾಗೂ ತಮಗಿರುವ ಹಕ್ಕುಗಳ ಕುರಿತು ಅರಿತುಕೊಳ್ಳಬೇಕು. ಜತೆಗೆ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ʼಸಮಾನ ಕೆಲಸಕ್ಕೆ ಸಮಾನ ವೇತನʼ ಎಂಬ ಕಲ್ಪನೆಯೇ ಇಲ್ಲ, ಮಹಿಳೆ ಮತ್ತು ಪುರುಷರಿಗೆ ಸಮಾನ ವೇತನ ದೊರೆಯುವಂತಾಗಬೇಕು. ಇದಕ್ಕಾಗಿ ನಾವೆಲ್ಲರೂ ಜೊತೆಯಾಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅರಸೀಕೆರೆ | ದೇಶದಲ್ಲೇ ರಾಜ್ಯದ ತಲಾ ಆದಾಯ ಹೆಚ್ಚಳಕ್ಕೆ ಪಂಚ ಗ್ಯಾರೆಂಟಿಗಳೇ ಕಾರಣ: ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಮಾಲಿನಿ ಅಂತರ್ಜನಂ, ಸುಪ್ರಿತಾ, ಕಾವ್ಯ, ಯಶೋಧ, ಜಯಶ್ರೀ, ಮಹಾಲಕ್ಷ್ಮಿ, ಮೇಘನಾ, ರಂಗಕರ್ಮಿ ಶ್ರೀನಿವಾಸ್ ಹಾಗೂ ರಾಮನಗರದ ವಿವಿಧ ಭಾಗಗಳಿಂದ ಬಂದಿದ್ದ ಐವತ್ತಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಕಾರ್ಮಿಕರು ಇದ್ದರು.