ಮೂವತ್ತು ವರ್ಷಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರದ ಸಹಕಾರದಿಂದ ಸುಪ್ರಿಂಕೋರ್ಟ್ ಒಳ ಮೀಸಲಾತಿ ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಒಂದು ವರ್ಷ ಗತಿಸಿದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೆ ಕಾಲಹರಣ ಮಾಡುತ್ತಿದೆ ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಆಯಾ ರಾಜ್ಯಗಳ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಿ ಎಂದರೂ ಸಚಿವ ಎಚ್.ಸಿ.ಮಹಾದೇವಪ್ಪ ಅವರ ಕುತಂತ್ರದಿಂದ ಸಿಎಂ ಅವರು ಜಾರಿಗೆ ಮೀನಮೇಷ ಎಣಿಸುತ್ತಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಆಗಸ್ಟ್ 1ಕ್ಕೆ ಒಳಮೀಸಲಾತಿ ಜಾರಿಗೆ ಆದೇಶಿಸಿ ಒಂದು ವರ್ಷ ಪೂರ್ಣವಾಗುತ್ತದೆ. ಸುಪ್ರಿಂಕೋರ್ಟ್ ಆದೇಶದಂತೆ ತೆಲಂಗಾಣ ಸೇರಿದಂತೆ ಕೆಲ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಒಳಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ನೋಡಿ ಸುಮ್ಮನಿರುವ ಬದಲು ಮಾದಿಗ ಸಮುದಾಯದ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕುʼ ಎಂದು ಒತ್ತಾಯಿಸಿದರು.
ʼನಾವು ಜಾತಿ ಜನಗಣತಿ ಮಾಡಿ ಎಂದು ಹೇಳಿಲ್ಲ. ಆದರೂ ಸರ್ಕಾರ ಮಾಡುತ್ತಿದೆ. ಇದುವರೆಗೆ ಕೇವಲ ಶೇ80ರಷ್ಟು ಜಾತಿ ಜನಗಣತಿ ಮಾತ್ರ ಮಾಡಲಾಗಿದೆ. ನಮ್ಮ ಪಾಲಿನ ಶೇ 6 ರಷ್ಟು ಒಳಮೀಸಲಾತಿ ಜಾರಿ ಮಾಡಿ ಎಂದರೂ ಸರ್ಕಾರಕ್ಕೆ ನಮ್ಮ ಕೂಗು ಕೇಳಿಸುತ್ತಿಲ್ಲ. ಹೀಗಾಗಿ ಒಕ್ಕೂಟದ ವತಿಯಿಂದ ಆಗಸ್ಟ್ 1ರಂದು ಬೆಳಿಗ್ಗೆ 11 ಗಂಟೆಗೆ ಅರೆಬೆತ್ತಲೆ ಮೆರವಣಿಗೆ ಮೂಲಕ ಸರ್ಕಾರದ ಶವಯಾತ್ರೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲಾಗುವುದುʼ ಎಂದರು.
ಇದನ್ನೂ ಓದಿ : ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ? ಚುನಾವಣಾ ಮಾನದಂಡಗಳೇನು?
ಮಾದಿಗ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ವಿಜಯಕುಮಾರ ಹಿಪ್ಪಳಗಾಂವ, ಕಮಲಾಕರ ಹೆಗಡೆ, ಜಾಫೆಟರಾಜ ಕಡ್ಯಾಳ, ವೀರಶೆಟ್ಟಿ, ರವೀಂದ್ರ ಸೂರ್ಯವಂಶಿ, ಜೈಶೀಲ ಮೇತ್ರೆ, ಡೇವಿಡ್ ವಾಡೆಕರ, ವಿಶಾಲ ಜೋಶಿ, ಹರೀಶ ಗಾಯಕವಾಡ, ಅಶೋಕ ಚಾಂಗಲೇರಾ, ದಯಾನಂದ ರೇಕುಳಗಿ, ಸಿದ್ರಾಮ ನಾವದಗೇರಿ, ಸನ್ನಿ ಹಿಪ್ಪಳಗಾಂವ, ಗುಂಡಪ್ಪ ಕೋಟೆ ಮತ್ತಿತರರು ಇದ್ದರು.