ರಾಜ್ಯದ ಕಾಂಗ್ರೆಸ್ ಸರ್ಕಾರವು ಬೂಟಾಟಿಕೆ ಮಾಡುವುದಿಲ್ಲ, ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಜನರು ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ನ ಜನಪರ ಯೋಜನೆಗಳನ್ನು ಬೆಂಬಲಿಸಿ ಕೈಜೋಡಿಸಿ ಜನರ ಅಭಿವೃದ್ಧಿಗಾಗಿ ದುಡಿಯೋಣ ಎಂದು ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ಹೇಳಿದರು.
ಕೋಲಾರ ತಾಲೂಕಿನ ಮಂಚಂಡಹಳ್ಳಿ ಗ್ರಾಮದಲ್ಲಿ ಶನಿವಾರ ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, “ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಹಿಂದೆ ಇದ್ದ ಸರ್ಕಾರಗಳಿಂದ ಅಭಿವೃದ್ಧಿ ಮಾಡಲು ಏಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಭಿವೃದ್ಧಿ ವಿಚಾರವನ್ನು ಮೆಚ್ಚಿ, ಗೌರವಯುತವಾಗಿ, ನ್ಯಾಯಯುತವಾಗಿ, ಸಂವಿಧಾನ ಬದ್ದವಾಗಿ, ನಿಮಗೆ ಸಲ್ಲಬೇಕಾದ ಎಲ್ಲ ರೀತಿಯ ಗೌರವವನ್ನು ನಾನು ಕಲ್ಪಿಸುತ್ತೇವೆ. ಜತೆಗೆ ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ ಸರಿಪಡಿಸುತ್ತೇನೆ” ಎಂದರು.
“ಕೋಲಾರ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಿದ್ದಾನೆ. ಜನಕ್ಕೆ ನನ್ನ ಶಕ್ತಿ ಮೀರಿ ನಾನು ನ್ಯಾಯ ದೊರಕಿಸುವೆ, ನಾನು ತಪ್ಪು ಕೆಲಸ, ಅನ್ಯಾಯ, ಮೋಸ ಭ್ರಷ್ಟಾಚಾರ ಮಾಡುವುದಿಲ್ಲ. ನಾನು ನೇರವಾಗಿಯೇ ಸತ್ಯವನ್ನೇ ಮಾತನಾಡುತ್ತೆನೆ. ಸುಳ್ಳು ಮಾತನಾಡಲ್ಲ. ನನ್ನ ಕೈಯಲ್ಲಾದರೆ ಸಹಕಾರ ಮಾಡುವೆ, ಇಲ್ಲದಿದ್ದರೆ ನನ್ನ ಪಾಡಿಗೆ ನಾನು ಇರುವೆ. ಆದರೆ ನನ್ನ ನಂಬಿದವರನ್ನು ನಾನು ಯಾವತ್ತಿಗೂ ಕೈ ಬಿಡುವುದಿಲ್ಲ. ಕಾಂಗ್ರೆಸ್ ಸರ್ಕಾರ ಇನ್ನೂ 3 ವರ್ಷ ಇರುತ್ತದೆ, ಮೂರು ವರ್ಷದಲ್ಲಿ ಅಭಿವೃದ್ಧಿಗೆ ಆಧ್ಯತೆ ನೀಡಲಾಗುತ್ತದೆ” ಎಂದರು.
ಎಂಎಲ್‌ಸಿ ಎಂ ಎಲ್ ಅನಿಲ್ ಕುಮಾರ್ ಮಾತನಾಡಿ, “ಈ ಭಾಗದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿತ್ತು. ಸಿ ಬೈರೇಗೌಡರನ್ನು ಪ್ರತಿ ಬಾರಿ ಬೆಂಬಲಿಸಿದ್ದಾರೆ. ಅದೇ ರೀತಿಯಲ್ಲಿ ಅವರ ಮಗ ಕಂದಾಯ ಸಚಿವ ಕೃಷ್ಣಬೈರೇಗೌಡರು ಕಾಂಗ್ರೆಸ್ ಸೇರಿ ರಾಜ್ಯದಲ್ಲಿ ದೊಡ್ಡ ಜವಾಬ್ದಾರಿ ನಿಭಾಯಿಸಿದ್ದಾರೆ. ನೀವೆಲ್ಲರೂ ತವರು ಮನೆಗೆ ಬಂದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೀರ. ಒಂದೇ ಕುಟುಂಬದವರು ಇದ್ದಂತೆ ಪಟ್ಟಣ ಪಂಚಾಯಿತಿ ಚುನಾವಣೆ ಬಂದಿದೆ. ಒಬ್ಬ ಪುಣ್ಯಾತ್ಮನಿಗೆ ಎರಡು ಬಾರಿ ಕ್ಷೇತ್ರದ ಜನತೆ ಮೂರನೇ ಸ್ಥಾನ ಕೊಟ್ಟಿದ್ದಾರೆ. ಜನ ಬುದ್ದಿ ಕಲಿಸಿದ್ದಾರೆ. ಜನತಾ ಪಕ್ಷ ಕಟ್ಟಿದವರು ಹಳ್ಳಿಗಳಲ್ಲಿ ಇರುವ ನಿಮ್ಮಂತವರು ಮಾತ್ರವೇ ಇತ್ತು. ಯಾರೋ ಬಂದು ಯಾಜಮಾನತನ ಮಾಡಲು ಹೊರಟಿದ್ದಾರೆ. ಮೈತ್ರಿ ಪಕ್ಷಗಳ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದರು.
“ಈಗಾಗಲೇ ಸುಳದೇನಹಳ್ಳಿ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಹೈಮಾಸ್ಕ್ ಲೈಟ್, ಮಡಿವಾಳ ಸುಳದೇನಹಳ್ಳಿ ಮಂಚಂಡಹಳ್ಳಿ ರಸ್ತೆಗೆ 3 ಕೋಟಿ ಅಭಿವೃದ್ಧಿ ಮಾಡಲಾಗುತ್ತದೆ. ಡಬಲ್ ರಸ್ತೆಗೆ ಎಂಟು ಕೋಟಿ, ಪೆರ್ಜೇನಹಳ್ಳಿ 1.50 ಕೋಟಿ, ಕ್ಯಾಲನೂರು ಕ್ರಾಸ್ ಅಭಿವೃದ್ಧಿಗೆ 1.40 ಕೋಟಿ ರೂಪಾಯಿ ಸೇರಿದಂತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸರ್ಕಾರದ ನಿರ್ಲಕ್ಷ್ಯದಿಂದ ಅನಾಥವಾದ ಗಂಗೂಬಾಯಿ ಹಾನಗಲ್ ವಾಸವಿದ್ದ ಮನೆ
ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಮಾತನಾಡಿ, “ಪಟ್ಟಣ ಪಂಚಾಯತ್ ಚುನಾವಣೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಹಾದಿಯಾಗಿ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳು ಕೈ ಜೋಡಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಸಬೇಕಾಗಿದೆ. ಚುನಾವಣೆಯಲ್ಲಿ ಜನರು ಮನಸ್ಸು ಮಾಡಿ ಬದಲಾವಣೆ ತಂದಾಗ ಮಾತ್ರ ಗ್ರಾಮಗಳು ವಾರ್ಡ್‌ಗಳು ಅಭಿವೃದ್ಧಿಯಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಉರಟ ಅಗ್ರಹಾರ ಚೌಡರೆಡ್ಡಿ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮುನಿಯಪ್ಪ, ಉದಯಶಂಕರ್, ಮೈಲಾಂಡಹಳ್ಳಿ ಮುರಳಿ, ಪೇರ್ಜೆನಹಳ್ಳಿ ನಾಗೇಶ್, ರಮೇಶ್, ಮಂಚಂಡಹಳ್ಳಿ ಗ್ರಾಮಸ್ಥರು ಇದ್ದರು.