ಸಾಹಿತಿ ಚೆನ್ನಣ್ಣ ವಾಲೀಕಾರ ಬಂಡಾಯ ಹಾಗೂ ದಲಿತ ಸಂವೇದನೆಯ ಗಟ್ಟಿ ಧ್ವನಿಯಾಗಿದ್ದರು ಎಂದು ಔರಾದ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾಲಾಜಿ ಅಮರವಾಡಿ ಅಭಿಪ್ರಾಯಪಟ್ಟರು.
ಭಾಲ್ಕಿ ತಾಲೂಕಿನ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಡಾ.ಚೆನ್ನಣ್ಣ ವಾಲೀಕಾರ್ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಬಂಡಾಯ ಧ್ವನಿಯಾಗಿದ್ದ ಚೆನ್ನಣ್ಣ ವಾಲೀಕಾರ್ ಅವರು ಕನ್ನಡ ಸಾಹಿತ್ಯಕ್ಕೆ ಅಮೋಘ ಕಾಣಿಕೆಯಿತ್ತವರು. ವಾಲೀಕಾರ್ ಅವರು ಸುಮಾರು 50ಕ್ಕೂ ಅಧಿಕ ಕೃತಿಗಳು ಪ್ರಕಟವಾಗಿವೆ. ಬುದ್ಧನ ಶಾಂತಿ, ಮಾರ್ಕ್ಸ್‌ನ ಕ್ರಾಂತಿ, ಅಂಬೇಡ್ಕರ್‌ನ ಹೋರಾಟದ ಗುಣಗಳು ಆ ಕೃತಿಗಳಲ್ಲಿ ಕಾಣಬಹುದು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ವಾಲೀಕಾರ ಅವರು ಅಜ್ಜಿಯ ಬಳಿ ಜನಪದ ಕಥೆಗಳು, ಹಾಡುಗಳು ಕಲಿತವರು. ಹನುಮಾನ ದೇವಸ್ಥಾನದಲ್ಲಿ ನಡೆಯುವ ಭಜನೆಯ ದಟ್ಟ ಪ್ರಭಾವದಿಂದ ಅವರಲ್ಲಿ ಬಂಡಾಯ ಧ್ವನಿ ಮೂಡಲು ಸಾಧ್ಯವಾಗಿದೆʼ ಎಂದು ತಿಳಿಸಿದರು.
ʼಕರ್ನಾಟಕದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಸ್ಥಾಪನೆಗೆ ಪ್ರಮುಖ ಕಾರಣರಾದ ವಾಲೀಕಾರ್ ಅವರಿಗೆ ಶೋಷಣೆ, ಕ್ರೌರ್ಯ, ಹಿಂಸೆ ಮತ್ತು ಅವಮಾನಗಳನ್ನು ಮೆಟ್ಟಿ ಬಂದಿರುವುದು ಮರೆಯುವಂತಿಲ್ಲ. ಜೋಗತಿ, ಕರಿತಲೆ ಮಾನವನ ಜೀಪದ, ಬೆಳ್ಯ, ಟೊಂಕದ ಕೆಳಗಿನ ಜನ, ಕುತ್ತದಲ್ಲಿ ಕುದ್ದವರ ಕಥೆಗಳು ಹೀಗೆ ಹತ್ತಾರು ಕೃತಿಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವುದು ವಿಶೇಷʼ ಎಂದು ತಿಳಿಸಿದರು.
ಚೆನ್ನಣ್ಣ ವಾಲೀಕರ ಅವರು ʼವ್ಯೋಮಾವ್ಯೋಮʼ ಕೃತಿ ಮೂಲಕ ಅವರು ಕನ್ನಡ ಸಾಹಿತ್ಯ ಅಗಾಧವಾದ ಕೊಡುಗೆ ನೀಡಿದವರು. 1,030 ಪುಟಗಳ ಈ ಕೃತಿಯಲ್ಲಿ ಅಲ್ಪವಿರಾಮ, ಪೂರ್ಣವಿರಾಮ ಇಲ್ಲದೇ ಸಾಹಿತ್ಯವಿರುವ ಕೃತಿಯಾಗಿದ್ದು, 21ನೇ ಶತಮಾನದ ಕನ್ನಡದ ಮಹಾನ ಕೃತಿ ಎಂದು ಶ್ರೀಕೃಷ್ ಭಟ್ ಅಭಿಪ್ರಾಯಪಟ್ಟಿದ್ದರುʼ ಎಂದು ಸ್ಮರಿಸಿದರು.
ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಮಕ್ತುಂಬಿ ಎಂ. ತನಾಡಿ, ʼಯುವ ಸಮೂಹ ಸಾಹಿತ್ಯ, ಸಂಸ್ಕೃತಿ ಆಸಕ್ತಿ ಬೆಳೆಸಿಕೊಂಡು ಮೊಬೈಲ್‌ನಿಂದ ದೂರ ಉಳಿದು ಸುಂದರ ಬದುಕು ರೂಪಿಸಿಕೊಳ್ಳಬೇಕು. ಶಬನಮ್ ಟ್ರಸ್ಟ್ ವತಿಯಿಂದ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಆಯೋಜಿಸಲಾಗುತ್ತಿದೆʼ ಎಂದರು.
ಇದನ್ನೂ ಓದಿ : ಬೀದರ್ | ಪ್ರೇಕ್ಷಕರ ಮನಸೂರೆಗೊಂಡ ʼರಮಾಬಾಯಿ ಅಂಬೇಡ್ಕರ್ʼ ನಾಟಕ
ಕಾರ್ಯಕ್ರಮದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಡಳಿತಾಧಿಕಾರಿ ಮೋಹನರೆಡ್ಡಿ, ಶಿಕ್ಷಕ ಶಿವಪ್ರಕಾಶ್ ಕುಂಬಾರ್, ಬಿಸಿಎ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸುಧಾಕರ ಬಿರಾದಾರ, ಸಂಯೋಜಕ ಬಾಲಾಜಿ ವಲ್ಲೂರೆ, ಚಿಂತಕ ಜಗನ್ನಾಥ ಮೂಲಗೆ, ಶಿಕ್ಷಕ ಧನರಾಜ ಮಾನೆ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.