ಮೈಸೂರಿನ ಹೊರ ವಲಯದಲ್ಲಿ ಮಾದಕ ವಸ್ತು ತಯಾರಿಸುತಿದ್ದ ಘಟಕದ ಮೇಲೆ ಭಾನುವಾರ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದ ಪ್ರಕರಣದಲ್ಲಿ, ಕರ್ತವ್ಯಲೋಪ ಎಸಗಿರುವ ನರಸಿಂಹರಾಜ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೈಸೂರಿನಲ್ಲಿ ಮಾದಕ ವಸ್ತು ತಯಾರಿಕಾ ಘಟಕ ನಡೆಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರು, ಮಂಗಳೂರು, ಬೆಳಗಾವಿ ಬಳಿಕ ಮೈಸೂರಿನಲ್ಲಿ ಡ್ರಗ್ಸ್ ಜಾಲದ ನಂಟು ಬಯಲಾಗಿದೆ. ಖಚಿತ ಸುಳಿವಿನ ಮೇರೆಗೆ ಮಹಾರಾಷ್ಟ್ರ ಪೊಲೀಸರು ಎಂಡಿಎಂಎ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 13 ಕೆಜಿ ಎಂಡಿಎಂಎ, 50 ಕೆಜಿ ದ್ರವರೂಪದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸರಿ ಸುಮಾರು 100 ಕೋಟಿ ಎನ್ನಲಾಗಿದೆ.
ಮೈಸೂರಿನ ತಯಾರಿಕಾ ಘಟಕದಿಂದ ಮಹಾರಾಷ್ಟ್ರಕ್ಕೆ ಡ್ರಗ್ಸ್ ಪೂರೈಕೆಯಾಗಿತಿತ್ತು. ಪೊಲೀಸರು ಈ ಸಂಭಂದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಸ್ಥಳೀಯರಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರ ಮೂಲದವರೆನ್ನಾಲಾಗಿದೆ. ಮಹಾರಾಷ್ಟ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಡ್ರಗ್ಸ್ ಪೆಡ್ಲರ್ ಮೈಸೂರಿನಿಂದ ಡ್ರಗ್ಸ್ ಪೂರೈಕೆಯಾಗುತ್ತಿರುವುದರ ಬಗ್ಗೆ ಮಾದಕ ವಸ್ತು ನಿಗ್ರಹ ದಳದ ಪೊಲೀಸರಿಗೆ ಮಾಹಿತಿ ನೀಡಿದ್ದನೆನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿಭಿನ್ನ ಸಾಹಿತ್ಯಕ್ಕೆ ಓದುಗರ ಪಡೆ ಇದ್ದೇ ಇರುತ್ತದೆ : ಸುತ್ತೂರು ಶ್ರೀ
ನರಸಿಂಹರಾಜ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ರನ್ನು ಕರ್ತವ್ಯಲೋಪದಡಿ ಅಮಾನತ್ತುಗೊಳಿಸಿ, ಸದರಿ ಸ್ಥಾನಕ್ಕೆ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಶಬ್ಬೀರ್ ಹುಸೇನ್ ಅವರನ್ನು ಪ್ರಬಾರ ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಲಾಗಿದೆ.