ತುರುವೇಕೆರೆ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮಲ್ಲಾಘಟ್ಟ ಕೆರೆಯನ್ನು ಸ್ವಚ್ಚಗೊಳಿಸಲು ಇದು ಸಕಾಲವಾಗಿದೆ. ಈ ಕೆರೆಯನ್ನು ದೇವಗೆರೆ ಎಂದು ಕರೆಯಲಾಗುತ್ತದೆ. ಇಲ್ಲಿ ಜಿಲ್ಲೆ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ದೇವರುಗಳಿಗೆ ಪುಣ್ಯ ಸ್ನಾನ ಮಾಡಿಸುವ ಸಲುವಾಗಿ ಇಲ್ಲಿಗೆ ಕರೆತರಲಾಗುತ್ತದೆ. ಈ ಕೆರೆಯಲ್ಲಿ ಮಿಂದರೆ (ಸ್ನಾನ) ಮಾಡಿದರೆ ಹಾಗೂ ಕೆರೆಯ ಅಧಿದೇವರಾದ ಗಂಗಾಧರೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರೆ ಮಕ್ಕಳಾಗದವರಿಗೆ ಮಕ್ಕಳಾಗುವುದು ಅಲ್ಲದೇ ಅವರ ಇಷ್ಟಾರ್ಥಗಳು ಈಡೇರುವುವು ಎಂಬ ನಂಬಿಕೆಯೂ ಇದೆ.
ಈ ಎಲ್ಲಾ ವೈಶಿಷ್ಠ್ಯಗಳಿರುವುದರಿಂದ ಇಲ್ಲಿ ಸ್ನಾನ ಮಾಡುವವರು, ದೇವರಿಗೆ ಪುಣ್ಯ ಸ್ನಾನ ಮಾಡಿಸುವುದು ಸಾಮಾನ್ಯವಾಗಿದೆ. ಸ್ನಾನವಾದ ನಂತರ ದೇವರಿಗೆ ಉಡಿಸಿದ ಬಟ್ಟೆಗಳು, ಅಥವಾ ಸ್ನಾನ ಮಾಡಿದವರ ಬಟ್ಟೆಗಳನ್ನು ಈ ನೀರಿನಲ್ಲಿ ಹರಿಯಬಿಡುವುದು ವಾಡಿಕೆಯಾಗಿದೆ. ಇದರಿಂದಾಗಿ ಕೆರೆಯಲ್ಲಿ ಬಟ್ಟೆಗಳ ರಾಶಿ ಇದೆ. ಅಲ್ಲದೇ ದೇವರಿಗೆ ಕಟ್ಟಲಾಗಿರುವ ಬಾಳೆ ಕಂದು, ಮಾವಿನ ಎಲೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳೂ ಸಹ ಈ ಕೆರೆಯ ಪಾಲೇ ಆಗುತ್ತಿದೆ.
ಇದರಿಂದಾಗಿ ಕೆರೆ ಕಲುಷಿತಗೊಂಡಿದೆ. ಈಗಾಗಲೇ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹೇಮಾವತಿ ನೀರಿನ ಹರಿವು ಹೆಚ್ಚಾಗಿ ಈ ಕೆರೆಗೆ ಹೆಚ್ಚು ನೀರು ಬಿಡಲಾಗುತ್ತದೆ. ಅಲ್ಲದೇ ಮಳೆಗಾಲ ಪ್ರಾರಂಭವಾದರೆ ಈ ಕೆರೆಗೆ ಸಹಜವಾಗಿ ನೀರಿನ ಹರಿವು ಹೆಚ್ಚಿ ಕೋಡಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ಕೆರೆಯ ಒಳಗಿರುವ ಬಂಡೆಗಳ ಮೇಲೆ ನಿಂತಿರುವ ಸಾಕಷ್ಟು ಕಲ್ಮಷಗಳನ್ನು, ಕಸಗಳನ್ನು ಈಗ ತೆಗೆಯಲು ಸಕಾಲವಾಗಿದೆ. ಈಗ ಅ ಕಷ್ಮಲಗಳೆಲ್ಲಾ ಕಣ್ಣಿಗೆ ಕಾಣುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ನೀರು ಹರಿದರೆ ಈ ಎಲ್ಲಾ ಕಷ್ಮಲಗಳು ನೀರಿನೊಳಗೆ ಹುದಗಿ ಹೋಗುತ್ತದೆ.
ಈಗಲೇ ಈ ಕೆರೆಗೆ ಆನೇಕೆರೆ ಗ್ರಾಮ ಪಂಚಾಯಿತಿ ಕೆರೆಗೆ ಯಾವುದೇ ಕಷ್ಮಲಗಳನ್ನು ಹಾಕಬಾರದು ಹಾಗೂ ಕೆರೆಯಲ್ಲಿ ಯಾರೂ ಈಜಬಾರದು ಎಂದು ಸೂಚನಾ ಫಲಕ ಹಾಕಿಸುವುದು ಉತ್ತಮ. ಕೆರೆ ಕೋಡಿ ಆದ ವೇಳೆ ಸಾವಿರಾರು ಮಂದಿ ಇಲ್ಲಿ ರುದ್ರ ರಮಣೀಯ ದೃಶ್ಯ ನೋಡಲು ಆಗಮಿಸುವರು. ಈ ವೇಳೆ ಹಲವಾರು ಮಂದಿ ಮಹಿಳೆಯರು, ಮಕ್ಕಳು ಪುರುಷರು ಎಂಬ ಭೇಧಭೇವವಿಲ್ಲದೇ ಕೆರೆಯೊಳಗೆ ಈಜುತ್ತಾರೆ. ಈ ವೇಳೆ ಹಲವಾರು ಮಂದಿ ಕೆರೆಯ ಒಳಗಿರುವ ಹೂಳಿನಲ್ಲಿ ಹೂತು, ಬಟ್ಟೆಗಳಿಗೆ ದೇಹ ಸುತ್ತಿಕೊಂಡು ಮೃತಪಟ್ಟಿರುವ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಸಲುವಾಗಿ ಎಚ್ಚರಿಕೆಯ ಫಲಕವನ್ನು ಆನೇಕರೆ ಗ್ರಾಮ ಪಂಚಾಯಿತಿ ಅಳವಡಿಸುವುದು ಉತ್ತಮವಾಗಿದೆ.
ಕಸ ವಿಲೇವಾರಿ ಮಾಡಲು ಮತ್ತು ಸೂಚನಾ ಫಲಕಗಳನ್ನು ಅಳವಡಿಸಲು ಇದು ಸಕಾಲವಾಗಿದೆ. ಮೈ ಮರೆತರೆ ನೀರು ಕಲುಷಿತಗೊಳ್ಳಲಿದೆ. ಇತ್ತ ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಅನಿವಾರ್ಯವಾಗಲಿದೆ. ಕೂಡಲೇ ಆನೇಕೆರೆ ಗ್ರಾಮ ಪಂಚಾಯಿತಿ ಕಾರ್ಯೋನ್ಮುಖವಾಗಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.