ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿರುವ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮೂಲಕ ರೈತರಿಗೆ ಪೂರೈಸಬೇಕಾಗಿದ್ದ ಸುಮಾರು 79 ಟನ್ ಯೂರಿಯಾ ಗೊಬ್ಬರ ಕಳ್ಳಸಂತೆ ಮೂಲಕ ಮಾರಾಟವಾಗಿದೆ ಎಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ರೈತ ಸಂಘ ಹಾಗೂ ಹಸಿರು ಸೇನೆಯ ಯುವ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸಾಜೀದ್ ಹುಸೇನ್ ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಾಖಲೆಗಳ ಪ್ರಕಾರ ಸಂಘಕ್ಕೆ 79 ಟನ್ ಗೊಬ್ಬರ ಹಂಚಿಕೆಯಾಗಿತ್ತು. ಆದರೆ ಒಂದು ಚೀಲವು ಗೋದಾಮಿಗೆ ತಲುಪಿಲ್ಲ. ಸಂಘದ ಸದಸ್ಯರೂ ಸೇರಿದಂತೆ ಗ್ರಾಮದ ರೈತರಿಗೂ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ, ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸೇರಿಕೊಂಡು ಗೊಬ್ಬರವನ್ನು ಗುಪ್ತವಾಗಿ ಮಾರಾಟ ಮಾಡಿದ್ದಾರೆ. ರೈತರು ಕೇಳಿದಾಗ ಗೊಬ್ಬರ ಇಲ್ಲ ಎಂಬ ಸುಳ್ಳು ಉತ್ತರ ನೀಡಲಾಗಿದೆ ಎಂದು ಆರೋಪಿಸಿದರು.
ಅಂದಾಜು 2000 ಚೀಲಗಳಷ್ಟು ಗೊಬ್ಬರ ಕಳ್ಳಸಂತೆ ಮೂಲಕ ಹರಾಜು ಮಾರಾಟ ಮಾಡಿದ್ದಾರೆ. ಇದರಿಂದ ಸಾವಿರಾರು ಎಕರೆ ಬೆಳೆದ ರೈತರು ಬೆಳೆ ಹಾಳಾಗುವ ಸ್ಥಿತಿಗೆ ತಲುಪಿವೆ. ಗೊಬ್ಬರದ ಲಭ್ಯತೆ ಇಲ್ಲದ ಕಾರಣ ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಸಂಘದ ಕಾರ್ಯದರ್ಶಿಗಳನ್ನು ಅಮಾನತುಗೊಳಿಸಿ ತಕ್ಷಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಇತ್ತೀಚಿಗೆ ಗೊಬ್ಬರ ವಿತರಣೆ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಕ್ರಿಮಿನಾಶಕ ಲಿಕ್ವಿಡ್ ಖರೀದಿಸಿದರೆ ಮಾತ್ರ ಗೊಬ್ಬರ ನೀಡಲಾಗುತ್ತದೆ ಎಂದು ರೈತರ ಮೇಲೆ ಒತ್ತಡ ಹಾಕುತ್ತಿದ್ದಾದರೂ ಅಕ್ರಮ ದಬ್ಬಾಳಿಕೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಸವರ್ಣೀಯರಿಂದ ಅಡ್ಡಿ
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸಂದೀಪ, ಸಂಗಮೇಶ, ಪ್ರಸನ್ನ ಗೌಡ, ಭೀಮರೆಡ್ಡಿ, ಸಂಗಪ್ಪ ಗೌಡ ಹಾಗೂ ಕಿಶನರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
