ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಿದ ಪ್ರಕರಣದ (ಸಂಖ್ಯೆ 39/2025 ) ಸಾಕ್ಷಿ ದೂರುದಾರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಜಾಗವನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳಿಗೆ ಸೋಮವಾರ ತೋರಿಸಿದರು.
ಮುಖಕ್ಕೆ ಮುಸುಕು ಹಾಕಿದ್ದ ಸಾಕ್ಷಿ ದೂರುದಾರನನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಎಸ್ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನ ಘಟ್ಟದ ಬಳಿಗೆ ಕರೆತಂದರು.
ನೇತ್ರಾವತಿ ನದಿ ಪಕ್ಕದಲ್ಲೇ ಇರುವ ಕಾಡಿನೊಳಗೆ ಎಸ್ಐಟಿ ಅಧಿಕಾರಿಗಳನ್ನು ಸಾಕ್ಷಿ ದೂರುದಾರ ಕರೆದೊಯ್ದ. ಆತನ ಜೊತೆಗೆ ಮೂವರು ವಕೀಲರೂ ಸ್ಥಳಕ್ಕೆ ತೆರಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?
ಸಾಕ್ಷಿ ದೂರುದಾರನನ್ನು ಮಂಗಳೂರಿನ ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ಸೋಮವಾರ ಎಸ್ಐಟಿ ಎದುರು ಹಾಜರಾದ ಆತನನ್ನು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಕರೆದೊಯ್ದರು. ಬಳಿಕ ಅಲ್ಲಿಂದ ನೇತ್ರಾವತಿ ಸ್ನಾನಘಟ್ಟಕ್ಕೆ ಬಿಗಿ ಭದ್ರತೆಯೊಂದಿಗೆ ಕರೆದೊಯ್ದರು.
ಎಸ್ಐಟಿಯ ಅಧಿಕಾರಿಗಳಾದ ಎಂ ಎನ್ ಅನುಚೇತ್, ಜಿತೇಂದ್ರ ಕುಮಾರ್ ದಯಾಮ, ಸಿ ಎ ಸೈಮನ್ ಮೊದಲಾದ ಅಧಿಕಾರಿಗಳು ಇದ್ದರು.
ಎಸ್‌ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ್ ಮೊಹಾಂತಿ ಅವರು ಮಂಗಳೂರಿಗೆ ಭಾನುವಾರ ಭೇಟಿ ನೀಡಿ ತನಿಖೆಯ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದರು.