ಭಾರತದ 19 ವರ್ಷದ ಚೆಸ್ ತಾರೆ ನಾಗ್ಪುರದ ದಿವ್ಯಾ ದೇಶಮುಖ್ ಇತಿಹಾಸ ಬರೆದಿದ್ದಾರೆ. ಸೋಮವಾರ ಜಾರ್ಜಿಯಾದ ಬಟುಮಿಯಲ್ಲಿ ನಡೆದ FIDE ಮಹಿಳಾ ವಿಶ್ವಕಪ್ 2025 ರಲ್ಲಿ ಕೊನೇರು ಹಂಪಿ ಅವರನ್ನು ಸೋಲಿಸಿ ವಿಶ್ವಚಾಂಪಿಯನ್ ಆಗಿದ್ದಾರೆ. ಹಾಗೆಯೇ ಈ ಪ್ರಶಸ್ತಿಯನ್ನು ಗಳಿಸಿದ ನಾಲ್ಕನೇ ಭಾರತೀಯ ಮಹಿಳೆ ಮತ್ತು ದೇಶದ 88ನೇ ಗ್ರ್ಯಾಂಡ್ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶನಿವಾರ ಮತ್ತು ಭಾನುವಾರ ನಡೆದ ಎರಡು ಪಂದ್ಯಗಳು ಡ್ರಾ ಆಗಿದ್ದು ನಂತರ ದಿವ್ಯಾ ಗೆಲುವು ಕಂಡಿದ್ದಾರೆ. ಸೋಮವಾರ, ಟೈ-ಬ್ರೇಕರ್ನಲ್ಲಿ ಮತ್ತೆ ಡ್ರಾಗೊಂಡಿದೆ. ಆದರೆ ರಿವರ್ಸ್ ಗೇಮ್ನಲ್ಲಿ, ದಿವ್ಯಾ ಎರಡು ಬಾರಿಯ ವಿಶ್ವಚಾಂಪಿಯನ್ ಆದ ಕೊನೇರು ಹಂಪಿ ಅವರನ್ನು 2.5-1.5 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟ್ರೋಫಿಯ ಜೊತೆಗೆ ದಿವ್ಯಾ $50,000 ಬಹುಮಾನ ಮೊತ್ತವನ್ನು ಕೂಡಾ ತಮ್ಮದಾಗಿಸಿಕೊಂಡಿದ್ದಾರೆ.
Divya’s hug to her mom says everything ❤️#FIDEWorldCup @DivyaDeshmukh05 pic.twitter.com/jeOa6CjNc1
— International Chess Federation (@FIDE_chess) July 28, 2025
ಇದನ್ನು ಓದಿದ್ದೀರಾ? ವಸ್ತ್ರ ಸಂಹಿತೆ ಉಲ್ಲಂಘನೆ: ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಕೂಟದಿಂದ ಅನರ್ಹ
ಈ ಬಗ್ಗೆ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಕೇವಲ 19 ವರ್ಷ ವಯಸ್ಸಿನ ದಿವ್ಯಾ ದೇಶಮುಖ್ 2025ರ FIDE ಮಹಿಳಾ ವಿಶ್ವಕಪ್ ವಿಜೇತೆ” ಎಂದು ಬರೆದಿದ್ದಾರೆ. ಇತಿಹಾಸ ಸೃಷ್ಟಿಸಿದ ನಂತರ ದಿವ್ಯಾ ತನ್ನ ತಾಯಿಯನ್ನು ತಬ್ಬಿಕೊಂಡಿದ್ದಾರೆ. ಈ ವಿಡಿಯೋವನ್ನು FIDE ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ತನಗಿಂತ ದುಪ್ಪಟ್ಟು ವಯಸ್ಸಿನ ಎದುರಾಳಿಯ ವಿರುದ್ಧ ಜಯಗಳಿಸಿದ ಬಳಿಕ ಮಾತನಾಡಿದ ದಿವ್ಯಾ, “ನನಗೆ ಗೆಲುವು ಕಂಡಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲೂ ಸಮಯ ಬೇಕಾಗಿದೆ. ಗ್ರ್ಯಾಂಡ್ಮಾಸ್ಟರ್ ಪ್ರಶಸ್ತಿ ಸಿಕ್ಕಿದ್ದು ಅದೃಷ್ಟ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
