ಭಾರತದಲ್ಲಿ ಕೃಷಿ ಎಂದರೆ ಮುಂಗಾರು ಮಾರುತದೊಂದಿಗಿನ ಜೂಜಾಟ. ಈ ಜೂಜಾಟಕ್ಕೆ ಸಿಕ್ಕ ರೈತರ ಬದುಕು ಕಳೆದೆರಡು ತಿಂಗಳ ನೆರೆ ಮತ್ತು ಬರದಿಂದ ಮೂರಾಬಟ್ಟೆಯಾಗಿದೆ. ಇದರಿಂದ ಬದುಕಲು ಅವಶ್ಯಕವಾದ ಆಹಾರ ಬೆಳೆಗಳು ನಾಶವಾಗಿವೆ. ಇದು ಕೇವಲ ಬೆಳೆ ಬೆಳೆಯುವ ರೈತನಿಗೆ ಮಾತ್ರವಲ್ಲ, ಉಣ್ಣುವ ಜನತೆಯ ಮೇಲೂ ಪರಿಣಾಮ ಬೀರಲಿದೆ ಎಂಬ ಎಚ್ಚರ ಎಲ್ಲರಿಗೂ ಇರಬೇಕಾಗುತ್ತದೆ.
ಜೂನ್ ಮೊದಲ ವಾರದಿಂದ ವಾಡಿಕೆಯಂತೆ ಆರಂಭವಾಗುವ ಮುಂಗಾರು ಮಳೆಯಿಂದಾಗಿ ಭೂಮಿ ತಂಪಾಗುತ್ತಿತ್ತು; ಕೃಷಿ ಚಟುವಟಿಕೆಯಿಂದ ಹಸಿರು ನಳನಳಿಸುತ್ತಿತ್ತು. ಆದರೆ ಈ ಬಾರಿಯ ಮುಂಗಾರು ಏರುಪೇರಾಗಿದೆ. ಆಗಸ್ಟ್ ಮೊದಲ ವಾರದಲ್ಲಿರಬೇಕಾದ ಮಳೆ-ಚಳಿ ವಾತಾವರಣ ಮರೆಯಾಗಿ ಬೇಸಿಗೆಯ ಬಿಸಿಲು ಬೆವರಿಳಿಸತೊಡಗಿದೆ.
ಜೂನ್ನಲ್ಲಿ ಬರಬೇಕಾದ ವಾಡಿಕೆಯ 199 ಮಿ.ಮೀಟರ್ ಮಳೆಗೆ ಬದಲಿಗೆ 87 ಮಿ.ಮೀಟರ್ ಮಳೆ ಬಿದ್ದಿದೆ. ಜುಲೈನಲ್ಲಿ ಬರಬೇಕಾದ 271 ಮಿ.ಮೀಟರ್ ಮಳೆಗೆ ಬದಲಾಗಿ 349 ಮಿ.ಮೀಟರ್ ಸುರಿದಿದೆ. ಆಗಸ್ಟ್ ನಲ್ಲಿ ಅದಕ್ಕಿಂತಲೂ ಅಧ್ವಾನ, 66 ಮಿ.ಮೀಟರ್ ಬದಲಿಗೆ 22.3 ಮಿ.ಮೀಟರ್ ಮಳೆಯಾಗಿ ಬೇಸಿಗೆಯ ಬಿಸಿ ವಾತಾವರಣ ಸೃಷ್ಟಿಸಿದೆ.
ಇದಕ್ಕೆ ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಕಾರಣ ಎಂದು ತಜ್ಞರು ಮತ್ತು ಸರ್ಕಾರ ಸಮಜಾಯಿಷಿ ನೀಡಿ ಬಚಾವಾಗಬಹುದು. ಆದರೆ ಅದರಿಂದ ಎದುರಾಗುವ ಆಹಾರ ಬಿಕ್ಕಟ್ಟು, ರೈತರ ಆತ್ಮಹತ್ಯೆ, ಗ್ರಾಮೀಣ ಪ್ರದೇಶದಿಂದ ನಗರಪ್ರದೇಶಗಳಿಗೆ ಯುವಜನರ ವಲಸೆ ಮತ್ತು ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳಿಗೆ ಪರಿಹಾರವೇನು? ಎದುರಿಸಿ ನಿಲ್ಲಬಲ್ಲ ಮಾರ್ಗೋಪಾಯಗಳೇನು?
ಕಳೆದ ನಲವತ್ತು ವರ್ಷಗಳ ಹಿಂದೆ ಎಣ್ಣೆಕಾಳು-ಮಿಲ್ಲುಗಳಿಗೆ ಹೆಸರಾಗಿದ್ದ ಚಳ್ಳಕೆರೆ ಇಂದು ಪಾಳುಬಿದ್ದ ಕೋಟೆಯಂತೆ ಕಾಣುತ್ತಿದೆ. ಕಡಲೇಕಾಯಿ, ಸೂರ್ಯಕಾಂತಿ ಬೆಳೆಯುತ್ತಿದ್ದ ರೈತರು ಕಷ್ಟ-ನಷ್ಟಕ್ಕೀಡಾಗಿ ಈರುಳ್ಳಿ ಬೆಳೆಯಲಾರಂಭಿಸಿದರು. ಈರುಳ್ಳಿ ಬೆಲೆ ಕುಸಿತ ಕಾಣುತ್ತಿದ್ದಂತೆ, ಶುಂಠಿಗೆ ಬದಲಾದರು. ಈಗ ಶುಂಠಿಯನ್ನೂ ಬಿಟ್ಟು ಅಡಿಕೆ ಬೆಳೆಯಲು ಶುರು ಮಾಡಿದ್ದಾರೆ. ಶುಂಠಿ, ಅಡಿಕೆಗೂ ಬೆಲೆ ಇಲ್ಲ, ಅವು ಆಹಾರ ಬೆಳೆಗಳೂ ಅಲ್ಲ.
ಅದೇ ರೀತಿ ಕಬ್ಬು ಬೆಳೆಯುತ್ತಿದ್ದ ರೈತರು, ಸಿಕ್ಕಾಪಟ್ಟೆ ನೀರು, ಸಮಯ ಮತ್ತು ಶ್ರಮ ಬೇಡುತ್ತದೆಂದು, ಕಬ್ಬು ಬೆಳೆಯುವುದನ್ನು ಬಿಟ್ಟಿದ್ದಾರೆ. ಕಬ್ಬಿಗೆ ಬೆಲೆ ಇಲ್ಲ, ಕಾರ್ಖಾನೆಯವರು ಸಮಯಕ್ಕೆ ಸರಿಯಾಗಿ ಹಣ ಕೊಡುವುದಿಲ್ಲ ಎಂದು ಮೆಕ್ಕೆ ಜೋಳ ಬೆಳೆಯಲಾರಂಭಿಸಿದ್ದಾರೆ. ಆಲೂಗಡ್ಡೆ ಬೆಳೆಯುತ್ತಿದ್ದ ರೈತರು ಕೂಡ ಜೋಳ ಬೆಳೆಯಲು ಶುರು ಮಾಡಿದ್ದಾರೆ. ಜೋಳಕ್ಕೆ ಹೆಚ್ಚಿನ ನೀರು, ಸಮಯ, ಶ್ರಮ ಬೇಡ. ಸದ್ಯಕ್ಕೆ ಮೆಕ್ಕೆಜೋಳಕ್ಕೆ ಬೆಲೆ ಇದೆ, ಜಾನುವಾರುಗಳಿಗೆ ಮೇವೂ ಸಿಗುತ್ತದೆ. ಬೆಳೆ ವಿಧಾನಗಳು ವಿವಿಧ ಸ್ವರೂಪದ ಕೃಷಿಭೂಮಿಗಳ ನಡುವೆ ಬದಲಾಗುವುದು ಸಹಜವೆನಿಸಿದರೂ, ವಾಣಿಜ್ಯ ಬೆಳೆಗಳು ಮನುಷ್ಯರ ಹೊಟ್ಟೆ ತುಂಬಿಸುವುದಿಲ್ಲ. ಭವಿಷ್ಯದಲ್ಲಿ ಆಹಾರದ ಬಿಕ್ಕಟ್ಟಿಗೆ ದಾರಿ ಮಾಡಿಕೊಡದೇ ಇರುವುದಿಲ್ಲ.
ಟೊಮ್ಯಾಟೋಗೆ ಸದ್ಯಕ್ಕೆ ಒಳ್ಳೆಯ ಬೆಲೆ ಇದೆ. ಆದರೆ ಕಳ್ಳರಿಂದ ಬೆಳೆ ರಕ್ಷಣೆಯೇ ದೊಡ್ಡ ಸಮಸ್ಯೆಯಾಗಿದೆ. ಕಷ್ಟಪಟ್ಟರೂ, ಪ್ರಾಣವನ್ನು ಒತ್ತೆ ಇಟ್ಟರೂ ಬೆಳೆ ಮತ್ತು ಬೆಲೆ ಕೈಗತ್ತದಾಗಿದೆ. ಜುಲೈನಲ್ಲಿ ಸುರಿದ ಭಾರೀ ಮಳೆಗೆ ಕಾಫಿ ಫಸಲು ನೆಲಕ್ಕುದುರುತ್ತಿದೆ. ಕಾಫಿಯನ್ನೇ ನಂಬಿದ್ದ ಬೆಳೆಗಾರರ ಮೊಗದಲ್ಲಿ ಆತಂಕ ಮನೆ ಮಾಡಿದೆ. ಭತ್ತ ಬೆಳೆಯುತ್ತಿದ್ದ ರೈತರು ನೀರಿಲ್ಲದೆ ರಾಗಿ ಬೆಳೆಯುತ್ತಿದ್ದಾರೆ. ಬೆಳೆ, ಇಳುವರಿ ಹೆಚ್ಚಾಗಿದೆ. ಆದರೆ ರಾಗಿಯನ್ನು ಕೊಳ್ಳುವವರಿಲ್ಲ. ಕೊಬ್ಬರಿಯನ್ನು ಕೇಳುವವರಿಲ್ಲ. ರೇಷ್ಮೆಗೂಡಿಗೆ ರೇಟಿಲ್ಲ.
ನಗರೀಕರಣದಿಂದಾಗಿ ಕೃಷಿ ಯೋಗ್ಯ ಭೂಮಿಯ ಗಾತ್ರ ಮತ್ತು ಗುಣಮಟ್ಟ ದಿನದಿಂದ ದಿನಕ್ಕೆ ಕುಗ್ಗತ್ತಾ ಬರುತ್ತಿದೆ. ಪರಂಪರಾಗತವಾಗಿ ಕರ್ನಾಟಕದ ಕೃಷಿಕರು ಸಣ್ಣ ಹಿಡುವಳಿದಾರರು, ಬಡವರು. ಹೆಚ್ಚಿನ ಪಾಲು ಮಳೆಯನ್ನೇ ಆಶ್ರಯಿಸಿದವರು. ಮಳೆಯಾಗುತ್ತಿದ್ದಂತೆ ಬೀಜಕ್ಕೆ, ಗೊಬ್ಬರಕ್ಕೆ, ಔಷಧಿಗೆ, ಕೂಲಿಗೆ ಸಾಲದ ಮೊರೆ ಹೋಗುವವರು. ಇಡೀ ಕುಟುಂಬ ವರ್ಷವೆಲ್ಲ ಬೆವರು ಬಸಿದು ದುಡಿದರೂ, ನೆಮ್ಮದಿಯ ಬದುಕು ಕಾಣದವರು. ಅನಿಶ್ಚಿತ ಬದುಕಿನಿಂದ ಬಿಡಿಸಿಕೊಳ್ಳಲಾಗದವರು. ಬೆಳೆ ಬಂದು ಬೆಲೆ ಸಿಕ್ಕರೆ ಸಾಲ ತೀರಿಸಬಹುದು. ಇಲ್ಲವಾದರೆ ಆತ್ಮಹತ್ಯೆಗಳು ಅನಿವಾರ್ಯವಾಗಬಹುದು.
ಇದನ್ನು ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | …ಏಕೆಂದರೆ, ಇದು ಕರ್ನಾಟಕ ಪೊಲೀಸ್ ಇಲಾಖೆಯ ಮರ್ಯಾದೆ ಪ್ರಶ್ನೆ
ಇಂತಹ ಸಂದರ್ಭದಲ್ಲಿ, ಹೊಸ ಸರ್ಕಾರ ರಚನೆಯಾದಾಗ ರೈತ ಸಮುದಾಯದ ಕಣ್ಣುಗಳು ಆಶಾಭಾವನೆಯಿಂದ ಅರಳುವುದು ಸಹಜ. ಹಿಂದಿನ ಸರ್ಕಾರದ ಸುಳ್ಳುಗಳಿಂದ ಬೇಸತ್ತ ರೈತರು, ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿಕೊಂಡಾಗ, ಸಹಜವಾಗಿಯೇ ನಿರೀಕ್ಷೆಗಳು ಕೂಡ ದೊಡ್ಡ ಮಟ್ಟದಲ್ಲಿರುತ್ತವೆ. ಹೊಸದರಲ್ಲಿ ಸರ್ಕಾರಗಳು ಕೂಡ ‘ನಮ್ಮದು ರೈತ ಸರ್ಕಾರ’ ಎಂದು ಹೇಳುತ್ತವೆ. ಅದಕ್ಕೆ ತಕ್ಕಂತೆ ಕೃಷಿಗಾಗಿ ಬಜೆಟ್ಟಿನಲ್ಲಿ ಹೆಚ್ಚಿನ ಅನುದಾನವನ್ನು ಎತ್ತಿಡುತ್ತವೆ. ಸಹಾಯಧನ, ಸಾಲಸೌಲಭ್ಯ, ಬೆಂಬಲಬೆಲೆ, ಪರಿಹಾರ, ಪ್ರಗತಿಪರ ರೈತರಿಗೆ ಪ್ರೋತ್ಸಾಹದಂತಹ ಕಣ್ಣೊರೆಸುವ ಜಾಹೀರಾತುಗಳೂ ಪ್ರಕಟವಾಗುತ್ತವೆ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಕೂಡ ರೈತಪರ ಸರ್ಕಾರವೇ. ಸಾಲದು ಎಂದು, ಕೃಷಿ ಸಚಿವರಾಗಿ ಚಲುವರಾಯಸ್ವಾಮಿ, ಕಂದಾಯ ಮಂತ್ರಿಯಾಗಿ ಕೃಷ್ಣಭೈರೇಗೌಡ, ರೇಷ್ಮೆ ಖಾತೆಗೆ ಕೆ. ವೆಂಕಟೇಶ್, ಸಕ್ಕರೆಗೆ ಶಿವಾನಂದ ಪಾಟೀಲ್, ತೋಟಗಾರಿಕೆಗೆ ಎಸ್.ಎಸ್ ಮಲ್ಲಿಕಾರ್ಜುನ್- ಎಲ್ಲರೂ ಕೃಷಿ ಕುಟುಂಬಗಳಿಂದ ಬಂದವರೇ. ಇವರೆಲ್ಲ ಇದ್ದೂ ಕೃಷಿಗೆ ಕಾಯಕಲ್ಪ ನೀಡಲಾಗಿಲ್ಲ; ಕೃಷಿಕನ ಬದುಕಲ್ಲಿ ಸಣ್ಣ ಸಮಾಧಾನವನ್ನಾದರೂ ತರಲಾಗಿಲ್ಲ ಎಂದರೆ- ರೈತ ಪರ ಸರ್ಕಾರ ಎನ್ನುವುದಕ್ಕೆ ಅರ್ಥವಿರುತ್ತದೆಯೇ?
ಏಕೆಂದರೆ, ಭಾರತದಲ್ಲಿ ಕೃಷಿ ಎಂದರೆ ಮುಂಗಾರು ಮಾರುತದೊಂದಿಗಿನ ಜೂಜಾಟ. ಈ ಜೂಜಾಟಕ್ಕೆ ಸಿಕ್ಕ ರೈತರ ಬದುಕು ಕಳೆದೆರಡು ತಿಂಗಳ ನೆರೆ ಮತ್ತು ಬರದಿಂದ ಮೂರಾಬಟ್ಟೆಯಾಗಿದೆ. ಇದರಿಂದ ಬದುಕಲು ಅವಶ್ಯಕವಾದ ಆಹಾರ ಬೆಳೆಗಳು ನಾಶವಾಗಿವೆ. ಇದು ಕೇವಲ ಬೆಳೆ ಬೆಳೆಯುವ ರೈತನಿಗೆ ಮಾತ್ರವಲ್ಲ, ಉಣ್ಣುವ ಜನತೆಯ ಮೇಲೂ ಪರಿಣಾಮ ಬೀರಲಿದೆ. ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.
