ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ವೈಜ್ಞಾನಿಕ, ವೈಚಾರಿಕ ಹಾಗೂ ಜೀವಪರ ನಿಲುವಿನ ಸಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು ಎಂದು ಪ್ರೊ.ಲತಾ ಚಂದ್ರಶೇಖರ ತಾಂಡೂರೆ ನುಡಿದರು.
ಬೀದರ್ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವಚನಾಮೃತ ಕನ್ನಡ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಶರಣರಾದ ಮಡಿವಾಳ ಮಾಚಿದೇವ ಹಾಗೂ ಧೂಪದ ಗೊಗ್ಗವ್ವೆ ಕುರಿತಾದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಇಂದಿನ ಸಮಾಜದಲ್ಲಿ ಬಾಹ್ಯ ಸೌಂದರ್ಯಕ್ಕೆ ಮಾರುಹೋಗಿ ಡಾಂಭಿಕತೆಯಲ್ಲಿ ಬದುಕುತ್ತಿದ್ದೇವೆ. ಶರಣರ ಜ್ಞಾನ ಸಂಪಾದನೆ ಬಹಳ ಮುಖ್ಯ. ಕಾಯಕದಲ್ಲಿ ಮೇಲು-ಕೀಳು ಎನ್ನದೆ ನಿಷ್ಠೆ ಮೆರೆದ ವಚನಕಾರರ ಬದುಕು ನಮ್ಮೆಲ್ಲರಿಗೂ ದಾರಿದೀಪ ಆಗಬೇಕುʼ ಎಂದರು.
ಚಿಂತಕ ಲೋಕೇಶ ಉಡಬಾಳೆ ಅವರು ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿ, ʼಮಾಚಿದೇವರು ಬಟ್ಟೆಯಲ್ಲಿನ ಮಲೀನತೆ ತೊಳೆದು ಆ ಕಾರ್ಯಕ್ಕೆ ಬಹುದೊಡ್ಡ ಗೌರವ ತಂದುಕೊಟ್ಟರು. ತಮ್ಮ ವಚನಗಳ ಮುಖಾಂತರ ಜನರಲ್ಲಿ ಅಡಗಿರುವ ಮಲೀನತೆ ತೊಳೆಯುವ ಕಾರ್ಯ ಬಹಳ ಶೃದ್ಧೆಯಿಂದ ಮಾಡಿದರುʼ ಎಂದರು.
ಸೊನ್ನಲಾಪುರದ ಸಿದ್ಧರಾಮೇಶ್ವರರು ಹೇಳುವಂತೆ ಮಾಚಿದೇವರು ಮೂರು ಕೋಟಿ ಮುನ್ನೂರು ವಚನಗಳು ರಚಿಸಿದ್ದಾರಂತೆ. ಆದರೆ, ಕೇವಲ 345 ವಚನಗಳು ಮಾತ್ರ ಲಭ್ಯವಾಗಿವೆ. ಸಮಾನತೆ ದೃಷ್ಟಿಯಿಂದ ʼಅರಸುತನ ಮೇಲಲ್ಲ ಅಗಸತನ ಕೀಳಲ್ಲʼ ಎಂಬ ಮಾಚಿದೇವರ ವಚನದ ಸಾಲು ಪ್ರಸ್ತುತ ಎನಿಸುತ್ತದೆʼ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕಿ ಡಾ.ರೇಣುಕಾ ಎಂ.ಸ್ವಾಮಿ ಅವರು ಶರಣೆ ಧೂಪದ ಗೊಗ್ಗವ್ವೆ ಕುರಿತು ಉಪನ್ಯಾಸ ನೀಡಿ, ʼ ವಚನಕಾರ್ತಿ ಧೂಪದ ಗೊಗ್ಗವ್ವೆ ಅವರ ವಚನಗಳಲ್ಲಿ ಶರಣಸತಿ-ಲಿಂಗಪತಿ ಎಂಬ ಭಾವ ಎದ್ದು ಕಾಣುತ್ತದೆ. ಸ್ತ್ರೀ ಸಮಾನತೆ, ವೈಚಾರಿಕ ಪ್ರಜ್ಞೆ ಕುರಿತು ಬಹಳ ಮಾರ್ಮಿಕವಾಗಿ ಬರೆದಿದ್ದಾರೆ. ಆಡಂಬರ ಭಕ್ತಿಯನ್ನು ಕಟುವಾಗಿ ಟೀಕಿಸುವ ಮೂಲಕ ನಿರ್ಮಲ ಭಕ್ತಿಗೆ ಹೆಚ್ಚು ಒತ್ತು ನೀಡಿದರು. ಗೊಗ್ಗವೆ ಅವರು ನಾಸ್ತಿನಾಥ ಅಂಕಿತದಿಂದ ಆರು ವಚನಗಳನ್ನು ರಚಿಸಿದ್ದಾರೆʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರು ಮಾತನಾಡಿ, ʼವಚನಕಾರರು ನಮಗಾಗಿ ಕೊಟ್ಟಂತಹ ಅಮೂಲ್ಯವಾದ ವಚನ ಭಂಡಾರ ಇಂದಿನ ಜನಮಾನಸಕ್ಕೆ ತಲುಪಿಸುವ ಪ್ರಯತ್ನ ವಚನಾಮೃತ ಕನ್ನಡ ಸಂಘ ಮಾಡುತ್ತಿದೆʼ ಎಂದರು.
ಚಿತ್ರ ಕಲಾವಿದ ಚಂದ್ರಶೇಖರ ಸೋಮಶೆಟ್ಟಿ, ಡಾಕ್ಟರೇಟ್ ಪದವಿ ಪಡೆದ ಗಂಗಶೆಟ್ಟಿ ಖಾನಾಪುರ, ಯುವ ಚಿತ್ರ ಕಲಾವಿದ ಹಣಮಂತ ಮಲ್ಯಾಮರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಆತ್ಮಹತ್ಯೆಗೆ ಮುಂದಾದ ರೈತನ ಸಮಸ್ಯೆ ಬಗೆಹರಿಸಿದ ಬಸವಕಲ್ಯಾಣ ತಹಸೀಲ್ದಾರ್
ಕಾರ್ಯಕ್ರಮದಲ್ಲಿ ಚಂದ್ರಶೇಖರ ತಾಂಡೂರೆ, ಸಂಗಶೆಟ್ಟಿ ಗಾದಗೆ, ಎಸ್.ಬಿ.ಸಜ್ಜನಶೆಟ್ಟಿ, ಪರಮೇಶ್ವರ ಬಿರಾದಾರ, ಶ್ರೀಕಾಂತ ಬಿರಾದಾರ, ಚೆನ್ನಬಸವ ಮಡಿವಾಳ, ಸಿದ್ರಾಮ ಸಪಾಟೆ, ಎಸ್.ಎಸ್.ಹೊಡಮನಿ, ಬಸವರಾಜ ಎಸ್.ಬಿರಾದಾರ ಮತ್ತಿತರರು ಭಾಗವಹಿಸಿದ್ದರು. ರೇಣುಕಾ ಎನ್.ಬಿ., ರೇಣುಕಾ ಮಳ್ಳಿಯವರು ವಚನ ಗಾಯನ ನಡೆಸಿಕೊಟ್ಟರು. ಶ್ರೀದೇವಿ ಸೋಮಶೆಟ್ಟಿ ನಿರೂಪಿಸಿದರು. ಜಯದೇವಿ ಯದಲಾಪುರೆ ಸ್ವಾಗತಿಸಿದರು, ಪದ್ಮರಾಜ ಅಜೀತಮಣಿ ವಂದಿಸಿದರು. ಪ್ರವೀಣ ನಾಡಗೀತೆ ನಡೆಸಿಕೊಟ್ಟರು.