ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ತಮಗೆ 2 ಕೋಟಿ ನೀಡುವಂತೆ ಸಾಕ್ಷ್ಯಚಿತ್ರದ ನೈಜ ಪಾತ್ರಧಾರಿಗಳಾದ ಬೊಮ್ಮನ್–ಬೆಳ್ಳಿ ಮಾವುತ ದಂಪತಿ ನೋಟಿಸ್ ನೀಡಿದ್ದಾರೆ.
“ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರಾಜೆಕ್ಟ್‌ನಲ್ಲಿ ಬರುವ ಆದಾಯದಲ್ಲಿ ದಂಪತಿಗೆ ಸೂಕ್ತ ಮನೆ, ಬಹುಪಯೋಗಿ ವಾಹನ, ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದ್ಯಾವುದನ್ನೂ ನೀಡಿಲ್ಲ. ಒಂದು ಕಡೆ, ಈ ದಂಪತಿಯನ್ನು ಗಣ್ಯರು, ರಾಜಕೀಯ ನಾಯಕರಿಗೆ ‘ನಿಜವಾದ ನಾಯಕರು’ ಎಂದು ಪರಿಚಯಿಸಿ ಪ್ರಚಾರ ಪಡೆಯಲಾಯಿತು. ಇನ್ನೊಂದು ಕಡೆ ಸಾಕ್ಷ್ಯಚಿತ್ರ ನಿರ್ಮಾಪಕರು ತಮಿಳುನಾಡು ಮುಖ್ಯಮಂತ್ರಿ ಮತ್ತು ಪ್ರಧಾನಿಯಿಂದ ಹಲವು ಪ್ರಯೋಜನಗಳನ್ನು ಪಡೆದರು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ’’ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಮಾವುತ ದಂಪತಿಯನ್ನು ಒಂದು ದಶಕದಿಂದ ಬಲ್ಲವರಾದ, ವೃತ್ತಿಯಲ್ಲಿ ವಕೀಲರಾಗಿರುವ ಚೆನ್ನೈ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ರಾಜ್ ಅವರು ‘ಬೊಮ್ಮನ್ ಮತ್ತು ಬೆಳ್ಳಿ ಇಬ್ಬರೂ ಗೊನ್ಸಾಲ್ವೆಸ್ ಬಗ್ಗೆ ಬೇಸರ ಹೊಂದಿದ್ದಾರೆ. ಅವರು ಸಾಕ್ಷ್ಯಚಿತ್ರವನ್ನು ನಿರ್ಮಿಸುವಾಗ ಹಣಕಾಸಿನ ಸಹಾಯದ ಜತೆಗೆ, ಬೆಳ್ಳಿ ಅವರ ಮೊಮ್ಮಗಳ ಶಿಕ್ಷಣಕ್ಕೆ ನೆರವಾಗುವ ಭರವಸೆ ನೀಡಿದ್ದರು. ಆದರೆ, ಅವರು ಚಿತ್ರದಿಂದ ಗಳಿಸಿದ ದೊಡ್ಡ ಲಾಭದ ಶೇ.1ರಷ್ಟು ಭಾಗವನ್ನು ಈ ದಂಪತಿಗೆ ನೀಡಲು ಈಗ ನಿರಾಕರಿಸಿದ್ದಾರೆ’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ‘ಇಂಡಿಯಾ’ ಮೂರನೇ ಸಭೆ
ಪ್ರಕರಣ ನಿರ್ವಹಿಸುತ್ತಿರುವ ವಕೀಲ ಮೊಹಮ್ಮದ್ ಮನ್ಸೂರ್ ಅವರಿಗೆ ನಾಲ್ಕು ದಿನಗಳ ಹಿಂದೆ ಗೊನ್ಸಾಲ್ವೆಸ್ ಪರವಾಗಿ ಸಿಖ್ಯ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನಿಂದ ನೋಟಿಸ್‌ಗೆ ಉತ್ತರ ಬಂದಿದೆ.
ನೋಟಿಸ್‌ಗೆ ನೀಡಿರುವ ಉತ್ತರದಲ್ಲಿ, ‘ಈಗಾಗಲೇ ದಂಪತಿಗೆ ಹಣ ನೀಡಲಾಗಿದೆ. ಹಾಗೂ ಯಾವುದೇ ಸಹಾಯ ನೀಡಲು ನಿರಾಕರಿಸಿದ್ದಾರೆ. ನನ್ನ ಕಕ್ಷಿದಾರರ ಜತೆ ಸಮಾಲೋಚನೆ ನಡೆಸಿದ ನಂತರ ಇದಕ್ಕೆ ಪ್ರತ್ಯುತ್ತರ ಕಳುಹಿಸಲಾಗುವುದು’ ಎಂದು ಹೇಳಿದ್ದಾರೆ.
ಅಲ್ಲದೆ ಸಿಖ್ಯ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸುದ್ದಿ ಸಂಸ್ಥೆಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “ಸಾಕ್ಷ್ಯಚಿತ್ರದಲ್ಲಿ ಆನೆ ಸಂರಕ್ಷಣೆ, ಅರಣ್ಯ ಇಲಾಖೆ ಮತ್ತು ಅದರ ಮಾವುತರಾದ ಬೊಮ್ಮನ್ ಮತ್ತು ಬೆಳ್ಳಿಯ ಅದ್ಭುತ ಪ್ರಯತ್ನಗಳನ್ನು ಪ್ರಮುಖವಾಗಿ ತೋರಿಸಲಾಗಿದೆ. ಸಾಕ್ಷ್ಯಚಿತ್ರವು ಪ್ರಾರಂಭದಿಂದಲೂ ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ವಿಷಯ ಹೊಂದಿದೆ ಮತ್ತು ಮಾವುತರು ಮತ್ತು ಕಾವಾಡಿಗ ಸಮುದಾಯಗಳ ಮೇಲೆ ನೈಜ ಪ್ರಭಾವ ಬೀರಿದೆ. ಇದರಿಂದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ರಾಜ್ಯದ ಆನೆಗಳನ್ನು ನೋಡಿಕೊಳ್ಳುವ 91 ಮಾವುತರು ಮತ್ತು ಕಾವಾಡಿಗಳಿಗೆ ಸಹಾಯ ಮಾಡಲು ದೇಣಿಗೆ ನೀಡಿದ್ದಾರೆ. ಆನೆಗಳನ್ನು ನೋಡಿಕೊಳ್ಳುವ ಮಾವುತರಿಗೆ ಪರಿಸರ ಸ್ನೇಹಿ ಮನೆಗಳ ನಿರ್ಮಾಣ ಮತ್ತು ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಶಿಬಿರವನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ” ಎಂದು ತಿಳಿಸಿದ್ದಾರೆ.
“ನೋಟಿಸ್‌ನಲ್ಲಿ ನೀಡಿರುವ ಎಲ್ಲ ಆರೋಪಗಳು ಸುಳ್ಳು. ಈ ಕಥೆಯ ಎಲ್ಲ ಕೊಡುಗೆದಾರರಿಗೆ ನಾವು ಗೌರವವನ್ನು ಹೊಂದಿದ್ದು, ಯೋಜನೆಯಿಂದ ಉತ್ತಮ ಬದಲಾವಣೆಯ ನಿರೀಕ್ಷೆಯಲ್ಲಿದ್ದೇವೆ” ಎಂದು ತಿಳಿಸಲಾಗಿದೆ.
ಕಾರ್ತಿಕಿ ಗೊನ್ಸಾಲ್ವೆಸ್ ಅವರ ನೇತೃತ್ವದಲ್ಲಿ ಗುನೀತ್ ಮೊಂಗಾ ಅವರ ಬ್ಯಾನರ್‌ನಡಿ ಸಿಖ್ಯ ಎಂಟರ್‌ಟೈನ್‌ಮೆಂಟ್‌ನಿಂದ ಮೂಡಿಬಂದಿರುವ 41 ನಿಮಿಷಗಳ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವು ರಘು ಎಂಬ ಅನಾಥ ಆನೆಮರಿಯನ್ನು ಕಳ್ಳ ಬೇಟೆಗಾರರಿಂದ ರಕ್ಷಿಸಿ ಸಾಕಿ ಸಲುಹಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಾವುತರಾದ ಬೊಮ್ಮನ್ ಮತ್ತು ಬೆಳ್ಳಿಯವರ ಕಥೆಯನ್ನು ಹೊಂದಿದೆ.