ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29ರ ಕಾರ್ಯಾಚರಣೆಯನ್ನು 6:15 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಅಂತ್ಯಗೊಳಿಸಿದ್ದಾರೆ. ನಾಳೆ(ಜುಲೈ 30) ಮತ್ತೆ ಮೂರನೇ ದಿನದ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಮೊದಲ ದಿನದ ಉತ್ಖನನ ಕಾರ್ಯಾಚರಣೆಯಲ್ಲಿ ಯಾವುದೇ ಹೆಚ್ಚಿನ ಕುರುಹುಗಳು ಲಭ್ಯವಾಗಿರುವ ಬಗ್ಗೆ ಮಾಹಿತಿಗಳು ಲಭಿಸಿಲ್ಲ. ಗುರುತಿಸಲಾಗಿರುವ ಒಂದನೇ ಸ್ಥಳವನ್ನು ಅಗೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಲಾಗಿದೆ ಎಂದು ತಿಳಿದುಬಂದಿದೆ.
ದೂರುದಾರ ಸೋಮವಾರ 13 ಸ್ಥಳಗಳನ್ನು ತೋರಿಸಿದ್ದು, ಮಂಗಳವಾರ ಮೃತದೇಹಗಳ ಕಳೇಬರಗಳನ್ನು ಹೊರ ತೆಗೆಯಲು 12 ಜನರ ತಂಡವು ಆ ಜಾಗಗಳಲ್ಲಿ ಅಗೆಯುವ ಕೆಲಸಕ್ಕೆ ಕರೆತರಲಾಗಿತ್ತು. ಮಧ್ಯಾಹ್ನದ ವೇಳೆಗೆ ಮಳೆ ವಿಪರೀತಗೊಂಡ ಹಿನ್ನೆಲೆಯಲ್ಲಿ ಹಾರೆ, ಗುದ್ದಲಿಯಿಂದ ಮಾಡುತ್ತಿದ್ದ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಸ್ಥಳಕ್ಕೆ ಜೆಸಿಬಿಯನ್ನು ಕರೆ ತಂದು ಉತ್ಖನನ ಕೆಲಸವನ್ನು ಮುಂದುವರಿಸಲಾಗಿತ್ತು.
ಸಂಜೆಯ ವೇಳೆಗೆ ಉತ್ಖನನ ಸ್ಥಳಕ್ಕೆ ಶ್ವಾನದಳವನ್ನು ಕರೆಸಿ, ಶ್ವಾನದ ಮೂಲಕ ಅಸ್ಥಿಪಂಜರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳ ತಂಡ ಮುಂದಾಗಿತ್ತು. ಈ ವೇಳೆಯೂ ಯಾವುದೇ ಅಸ್ಥಿಪಂಜರದ ಕುರುಹುಗಳು ಲಭ್ಯವಾಗಿರುವ ಬಗ್ಗೆ ಮಾಹಿತಿಗಳು ಲಭಿಸಿಲ್ಲ.
