ಪಬ್ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣಿ ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ದೇವಿ ನಗರದಲ್ಲಿ ನಡೆದಿದೆ.
ಪ್ರವೀಣ್ ಪಾಟೀಲ್ ಎಂಬ ವಿದ್ಯಾರ್ಥಿ ಆತ್ಮಹತ್ಯೆ (20) ಮಾಡಿಕೊಂಡಿದ್ದು, ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಈತ ಕಲಬುರಗಿಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ವಿದ್ಯಾರ್ಥಿ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್‌ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ಕೋರ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದನು. ಪಬ್ಜಿ ಗೇಮ್‌ಗೆ ಅಂಟಿಕೊಂಡಿರುವ ಈತ ಹಲವಾರು ದಿನಗಳಿಂದ ಪಬ್ಜಿ ಆಡುತ್ತ ಗೆಳೆಯರ ಹತ್ತಿರ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೆ ಮನನೊಂದು ಭಾನುವಾರ ರಾತ್ರಿ ಕಲಬುರಗಿಯ ದೇವಿ ನಗರದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಪಬ್ಜಿ ಆಟದ ಹಿಂದೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದುದರ ಬಗ್ಗೆ ಕೆಲ ಸ್ನೇಹಿತರ ಬಳಿ ಪ್ರವೀಣ್ ಹೇಳಿಕೊಂಡಿದ್ದ. ಇದರಿಂದ ದೂರವಾಗುವಂತೆ ಸ್ನೇಹಿತರು ಹೇಳಿದ್ದರು. ಆದರೆ ಅದರಿಂದ ಹೊರ ಬರಲು ಆಗಿರಲಿಲ್ಲ. ಇದು ಮುಂದುವರೆದು ಹೆಚ್ಚು ಹಣ ಕಳೆದುಕೊಂಡಿದ್ದ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಚರ್ಚ್ ನಿರ್ಮಾಣಕ್ಕೆ ಹಿಂದೂಪರ ಸಂಘಟನೆಗಳ ವಿರೋಧ
“ಪಬ್ಜಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿರುವ ಆಟಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಅದರಲ್ಲೂ ಹಣ ಹೂಡಿಕೆ ಮಾಡುವಂತಹ ಆಟಗಳ ಬಗ್ಗೆ ಯುವ ಸಮುದಾಯ ಎಚ್ಚರಿಕೆ ವಹಿಸಲೇಬೇಕು. ಅದಕ್ಕೆ ದಾಸರಾದರೆ ಮಾನಸಿಕವಾಗಿ ಕುಗ್ಗುವ ಜತೆಗೆ ಆರ್ಥಿಕವಾಗಿಯೂ ತೊಂದರೆಯಾಗಲಿದೆ. ಪೋಷಕರ ಜತೆಗೆ ಕಾಲೇಜುಗಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ” ಎಂದು ಕಲಬುರಗಿ ಪೊಲೀಸರು ತಿಳಿಸಿದ್ದಾರೆ.