ರಷ್ಯಾದ ಕರಾವಳಿಯಲ್ಲಿ 8.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಪೆಸಿಫಿಕ್ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ (ಯುಎಸ್‌ಜಿಎಸ್) ತಿಳಿಸಿದೆ.
ರಷ್ಯಾದ ಕಮ್ಚಕ್ತಾ ಪರ್ಯಾಯ ದ್ವೀಪದ ಪೆಟ್ರೋಪವಲೋಸ್ಕ್‌ನಿಂದ ಪೂರ್ವಕ್ಕೆ 136 ಕಿಲೋಮೀಟರ್ ದೂರದಲ್ಲಿ ಈ ಭೂಕಂಪ ಸಂಭವಿಸಿದೆ. ಕಂಪನವು 19 ಕಿಲೋಮೀಟರ್ ಆಳದಲ್ಲಿ ಉಂಟಾಗಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.
ಪೆಸಿಫಿಕ್ ಸಾಗರದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆಯಿಂದಾಗಿ ಅಲಸ್ಕಾ ಸೇರಿದಂತೆ ಹಲವು ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ರಷ್ಯಾದ ಬಳಿ ಭೂಕಂಪ ವರದಿಯಾದ ಬೆನ್ನಲ್ಲೇ ಜಪಾನ್‌ನ ಹವಾಮಾನ ಇಲಾಖೆಯು ಕೂಡ ಸುನಾಮಿ ಎಚ್ಚರಿಕೆಯನ್ನು ಜಾರಿಗೊಳಿಸಿದೆ. ಜಪಾನ್‌ನ ಪೆಸಿಫಿಕ್ ತೀರದಲ್ಲಿ ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಹೊಕ್ಕಾಯಿಡೊದಿಂದ 250 ಕಿಲೋಮೀಟರ್ ದೂರದಲ್ಲಿ ಕಂಪನ ಸಂಭವಿಸಿದ್ದು, ಲಘು ಕಂಪನ ಅನುಭವಕ್ಕೆ ಬಂದಿದೆ ಎಂದು ಎನ್‌ಎಚ್‌ಕೆ ಟಿವಿ ವರದಿ ಮಾಡಿದೆ. ಆಳದಲ್ಲಿ ಸಂಭವಿಸಿದ ಈ ಭೂಕಂಪವು ಜಪಾನ್‌ನಲ್ಲಿ ಸುನಾಮಿಗೆ ಕಾರಣವಾಗಬಹುದು ಎಂದು ಟೋಕಿಯೊ ವಿಶ್ವವಿದ್ಯಾನಿಲಯದ ಭೂಕಂಪ ಮಾಪನ ಶಾಸ್ತ್ರಜ್ಞ ಶಿನಿಚಿ ಸಕಾಯ್ ಹೇಳಿದ್ದಾರೆ.