ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟಗಳು ಭುಗಿಲೆದ್ದಿವೆ. ಪ್ರಕರಣವನ್ನು ಮುಚ್ಚಿಹಾಕಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಪ್ರಕರಣದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಸಂತ ಬಂಗೇರ, ‘ಸೌಜನ್ಯ ಪ್ರಕರಣದ ರಹಸ್ಯವನ್ನು ಬಿಚ್ಚಿಟ್ಟರೆ, ನನನ್ನೂ ಸಾಯಿಸಬಹುದು” ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನಾನು ಶಾಸಕನಾಗಿದ್ದಾಗ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸದನದಲ್ಲಿ ಆಗ್ರಹಿಸಿದ್ದೆ. ಮೊದಲಿಗೆ ಸಿಬಿಐಗೆ ವಹಿಸುವುದು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆ ನಂತರ, ಸಿಬಿಐಗೆ ವಹಿಸಲಾಯಿತು. ಆದರೆ, ಕೆಲವರು ಸಿಬಿಐ ತನಿಖೆಯನ್ನು ದಾರಿ ತಪ್ಪಿಸಿದ್ದಾರೆ” ಎಂದು ಹೇಳಿದ್ದಾರೆ.
“ಸೌಜನ್ಯ ಪ್ರಕರಣ ಮಾತ್ರವಲ್ಲ, ಬೆಳ್ತಂಗಡಿಯಲ್ಲಿ ನಡೆದ ಎಲ್ಲ ಅಮಾನುಷ ಕೊಲೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆ. ಸೌಜನ್ಯ ಪ್ರಕರಣ ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ನನಗಿತ್ತು. ಆದರೆ, ಸಿಬಿಐ ತನಿಖೆ ಅರ್ಧದಷ್ಟು ಮುಂದೆಹೋದಾಗ ತನಿಖೆಯಲ್ಲಿ ಮೋಸವಾಗುತ್ತಿದೆ ಎಂದು ಗೊತ್ತಾಯಿತು. ಅದನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ನಾನು ಅದನ್ನು ಪ್ರಸ್ತಾಪಿಸುತ್ತೇನೆ” ಎಂದಿದ್ದಾರೆ.
“ಪ್ರಕರಣದ ರಹಸ್ಯಗಳನ್ನು ಹೇಳಲು ಒಂದಲ್ಲ ಒಂದು ದಿನ ಕಾಲ ಬರುತ್ತದೆ. ಅವತ್ತು ಸೌಜನ್ಯ ಪ್ರಕರಣದ ದಿಕ್ಕು ತಪ್ಪಿಸಿದ್ದು ಯಾರು. ಅನ್ಯಾಯ, ತೊಂದರೆ ಕೊಟ್ಟಿದ್ದು ಯಾರು ಎಂದು ಹೇಳುತ್ತೇನೆ. ಆದರೆ, ಅದನ್ನು ಹೇಳಿದರೆ, ಅವರು ನನ್ನನ್ನು ಸಾಯಿಸಲೂಬಹುದು” ಎಂದು ಹೇಳಿದ್ದಾರೆ.
“ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕೆಂಬ ಬಗ್ಗೆ ವಿವರಿಸುತ್ತೇನೆ. ಖಾಕಿಯವರನ್ನೂ ಕೈ-ಕಾಲು ಕಟ್ಟಿ ತನಿಖೆ ಮಾಡಿಸುವಂತೆ ಸಿದ್ದರಾಮಯ್ಯನವರಿಗೆ ತಿಳಿಸುತ್ತೇನೆ. ತಪ್ಪು ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಶಿಕ್ಷೆ ಅನುಭವಿಸಲೇಬೇಕು” ಎಂದು ವಿವರಿಸಿದ್ದಾರೆ.