ದೇಶಾದ್ಯಂತ ಸಂಚಲನ ಮೂಡಿಸಿರುವ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಚಾರ ಹಗರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹಣದ ಅಕ್ರಮ ವರ್ಗಾವಣೆಯ ಕೋನದಿಂದ ತನಿಖೆಯನ್ನು ತೀವ್ರಗೊಳಿಸಿದೆ. ಈ ಪ್ರಕರಣದಲ್ಲಿ ಚಲನಚಿತ್ರ ನಟರು, ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಹೆಸರುಗಳು ಬೆಳಕಿಗೆ ಬಂದಿದ್ದು, ಇ.ಡಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಈ ಹಗರಣದಲ್ಲಿ ಬೆಟ್ಟಿಂಗ್ ಆ್ಯಪ್‌ಗಳಿಗೆ ಪ್ರಚಾರ ನೀಡಿದ ಆರೋಪದ ಮೇಲೆ ಖ್ಯಾತ ನಟ ಪ್ರಕಾಶ್ ರಾಜ್ ವಿರುದ್ಧವೂ ಪ್ರಕರಣ ದಾಖಲಾಗಿದೆ. 10 ದಿನಗಳ ಹಿಂದೆ ಇಡಿಯಿಂದ ನೋಟಿಸ್ ಪಡೆದಿದ್ದ ಪ್ರಕಾಶ್ ರಾಜ್, ಇಂದು (ಜುಲೈ 30) ಬೆಳಿಗ್ಗೆ ಹೈದರಾಬಾದ್‌ನ ಬಶೀರ್‌ಬಾಗ್‌ನಲ್ಲಿರುವ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.
ಜಂಗಲ್ ರಮ್ಮಿ, ಜೀಟ್ವಿನ್ ಮತ್ತು ಲೋಟಸ್ 365 ರಂತಹ ಬೆಟ್ಟಿಂಗ್ ಆ್ಯಪ್‌ಗಳಿಗೆ ಪ್ರಚಾರ ಮಾಡಿದ ಕಾರಣದಿಂದ ಸಾವಿರಾರು ಯುವಕರು ಭಾರೀ ಹಣಕಾಸಿನ ನಷ್ಟವನ್ನು ಅನುಭವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಘಟನೆಗಳಲ್ಲಿ ಯುವಕರು ಆತ್ಮಹತ್ಯೆಗೆ ಶರಣಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ತೆಲಂಗಾಣ ಪೊಲೀಸರು ಈಗಾಗಲೇ ಐದು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಪಂಜಗುಟ್ಟ, ಮಿಯಾಪುರ್, ಸೂರ್ಯಪೇಟೆ ಮತ್ತು ವಿಶಾಖಪಟ್ಟಣಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಇದನ್ನು ಓದಿದ್ದೀರಾ? ರುಚಿಶುದ್ಧ ಹಾಸ್ಯ ಉಣಬಡಿಸಿದ ಅಸಲಿ ಕಲಾವಿದ ನರಸಿಂಹರಾಜು
ಇ.ಡಿ ಈಗ 29 ಕ್ಕೂ ಹೆಚ್ಚು ಚಲನಚಿತ್ರ ನಟರು, ಯೂಟ್ಯೂಬ್ ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ ಸೇರಿದಂತೆ ಇತರರಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿದೆ. ರಾಣಾ ದಗ್ಗುಬಾಟಿಗೆ ಜುಲೈ 23 ರಂದು ಸಮನ್ಸ್ ನೀಡಲಾಗಿತ್ತು, ಆದರೆ ಅವರು ಸಮಯ ಕೋರಿದ್ದರಿಂದ ಆಗಸ್ಟ್ 11 ರಂದು ಹಾಜರಾಗಲು ಸೂಚಿಸಲಾಗಿದೆ. ಇದೇ ರೀತಿ, ವಿಜಯ್ ದೇವರಕೊಂಡಗೆ ಆಗಸ್ಟ್ 6 ರಂದು ಮತ್ತು ಮಂಚು ಲಕ್ಷ್ಮಿಗೆ ಆಗಸ್ಟ್ 13 ರಂದು ವಿಚಾರಣೆಗೆ ಕರೆಯಲಾಗಿದೆ.
ಬೆಟ್ಟಿಂಗ್ ಆ್ಯಪ್ ನಿರ್ವಾಹಕರು ಹವಾಲಾ ವ್ಯವಸ್ಥೆಯ ಮೂಲಕ ಸೆಲೆಬ್ರಿಟಿಗಳಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹವಾಲಾ ವಹಿವಾಟುಗಳು ಭಾಗಿಯಾಗಿವೆ ಎಂದು ಅಂದಾಜಿಸಲಾಗಿದೆ. ಇನ್ನಷ್ಟು ಹೆಸರುಗಳು ಬೆಳಕಿಗೆ ಬರುವ ಸಾಧ್ಯತೆಯಿರುವುದರಿಂದ, ಈ ಹಗರಣವು ಮತ್ತಷ್ಟು ಉಲ್ಬಣಗೊಳ್ಳುವ ಸೂಚನೆಗಳಿವೆ. ವಂಚನೆ ಮತ್ತು ಅನುಮಾನಾಸ್ಪದ ವಹಿವಾಟುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇ.ಡಿ ಸಜ್ಜಾಗಿದೆ ಎಂದು ವರದಿಯಾಗಿದೆ.
VIDEO | Hyderabad: Actor Prakash Raj (@prakashraaj) appears before ED in money laundering case linked to illegal online betting and gambling by certain platforms.#ED
— Press Trust of India (@PTI_News) July 30, 2025
(Full video available on PTI Videos – https://t.co/n147TvrpG7) pic.twitter.com/fjWTf0OUVZ