ಕೇಂದ್ರ ಸರ್ಕಾರ ನೀಡಿದ ರಸಗೊಬ್ಬರವನ್ನು ರಾಜ್ಯ ಸರ್ಕಾರ ರೈತರಿಗೆ ಸರಿಯಾಗಿ ಹಂಚಿಕೆ ಮಾಡದಿರುವುದಾಗಿ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ಯೂರಿಯಾ ಗೊಬ್ಬರ ರೈತರಿಗೆ ತಲುಪದೇ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ರೈತರ ಹಿತಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಹಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ,” ಎಂದು ಅವರು ಆರೋಪಿಸಿದರು.
ನಂತರ ಚಕ್ಕಡಿ ಮತ್ತು ಟ್ರ್ಯಾಕ್ಟರ್ಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, “ಕಳೆದ ಎರಡು ವರ್ಷಗಳಲ್ಲಿ ಮಳೆ ಕೊರತೆಯಿಂದ ಗೊಬ್ಬರದ ಬೇಡಿಕೆ ಕಡಿಮೆಯಾಗಿತ್ತು. ಈ ವರ್ಷ ಉತ್ತಮ ಮಳೆಯಾಗುತ್ತಿದ್ದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಯೂರಿಯಾ ಕಾಳಸಂತೆಯಲ್ಲಿ ದುರುಪಯೋಗ ಪಡಿಸಿಕೊಂಡು ಮಾರಾಟವಾಗುತ್ತಿರುವುದು ಬಹಿರಂಗವಾಗಿದೆ,” ಎಂದು ಆಪಾದಿಸಿದರು.
ಅವರು ಮುಂದುವರಿದು, “ರಾಜ್ಯದಲ್ಲಿ ಕಳಪೆ ಬಿತ್ತನೆ ಬೀಜ ಸರಬರಾಜಾಗಿದ್ದು, ನಕಲಿ ರಸಗೊಬ್ಬರ ಕಂಪನಿಗಳು ತಲೆ ಎತ್ತಿವೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಜಿಲ್ಲೆಗಳಿಗೆ ಭೇಟಿ ನೀಡದೆ ಬೆಂಗಳೂರಿನಲ್ಲಿಯೇ ಸೀಮಿತಗೊಂಡಿದ್ದಾರೆ,” ಎಂದು ಟೀಕಿಸಿದರು.
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಕಲ್ಯಾಣಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತ ವಿದ್ಯಾನಿಧಿ, ಕೃಷಿ ಉಪಕರಣ ಸಬ್ಸಿಡಿ ಹಾಗೂ ರಾಗಿ ಕೃಷಿಗೆ ಬೆಂಬಲ ಬೆಲೆ ನೀಡುವ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೂ ರಾಜ್ಯ ಸರ್ಕಾರ ತನ್ನ ಪಾಲು ನೀಡುತ್ತಿಲ್ಲ,” ಎಂದು ಅವರು ದೂರಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ, ಡಾ. ವಿ.ಐ. ಪಾಟೀಲ, ಮಹಾಂತೇಶ ದೊಡ್ಡಗೌಡರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮುಖಂಡರಾದ ಎಂ.ಬಿ. ಝಿರಲಿ, ಮುರುಘಂದ್ರಗೌಡ ಪಾಟೀಲ, ಮಹಾಂತೇಶ ವಕ್ಕುಂದ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು