ಆಗಸ್ಟ್ 9ರಂದು ಯಾದಗಿರಿ ಜಿಲ್ಲಾ ಮಟ್ಟದ ಸಂವಿಧಾನ ಜನಜಾಗೃತಿ ಸಮಾವೇಶ ಶಹಾಪುರ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಪ್ರವಾಸಿ ಮಂದಿರದಲ್ಲಿ ಪ್ರಮುಖರಾದ ಗಿರೆಪ್ಪಗೌಡ ಬಾಣತಿಹಾಳ, ಡಾ. ನೀಲಕಂಠ ಬಡಿಗೇರ, ಶಾಂತಪ್ಪ ಕಟ್ಟಿಮನಿ, ರಾಯಪ್ಪ ಸಾಲಿಮನಿ, ಸೈಯದ್ ಖಾದ್ರಿ ನೇತೃತ್ವದಲ್ಲಿ ಕರ ಪತ್ರ ಬಿಡುಗಡೆ ಮಾಡಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ನೀಲಕಂಠ ಬಡಿಗೇರ ಮಾತನಾಡಿ, “ಸಂವಿಧಾನದ ಪ್ರಸ್ತಾವನೆಯಲ್ಲಿ ಧರ್ಮನಿರಾಪೇಕ್ಷತೆ, ಸಮಾಜವಾದ ಪದಗಳನ್ನು ಉಳಿಸಲು ಹಾಗೂ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೂತನ ವಕ್ಪ್ (ತಿದ್ದುಪಡಿ) ಕಾಯ್ದೆ 2025ನ್ನು ವಿರೋಧಿಸಿ, ಬೌದ್ಧರ ಸಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ಬುದ್ಧಗಯಾ ಟೆಂಪಲ್ ಬಿ ಟಿ ಆಕ್ಟ್ 1949 ರದ್ದತಿಗೆ ಒತ್ತಾಯಿಸಿ ಜನಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿದೆʼ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಂವಿಧಾನ ತಜ್ಞ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶಕುಮಾರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪಾ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಆರ್.ಬಿ.ತಿಮ್ಮಾಪುರ ಸೇರಿದಂತೆ ಅನೇಕ ಗಣ್ಯರು ಆಗಮಿಸಲ್ಲಿದ್ದು, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸಮಾವೇಶದ ನೇತೃತ್ವ ವಹಿಸಲ್ಲಿದ್ದಾರೆʼ ಎಂದರು.
ಅಯ್ಯಣ ಕನ್ಯಾಕೋಳ್ಳುರ್ ಮಾತನಾಡಿ, ʼಸಂವಿಧಾನ ಜನಜಾಗೃತಿ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ಪ್ರಗತಿಪರ ಚಿಂತಕರು, ಬುದ್ದಿಜೀವಿಗಳು, ಸಾಹಿತಿಗಳು, ಹೋರಾಟಗಾರರು, ಯುವಕರು, ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕುʼ ಎಂದು ಕೋರಿದರು.
ಈ ಸಂದರ್ಭದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು.