ಯಾದಗಿರಿ ನಗರದ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವು ಮೂಲ ಸೌಕರ್ಯಗಳ ಕೊರತೆಯ ಜತೆಗೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಸ್ವಚ್ಛತೆಯಿಲ್ಲದೆ ಕಸದ ತೊಟ್ಟಿಯಂತಾಗಿದೆ ಎಂದು ಆರೋಪಿಸಲಾಗುತ್ತಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ರಾಹುಲ್ ಕೊಲ್ಲೂರಕರ್ ಈದಿನದೊಂದಿಗೆ ಮಾತನಾಡಿ, “ವಸತಿ ನಿಲಯದಲ್ಲಿ ಮೂಲ ಸೌಕರ್ಯಗಳೇ ಇಲ್ಲ. ನಿಲಯದ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಊಟವನ್ನೂ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸಂಬಂಧಪಟ್ಟವರು ಈ ಸಂಬಂಧ ಕ್ರಮ ಕೈಗೊಳ್ಳಬೇಕು” ಎಂದರು.
“ವಸತಿ ನಿಲಯದ ಕೆಲ ವಿದ್ಯಾರ್ಥಿಗಳು ಗುಟ್ಕಾ, ಧೂಮಪಾನ, ಮದ್ಯಪಾನದಂತ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಇದು ಗನಮನದಲ್ಲಿದ್ದರೂ ಹಾಸ್ಟೆಲ್ ವಾರ್ಡನ್ ಮಾತ್ರ ಕಂಡೂ ಕಾಣದಂತೆ ಇದ್ದಾರೆ. ವಸತಿ ನಿಲಯದ ಆವರಣವು ಅವ್ಯವಸ್ಥೆಯ ಆಗರವಾಗಿದೆ. ವಸತಿ ನಿಲಯದ ತುಂಬೆಲ್ಲಾ ಅನ್ನ, ಸಾಂಬಾರ್ ಚೆಲ್ಲಾಪಿಲ್ಲಿಯಾಗಿರುವ ದೃಶ್ಯ ಕಾಣಿಸುತ್ತದೆ” ಎಂದು ದೂರಿದರು.

“ವಸತಿ ನಿಲಯಕ್ಕೆ ಊಟದ ಹಾಲ್, ಕಾರ್ಟ್ ಗಾದಿಗೆ, ಸಮರ್ಪಕ ಲೈಟ್, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೋಡಬೇಕೆಂದು” ಆಗ್ರಹಿಸಿದರು.
ಇದನ್ನೂ ಓದಿ: ಯಾದಗಿರಿ | ಈಶ್ವರಚಂದ್ರ ವಿದ್ಯಾಸಾಗರ್ 134ನೇ ಸ್ಮರಣ ದಿನಾಚರಣೆ
“ಹಾಸ್ಟೆಲ್‌ನಲ್ಲಿ ಇಷ್ಟೆಲ್ಲಾ ಅನಾಚಾರಗಳು ನಡೆಯುತ್ತಿದ್ದರೂ ತನಗೆ ಸಂಬಂಧವಿಲ್ಲವೆನ್ನುವಂತೆ ಇರುವ ವಾರ್ಡನ್ನನ್ನು ಕೂಡಲೇ ಅಮಾನತು ಮಾಡಬೇಕು” ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸಪ್ಪ ಮಾತನಾಡಿ, “ಮಾಹಿತಿ ತಿಳಿದಿದೆ. ವಾರ್ಡನ್ ಅವರಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಿರುವೆ” ಎಂದು ತಿಳಿಸಿದರು.