ಉಡುಪಿಗೆ ಆಗಮಿಸಿದ್ದ ರಾಜ್ಯ ಕಂದಾಯ ಸಚಿವರಾದ ಸನ್ಮಾನ್ಯ ಕ್ರಷ್ಣ ಬೈರೇ ಗೌಡರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ನಿಯೋಗವು ಇಂದು ಭೇಟಿ ಮಾಡಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ದಲಿತರು ಎದುರಿಸುತ್ತಿರುವ ಭೂ ಸಂಬಂಧಿ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಸಂಘಟನೆಯು ನಡೆಸುತ್ತಿರುವ ದಲಿತರ ಪರ್ಯಾಯ ಕಂದಾಯ ಅದಾಲತ್ ಗಳ ಬಗ್ಗೆಯೂ ಸಚಿವರಿಗೆ ಮನವರಿಕೆ ಮಾಡಿ ಕೊಡಲಾಯಿತು.

ಮನವಿಯಲ್ಲಿ ಏನಿದೆ ?
ಉಡುಪಿ ಜಿಲ್ಲೆಯಲ್ಲಿ ಪ. ಜಾತಿ ಪ. ಪಂಗಡದ ಶೇಕಡಾ 65 ರಷ್ಟು ಮಂದಿ ಇನ್ನೂ ಕೂಡ ವಸತಿ-ಭೂರಹಿತರಾಗಿರುತ್ತಾರೆ. ಜಿಲ್ಲೆಯಲ್ಲಿ ಭೂಮಿಯ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯು 10-15 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಈ ಕೆಳಗಿನ ಧೂಮಿ ಹಕ್ಕಿನ ಸಮಸ್ಯೆಗಳನ್ನು ತುರ್ತು ಕ್ರಮವಹಿಸಿ ತಾವು ಪರಿಹಾರ ಮಾಡಬೇಕಾಗಿ ಕೋರಿಕೊಳ್ಳುತ್ತೇವೆ.
1) ಉಡುಪಿ ಜಿಲ್ಲೆಯಲ್ಲಿ ಇರುವ ಡಿ.ಸಿ. ಮನ್ನಾ ಭೂಮಿಗಳನ್ನು ಅರ್ಹ ಭೂರಹಿತ ಪ.ಜಾತಿ/ಪಂಗಡದ ಸದಸ್ಯರಿಗೆ ಮರು ಹಂಚಿಕೆ ಮಾಡಬೇಕು.
2) ಅಕ್ರಮ-ಸಕ್ರಮ ಸಮಿತಿಯ ಮುಂದೆ ಇರುವ ಪ.ಜಾತಿ/ಪಂಗಡದ ಜನಗಳ ಅರ್ಜಿಗಳನ್ನು ಆದ್ಯತೆಯ ಮೇಲೆ ಕೂಡಲೇ ಇತ್ಯರ್ಥಪಡಿಸಿ ಅವರಿಗೆ ಭೂ ಮಂಜೂರಾತಿಯನ್ನು ನೀಡಬೇಕು.
3) ಭೂ ಕಂದಾಯ ಅಧಿನಿಯಮ 94ಸಿ, 94ಸಿಸಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟರ ಬಾಕಿ ತಿರಸ್ಕೃತ ಅರ್ಜಿಗಳನ್ನು ಸೂಕ್ತ ಕ್ರಮಗಳ ಮೂಲಕ ಪರಿಶೀಲಿಸಿ ಅವರಿಗೇ ಅವರು ವಾಸ್ತವ್ಯ ಹೊಂದಿರುವ ಭೂಮಿಗಳ ಹಕ್ಕು ಪತ್ರ ವಿತರಣೆ ಮಾಡಬೇಕು.
4) ಜಿಲ್ಲೆಯಲ್ಲಿ ಮಂಜೂರಾತಿ ಪಡೆದು, ಪಹಣಿ ಪತ್ರವನ್ನು ಹೊಂದಿರುವ ಪರಿಶಿಷ್ಟರ ಭೂಮಿಗಳು ಇನ್ನೂ ಕೂಡ ಇತರ ಬಲಿಷ್ಠ ಸಮುದಾಯಗಳ ಸ್ವಾಧೀನತೆಯಲ್ಲಿ ಇದೆ. ಇಂತಹ ಭೂಮಿಗಳನ್ನು ಗುರುತಿಸಿ ಆ ಭೂಮಿಗಳನ್ನು ಮೂಲ ಮಂಜೂರಾತಿದಾರರ ಸ್ವಾಧೀನತೆಗೆ ತೆಗೆದುಕೊಳ್ಳಲು ಕ್ರಮವಹಿಸಬೇಕು.

ನಿಯೋಗದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ವಿಭಾಗೀಯ ಸಂಘಟನಾ ಸಂಚಾಲಕ ಶಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ಭಾಸ್ಕರ್ ನಿಟ್ಟೂರು, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ಶಿವರಾಜ್, ಕಾಪು ತಾಲೂಕು ಸಂಚಾಲಕ ರಾಜೇಂದ್ರನಾಥ್, ಸಂದೀಪ್ ಕಿರಿಮಂಜೇಶ್ವರ, ರಾಘವ ಬೆಳ್ಳೆ, ಉಪಸ್ಥಿತರಿದ್ದರು.