ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆಎನ್‌ಯು) ಸಂಶೋಧನಾ ವಿದ್ಯಾರ್ಥಿ ಮತ್ತು ಸಿಎಎ ವಿರೋಧಿ ಹೋರಾಟಗಾರ ಶಾರ್ಜೀಲ್ ಇಮಾಮ್ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
2020ರ ಜನವರಿ ತಿಂಗಳಿನಿಂದ ಜೈಲಿನಲ್ಲಿರುವ ಇಮಾಮ್ ಅವರು ಕಿಶನ್‌ಗಂಜ್ ಜಿಲ್ಲೆಯ ಬಹದ್ದೂರ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ ಎಂದು ಅವರ ವಕೀಲ ಅಹ್ಮದ್ ಇಬ್ರಾಹಿಂ ತಿಳಿಸಿದ್ದಾರೆ. ಪ್ರಸ್ತುತ ಆರ್‌ಜೆಡಿಯ ಮೊಹಮ್ಮದ್ ಅನ್ಜರ್ ನಯೀಮಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. 2020ರಲ್ಲಿ ಎಐಎಂಐಎಂ ಟಿಕೆಟ್‌ನಲ್ಲಿ ಸ್ಪರ್ಧಿಸಿ ಆಯ್ಕೆಯಾದ ಅನ್ಜರ್ ಪ್ರಸ್ತುತ ಆರ್‌ಜೆಡಿ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಜಾಮಿಯಾ ಮಿಲಿಯಾ ಪ್ರಕರಣ | ಶಾರ್ಜೀಲ್ ಇಮಾಮ್, ಸಫೂರಾ ಬಿಡುಗಡೆ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್
35 ವರ್ಷದ ಇಮಾಮ್ ಬಿಹಾರದ ಜೆಹಾನಾಬಾದ್‌ನ ಕಾಕೋ ಗ್ರಾಮದವರಾಗಿದ್ದು, 2020ರ ಆರಂಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ) ವಿರುದ್ಧ ನಡೆದ ಪ್ರತಿಭಟನೆಗಳ ಸಮಯದಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ.
2020ರ ಜನವರಿ 28ರಂದು ರಸ್ತೆ ತಡೆಗೆ ಕರೆ ನೀಡಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಶಾರ್ಜೀಲ್ ಇಮಾಮ್ ಅವರನ್ನು ದೇಶದ್ರೋಹ ಆರೋಪ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ.
ವಿವಿಧ ರಾಜ್ಯಗಳಲ್ಲಿ ಅವರ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳಲ್ಲಿ ಆರು ಪ್ರಕರಣಗಳಲ್ಲಿ ಇಮಾಮ್‌ಗೆ ಜಾಮೀನು ನೀಡಲಾಗಿದ್ದರೂ, ಯುಎಪಿಎ ಅಡಿಯಲ್ಲಿ ದೆಹಲಿ ಹಿಂಸಾಚಾರದ ಪಿತೂರಿ ಪ್ರಕರಣದಲ್ಲಿ ಇನ್ನೂ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿ ಸುಮಾರು ಮೂರು ವರ್ಷಗಳಿಂದ ಬಾಕಿ ಇದೆ. ಈಗಾಗಲೇ ಈ ದೀರ್ಘಕಾಲದ ಬಂಧನದ ಬಗ್ಗೆ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧವಾಗಿ ನಿಂತವರಿಗೆ ದೇಶದ್ರೋಹದ ಪಟ್ಟ ಕಟ್ಟುವುದನ್ನು ಖಂಡಿಸಿದೆ.
ಇವೆಲ್ಲವುದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಇಮಾಮ್ ಪರವಾಗಿ ಬೆಂಬಲ ಹೆಚ್ಚಾಗುತ್ತಿದೆ, ಅಭಿಯಾನ ನಡೆಯುತ್ತಿದೆ. ಈ ನಡುವೆ ಇಮಾಮ್ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಹಾರದ ವಿಧಾನಸಭಾ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆ.
