ರಷ್ಯಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ದಂಡ ವಿಧಿಸುವುದರ ಜೊತೆಗೆ ಭಾರತಕ್ಕೆ ಶೇಕಡ 25ರಷ್ಟು ಸುಂಕವನ್ನು ವಿಧಿಸಿದೆ. ಇದಾದ ಕೆಲವೇ ಗಂಟೆಗಳ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಭಾರತ ಮತ್ತು ರಷ್ಯಾ ಒಟ್ಟಾಗಿ ತಮ್ಮ ಸತ್ತ ಆರ್ಥಿಕತೆಗಳನ್ನುಉರುಳಿಸಬಹುದು” ಎಂದು ಟೀಕಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ರೂತ್ ಸೋಶಿಯಲ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, “ರಷ್ಯಾದೊಂದಿಗೆ ಭಾರತ ಏನು ಮಾಡುತ್ತದೆ ಎಂಬುದು ನನಗೆ ಮುಖ್ಯವಲ್ಲ. ಆದರೆ ಅವರು ಒಟ್ಟಾಗಿ ತಮ್ಮ ಸತ್ತ ಆರ್ಥಿಕತೆಗಳನ್ನು ಉರುಳಿಸಬಹುದು. ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ. ಭಾರತದಲ್ಲಿ ಸುಂಕ ಹೆಚ್ಚಿವೆ, ವಿಶ್ವದಲ್ಲೇ ಅತ್ಯಧಿಕ ಸುಂಕವಿದೆ. ಅದೇ ರೀತಿ, ರಷ್ಯಾ ಮತ್ತು ಯುಎಸ್ಎಗಳು ಒಟ್ಟಿಗೆ ಯಾವುದೇ ವ್ಯವಹಾರವನ್ನು ಮಾಡುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಭಾರತದ ಮೇಲೆ ಶೇ 25ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಸುಳಿವು
ಇನ್ನು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. “ಮೆಡ್ವೆಡೆವ್ ತಮ್ಮ ಮಾತುಗಳ ಮೇಲೆ ನಿಗಾ ವಹಿಸಬೇಕು. ರಷ್ಯಾದ ವಿಫಲ ಅಧ್ಯಕ್ಷರನ್ನು ಇನ್ನೂ ಅಧ್ಯಕ್ಷರು ಎಂದು ಭಾವಿಸುವವರು ಇದ್ದಾರೆ. ಅದು ತುಂಬಾ ಅಪಾಯಕಾರಿ” ಎಂದರು.
ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಅಮೆರಿಕ ಭಾರತೀಯ ಸರಕುಗಳ ಮೇಲೆ ಶೇಕಡ 25ರಷ್ಟು ಸುಂಕವನ್ನು ಘೋಷಿಸಿದೆ. ಇದಾದ ಒಂದು ದಿನದ ನಂತರ ಟ್ರಂಪ್ ಈ ರಷ್ಯಾ ಮತ್ತು ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ನೆನಪಿಡಿ, ಭಾರತ ನಮ್ಮ ಸ್ನೇಹ ಹೊಂದಿರುವ ದೇಶವಾಗಿದ್ದರೂ ನಾವು ಅವರೊಂದಿಗೆ ಕಡಿಮೆ ವ್ಯವಹಾರ ಮಾಡಿದ್ದೇವೆ. ಏಕೆಂದರೆ ಅವರ ಸುಂಕುಗಳು ವಿಶ್ವದಲ್ಲೇ ಅತ್ಯಧಿಕ. ಯಾವುದೇ ದೇಶಕ್ಕಿಂತ ಅತಿ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆ” ಎಂದು ಟ್ರಂಪ್ ಟ್ರುತ್ ಸೋಶಿಯಲ್ ಹ್ಯಾಂಡಲ್ನಲ್ಲಿ ಪೋಸ್ಟ್ನಲ್ಲಿ ಬರೆದಿದ್ದಾರೆ.
“ಅಲ್ಲದೆ, ಅವರು ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳಲ್ಲಿ ಹೆಚ್ಚಿನದನ್ನು ರಷ್ಯಾದಿಂದ ಖರೀದಿಸಿದ್ದಾರೆ. ರಷ್ಯಾ ಉಕ್ರೇನ್ನಲ್ಲಿ ಹತ್ಯೆಯನ್ನು ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಭಾರತವು ಚೀನಾದಂತೆಯೇ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರ ದೇಶವಾಗಿದೆ. ಇವೆಲ್ಲವೂ ಒಳ್ಳೆಯದಲ್ಲ” ಎಂದು ಹೇಳಿದ್ದಾರೆ.
