ಈ ದಿನ ಸಂಪಾದಕೀಯ | ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ

Date:

Advertisements
ಧರ್ಮಸ್ಥಳದ ಪ್ರಕರಣದಲ್ಲಿ ಧರ್ಮ-ದೇವರು ಇದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಸ್ಲಿಮರನ್ನು, ಕೇರಳವನ್ನು ವಿನಾಕಾರಣ ಎಳೆದುತಂದು ರಾಡಿ ಎಬ್ಬಿಸುತ್ತಿರುವುದು ಅಕ್ಷಮ್ಯ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎಂದು ಆರೋಪಿಸಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ, ಸಾಕ್ಷಿ ದೂರುದಾರ ಶವಗಳನ್ನು ಹೂಳಲಾಗಿದೆ ಎಂದು 13 ಜಾಗಗಳನ್ನು ತೋರಿಸಿದ್ದಾರೆ. ಧರ್ಮಸ್ಥಳ ಸ್ನಾನಘಟ್ಟ ಬಳಿಯ ಕಾಡಿನಲ್ಲಿ ಆತ ತೋರಿಸಿದ ಸ್ಥಳಗಳನ್ನು ವಿಶೇಷ ತನಿಖಾ ತಂಡ ಗುರುತು ಮಾಡಿದೆ. ಸುಮಾರು 10 ಕಾರ್ಮಿಕರ ತಂಡ ಅಗೆಯುವ ಕಾರ್ಯಾಚರಣೆಗಿಳಿದಿದೆ.

ಧರ್ಮಸ್ಥಳದ ಸ್ನಾನಘಟ್ಟದ ಸುತ್ತಮುತ್ತ ಮೃತದೇಹಗಳ ಕುರುಹು ಪತ್ತೆಗೆ ವಿಶೇಷ ತನಿಖಾ ತಂಡದ ನೇತೃತ್ವದಲ್ಲಿ ಅಗೆಯಲು ಆರಂಭಿಸುತ್ತಿದ್ದಂತೆ ವಿಪಕ್ಷ ನಾಯಕ ಆರ್. ಅಶೋಕ್, ‘ಧರ್ಮಸ್ಥಳದಲ್ಲಿ ಆಗಿರುವ ಮರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಗತಿಪರ ಸಂಘಟನೆಗಳು ಅವರ ಪರವಾದ ವರದಿಯನ್ನೇ ಎಸ್‌ಐಟಿ ನೀಡಬೇಕು ಎಂದು ಬಯಸುತ್ತಿವೆ. ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ. ಯಾವುದೋ ಕಾಣದ ಕೈ ಇಲ್ಲಿ ಕೆಲಸ ಮಾಡುತ್ತಿದೆ. ಆರೋಪ ಮಾಡುತ್ತಿರುವವರು ಯಾರೋ ಮುಸ್ಲಿಂ ಆಗಿದ್ದಾನೆ’ ಎಂದಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ಅವರ ಈ ವಿವೇಚನಾರಹಿತ ಹೇಳಿಕೆಯಿಂದ ಸಿಟ್ಟಿಗೆದ್ದಿರುವ ಚಿತ್ರನಟ ಪ್ರಕಾಶ್ ರಾಜ್, ‘ಅಲ್ರೀ ಅಶೋಕ್‌ ಅವರೇ, ದಶಕಗಳಿಂದ ನಮ್ಮ ಹೆಣ್ಣುಮಕ್ಕಳ ಅತ್ಯಾಚಾರಗಳಾಗಿವೆ, ಅಮಾನವೀಯ ಹತ್ಯೆಗಳಾಗಿವೆ, ಜನರ ಆಕ್ರೋಶ ಭುಗಿಲೆದ್ದಿದೆ. ಕೊನೆಗೂ ಸರ್ಕಾರ ಸ್ಪಂದಿಸಿ ಎಸ್‌ಐಟಿ ರಚನೆಯಾಗಿದೆ. ತನಿಖೆ ನಡೆಯುತ್ತಿದೆ. ಮಧ್ಯದಲ್ಲಿ ನಿಮ್ದೇನ್ರಿ. ನೀವು ಜನ ಪ್ರತಿನಿಧಿಗಳಾ… ಅಥವಾ ಇನ್ಯಾರದೋ ದಲ್ಲಾಳಿಗಳಾ…’ ಎಂದು ಕೊಂಚ ಸಿಟ್ಟಿನಿಂದಲೇ ಅಶೋಕ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಾನವೀಯತೆಯ ಪಸೆ ತುಸುವಾದರೂ ಉಳಿದಿದೆಯೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷದ ನಾಯಕನಿಗೂ ಇದೆ. ಹೀಗಾಗಿ, ಈ ಸ್ಥಾನವನ್ನು ಡಿಫ್ಯಾಕ್ಟೋ ಚೀಫ್ ಮಿನಿಸ್ಟರ್ ಎಂದೇ ಕರೆಯಲಾಗುತ್ತದೆ. ಆಡಳಿತ ಪಕ್ಷದ ಲೋಪ–ದೋಷಗಳನ್ನು ತಿದ್ದುವ ಮೂಲಕ ಜನರ ನೋವಿಗೆ ದನಿಯಾಗಬೇಕಾದ ಗುರುತರ ಹೊಣೆ ಈ ಸ್ಥಾನದ್ದಾಗಿದೆ. ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ ಜಾರದಂತೆ ಎಚ್ಚರದಲ್ಲಿಡುವ ಮಹತ್ವದ ಹೊಣೆಯೂ ಇದೆ. ಪ್ರಜಾಪ್ರಭುತ್ವದ ಯಶಸ್ಸು ವಿರೋಧ ಪಕ್ಷಗಳ ರಚನಾತ್ಮಕ ಪಾತ್ರವನ್ನು ಅವಲಂಬಿಸಿದೆ.

ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವಿರೋಧ ಪಕ್ಷಗಳು ಮತ್ತು ನಾಯಕರು ನಿರ್ವಹಿಸಬೇಕಾದ ಪಾತ್ರವನ್ನು ಪ್ರಜ್ಞಾವಂತರು, ಪತ್ರಕರ್ತರು, ವಕೀಲರು, ವಿವಿಧ ಸಂಘಟನೆಗಳ ನಾಯಕರು, ನಿವೃತ್ತ ನ್ಯಾಯಾಧೀಶರು ಕೈಗೆತ್ತಿಕೊಂಡಿದ್ದಾರೆ. ಧರ್ಮಸ್ಥಳ ಪ್ರಕರಣ ಕುರಿತು ಮರುತನಿಖೆಗೆ ಸಿದ್ಧವಿಲ್ಲದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದು, ವಿಶೇಷ ತನಿಖಾ ತಂಡ ರಚಿಸುವಂತೆ, ತನಿಖೆಯಾಗುವಂತೆ ಶ್ರಮಿಸಿದ್ದಾರೆ. ಸಮಾಧಿಯಾಗಿದ್ದ ಸತ್ಯ-ನ್ಯಾಯಕ್ಕೆ ಜೀವ ತುಂಬಿದ್ದಾರೆ. ಅಸಹಾಯಕರಲ್ಲಿ ಆಶಾಕಿರಣ ಮೂಡಿಸಿದ್ದಾರೆ.

ಜನರೇ ಮುಂದಾಗಿ ಸರ್ಕಾರದ ಮೇಲೆ ಒತ್ತಡ ತಂದಾಗ, ವಿರೋಧ ಪಕ್ಷಗಳು ಮಾಡುವ ಕೆಲಸವನ್ನು ಜನರು ಮಾಡುತ್ತಿದ್ದಾಗ, ಕೊಂಚವಾದರೂ ಮಾನ-ಮರ್ಯಾದೆ ಉಳಿಸಿಕೊಂಡಿದ್ದರೆ ವಿರೋಧ ಪಕ್ಷಗಳು ಜನರೊಂದಿಗೆ ನಿಲ್ಲಬೇಕು. ನೊಂದವರಿಗೆ ನ್ಯಾಯ ಕೊಡಿಸಬೇಕು.

ದುರದೃಷ್ಟಕರ ಸಂಗತಿ ಎಂದರೆ, ವಿರೋಧ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಮತ್ತದರ ನಾಯಕ ಆರ್. ಅಶೋಕ್, ನೊಂದವರ ವಿರುದ್ಧ ಮಾತನಾಡುತ್ತಿದ್ದಾರೆ. ವಿಶೇಷ ತನಿಖಾ ತಂಡದ ಆತ್ಮಸ್ಥೈರ್ಯ ಕುಂದಿಸುವ ಮಾತುಗಳನ್ನು ಆಡುತ್ತಿದ್ದಾರೆ. ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇದನ್ನು ನೋಡಿಯೇ ನಟ ಪ್ರಕಾಶ್ ರಾಜ್, ‘ನೀವು ಜನ ಪ್ರತಿನಿಧಿಗಳಾ… ಅಥವಾ ಇನ್ಯಾರದೋ ದಲ್ಲಾಳಿಗಳಾ…’ ಎಂದಿರುವುದು.

ಹೀಗೆ ಹೇಳಲು ಕಾರಣವೂ ಇದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಧ್ವಾನಗಳು ಹಲವಿದ್ದರೂ, ಕೇಳುವ ವಿರೋಧ ಪಕ್ಷವೇ ಇಲ್ಲವಾಗಿದೆ. ತೋರಿಕೆಗಾದರೂ ದೊಡ್ಡ ಗಂಟಲಿನಲ್ಲಿ ಕೂಗಾಡುತ್ತಿದ್ದ ಎಚ್.ಡಿ. ಕುಮಾರಸ್ವಾಮಿ, ಮಾದುಸ್ವಾಮಿ, ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪನಂತಹ ನಾಯಕರು ಇಲ್ಲದಿರುವುದು ಆಳುವ ಪಕ್ಷಕ್ಕೆ ಅನುಕೂಲವಾಗಿದೆ.

ಜೊತೆಗೆ ರಾಜ್ಯದಲ್ಲಿ ಈ ಹಿಂದೆ ಬಂದುಹೋದ ವಿರೋಧ ಪಕ್ಷಗಳ ನಾಯಕರತ್ತ, ಅವರು ನಿರ್ವಹಿಸಿದ ಪಾತ್ರದತ್ತ ನೋಡಿದರೆ, ಅವರು ತಮ್ಮದೇ ಆದ ಛಾಪು ಮೂಡಿಸಿರುವುದು; ಆ ಸ್ಥಾನಕ್ಕೊಂದು ಘನತೆ, ಸಾರ್ವಜನಿಕ ಸಭ್ಯತೆಯ ಮೆರುಗು ಮೂಡಿಸಿರುವುದು; ಜನಪರ ಕಾಳಜಿಯ ಚೌಕಟ್ಟನ್ನು ರೂಪಿಸಿಕೊಟ್ಟಿರುವುದು ಎದ್ದು ಕಾಣುತ್ತದೆ. ಅದು ಇತಿಹಾಸದ ಪುಟಗಳಲ್ಲೂ ದಾಖಲಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹದಾಯಿ: ನಾಯಕರೇ ನಾಡದ್ರೋಹಿಗಳು

ಅಂತಹ ಮಹತ್ವದ ಸ್ಥಾನದಲ್ಲಿ ಈಗ ಆರ್. ಅಶೋಕ್ ಬಂದು ಕೂತಿದ್ದಾರೆ. ರಾಜ್ಯ ಮಟ್ಟದ ನಾಯಕನಾಗಿ ಹೊರಹೊಮ್ಮುವ ಅವಕಾಶವನ್ನು ಪಕ್ಷ ಅವರಿಗೆ ಕಲ್ಪಿಸಿದೆ. ಆದರೆ ಅವರು, ಆಳುವ ಪಕ್ಷದ ಪ್ರತಿಯೊಂದು ನಡೆಯನ್ನು ವಿರೋಧಿಸುವುದೇ ವಿರೋಧ ಪಕ್ಷದ ಕೆಲಸವೆಂದುಕೊಂಡಿದ್ದಾರೆ. ದಿನಕ್ಕೊಂದು ಹೇಳಿಕೆ ಕೊಡುವುದು, ಅದು ಮಾಧ್ಯಮಗಳಲ್ಲಿ ಬರುವುದಕ್ಕಷ್ಟೇ ತೃಪ್ತರಾಗುತ್ತಿದ್ದಾರೆ.

ಧರ್ಮಸ್ಥಳದ ಪ್ರಕರಣದಲ್ಲಿ ಧರ್ಮ-ದೇವರು ಇದೆ ಎಂಬ ಕಾರಣಕ್ಕೆ ಬಿಜೆಪಿಯ ಅಶೋಕ್ ಅವರು ಮುಸ್ಲಿಮರನ್ನು, ಕೇರಳವನ್ನು ವಿನಾಕಾರಣ ಎಳೆದುತಂದು ರಾಡಿ ಎಬ್ಬಿಸುತ್ತಿರುವುದು ಅಕ್ಷಮ್ಯ. ಆ ಪ್ರಕರಣದಲ್ಲಿ ನಮ್ಮ ಮನೆಯ ಹೆಣ್ಣುಮಕ್ಕಳಿದ್ದಾರೆ. ಆ ಕುಟುಂಬಸ್ಥರು ನೊಂದಿದ್ದಾರೆ. ಅವರ ಪರ ನಿಲ್ಲಬೇಕಾಗಿದೆ, ಅವರಿಗೆ ನ್ಯಾಯ ಕೊಡಿಸಬೇಕಾಗಿದೆ. ಇಲ್ಲೂ ನೀವು ಬಲಿಷ್ಠರ, ಬಲಾಢ್ಯರ ದಲ್ಲಾಳಿಗಳಂತೆ ವರ್ತಿಸಿದರೆ, ಅದು ಜನದ್ರೋಹವಾಗುತ್ತದೆ. ಆಳುವ-ಕೇಳುವ ಪಕ್ಷಗಳು ಒಂದಾದಂತಾಗಿ, ಅದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತದೆ.   

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X