ಬೆಂಗಳೂರು ನಗರವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ನಗರದಲ್ಲಿ ಹಲವಾರು ವರ್ಗಗಳು, ಸಮುದಾಯಗಳು ಒಟ್ಟಿಗೆ ಬದುಕು ಕಟ್ಟಿಕೊಳ್ಳುತ್ತಿವೆ. ಆದರೆ, ನಗರದಲ್ಲಿರುವ ಎಲ್ಲರಿಗೂ ಬೆಂಗಳೂರು ನಮ್ಮದು ಅನ್ನಿಸಬಹುದೇ? ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳೇನು- ಅವುಗಳ ಪರಿಹಾರಕ್ಕೆ ಇರುವ ಸಾಧ್ಯತೆಗಳು ಯಾವುದು ಎಂಬುದನ್ನು ಚರ್ಚಿಸಲು ‘ಜಾಗೃತ ಕರ್ನಾಟಕ’ ಸಂಘಟನೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಜಾಗೃತ ಕರ್ನಾಟಕದ ಮುಖಂಡ ರಾಜಶೇಖರ್ ಅಕ್ಕಿ, “‘ಎಲ್ಲರಿಗೂ ಇದು ನಮ್ಮ ಬೆಂಗಳೂರು ಆಗಲು ಇರುವ ಸವಾಲುಗಳು ಮತ್ತು ಸಾಧ್ಯತೆಗಳು’ ಎಂಬ ವಿಷಯ ಕುರಿತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಆಗಸ್ಟ್ 2ರ ಶನಿವಾರ ಮಧ್ಯಾಹ್ನ 2.30ರಿಂದ 6.30ವರೆಗೆ, ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆ, Institute of Agricultural Technologies (IAT)ಯಲ್ಲಿ ನಡೆಯಲಿದೆ” ಎಂದು ತಿಳಿಸಿದ್ದಾರೆ.
“ಬೆಂಗಳೂರಿನಲ್ಲಿ ಹಲವಾರು ವರ್ಗಗಳು, ಸಮುದಾಯಗಳು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳೇನು? ಇಲ್ಲಿ ಬದುಕು ಕಟ್ಟಿಕೊಳ್ಳಲು ಯಾರಿಗೆ ಎಷ್ಟು ಸಾಧ್ಯವಾಗುತ್ತಿದೆ? ಬೆಂಗಳೂರು ಒಂದು ಸಮುದಾಯವಾಗಿದೆಯೇ? ಈ ನಗರಕ್ಕೊಂದು ವ್ಯಕ್ತಿತ್ವವಿದೆಯೇ? ಇಲ್ಲಿ ಖಿನ್ನತೆ, ಅನಾಥಭಾವ, ಅನ್ಯ ಭಾವಗಳು ಹೆಚ್ಚಾಗುತ್ತಿವೆಯೇ, ಕಡಿಮೆಯಾಗುತ್ತಿವೆಯೇ? ಮುಂತಾದ ಮೂಲಭೂತ ಸಮಸ್ಯೆಗಳು. ಸವಾಲುಗಳು ಹಾಗೂ ಸಂಭಾವ್ಯ ಉತ್ತರಗಳ ಬಗ್ಗೆ ಗಹನವಾದ ಚರ್ಚೆಯನ್ನು ನಡೆಸಲಿದ್ದೇವೆ” ಎಂದು ವಿವರಿಸಿದ್ದಾರೆ.

“ಕಾರ್ಯಕ್ರಮದಲ್ಲಿ ಮೂರು ಗೋಷ್ಠಿಗಳು ನಡೆಯಲಿದ್ದು, ಮೊದಲ ಗೋಷ್ಠಿಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಕುರಿತ ಚರ್ಚೆ ನಡೆಯಲಿದೆ. ಗೋಷ್ಠಿಯಲ್ಲಿ ವಕೀಲ ವಿನಯ್ ಶ್ರೀನಿವಾಸ್, ಸ್ಲಂ ಜನಾಂದೋಲನ ಕರ್ನಾಟಕದ ನರಸಿಂಹಮೂರ್ತಿ, ಒಳಮೀಸಲಾತಿ ಹೋರಾಟಗಾರ ಬಸವರಾಜ ಕೌತಾಳ, ವಿಷನ್ ಟ್ರಸ್ಟ್‌ನ ಶಾನ್ ಅಹದ್ ವಿಷಯ ಮಂಡನೆ ಮಾಡಲಿದ್ದಾರೆ” ಎಂದು ಅಕ್ಕಿ ತಿಳಿಸಿದ್ದಾರೆ.
“2ನೇ ಗೋಷ್ಠಿಯಲ್ಲಿ ‘ಬೆಂಗಳೂರಿನ ಮಾನಸಿಕ ಆರೋಗ್ಯ, ಸವಾಲುಗಳು ಮತ್ತು ಸಾಧ್ಯತೆಗಳು’ ವಿಷಯದ ಮೇಲೆ ಮಾನಸಿಕ ಆರೋಗ್ಯ ತಜ್ಞರಾದ ಪಾದಸ್ ಶರ್ಮ ವಿಚಾರ ಮಂಡನೆ ಮಾಡಲಿದ್ದಾರೆ. ‘ನಗರ ಯೋಜನೆ ಮತ್ತು ಆಡಳಿತದ ತಜ್ಞರು ನಗರ ಯೋಜನೆ ಹೇಗಿರಬಹುದು’ ಎಂಬುದನ್ನು ಚಂಪಕ ರಾಜಗೋಪಾಲ್ ಮಂಡಿಸಲಿದ್ದಾರೆ. ‘ಎಲ್ಲರಿಗೂ ಆಗುವ ಅಭಿವೃದ್ಧಿ’ ವಿಷಯದ ಮೇಲೆ ನಗರ ನೀತಿ ತಜ್ಞರು ಮತ್ತು ಸಂಶೋಧಕರಾದ ಮ್ಯಾಥ್ ಇಡಿಕುಲ ಮಾತನಾಡಲಿದ್ದಾರೆ” ಎಂದು ವಿವರಿಸಿದ್ದಾರೆ.
“ಮೂರನೇ ಗೋಷ್ಠಿಯಲ್ಲಿ ‘ರಾಜಕೀಯ ಮತ್ತು ಸಾಮಾಜಿಕ ಸಂಘಟಿಸುವಿಕೆ’ ಕುರಿತ ಚರ್ಚೆಗಳು ನಡೆಯಲಿವೆ. ಈ ಸಂವಾದದಲ್ಲಿ ಜಯನಗರ ಮಾಜಿ ಶಾಸಕಿ ಸೌಮ್ಯ ರೆಡ್ಡಿ, ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಸುಮ ಹನುಮಂತರಾಯಪ್ಪ ಭಾಗಿಯಾಗಲಿದ್ದಾರೆ” ಎಂದು ತಿಳಿಸಿದ್ದಾರೆ.