ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಮೂರು ತಿಂಗಳಾಗುತ್ತಾ ಬಂದರೂ ರಾಜ್ಯದ ವಿಪಕ್ಷ ನಾಯಕ ಇನ್ನೂ ಆಯ್ಕೆಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರವಿಡೀ ಕಾದರೂ ಹೈಕಮಾಂಡ್ ನಾಯಕರ ಭೇಟಿಗೆ ಸಾಧ್ಯವಾಗಿಲ್ಲ.
ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆ ಹಾಗೂ ವಿಪಕ್ಷ ನಾಯಕನ ಆಯ್ಕೆಯ ಚರ್ಚೆಗಾಗಿ ಹೈಕಮಾಂಡ್ನಿಂದ ಬುಲಾವ್ ಬಂದಿತ್ತು ಎಂಬ ಸುದ್ದಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯೇ ಬೊಮ್ಮಾಯಿ ಅವರು ದೆಹಲಿಗೆ ತೆರಳಿದ್ದರು. ಸೋಮವಾರ ಇಡೀ ದಿನದ ಪ್ರಯತ್ನದ ಬಳಿಕವೂ ವರಿಷ್ಠರ ಭೇಟಿ ಸಾಧ್ಯವಾಗಿಲ್ಲ.
ಬಿಜೆಪಿ ಹೈಕಮಾಂಡ್ ಲೋಕಸಭೆ, ರಾಜ್ಯಸಭೆಯಲ್ಲಿ ಸಾಲು ಸಾಲು ಮಸೂದೆಗಳ ಮಂಡನೆಯಲ್ಲಿ ನಿರತವಾಗಿದೆ.
ರಾಷ್ಟ್ರೀಯ ನಾಯಕರ ಭೇಟಿ ಲಭ್ಯವಾಗದ ಹಿನ್ನೆಲೆಯಲ್ಲಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಬೊಮ್ಮಾಯಿ, ‘ನನಗೆ ವರಿಷ್ಠರು ಬುಲಾವ್ ನೀಡಿರಲಿಲ್ಲ’ ಎಂದು ಸಮಜಾಯಿಷಿ ನೀಡಿದರು.
‘ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿಗೆ ಬನ್ನಿ ಎಂದು ರಾಜ್ಯದ ಕೆಲ ಸಂಸದರು ಆಹ್ವಾನಿಸಿದ್ದರು. ನನಗೂ ಅವರನ್ನು ಭೇಟಿಯಾಗಿ, ಕೆಲವೊಂದು ಮಾತುಕತೆ ನಡೆಸುವುದಿತ್ತು. ಹಾಗಾಗಿ ಬಂದಿದ್ದೆ’ ಎಂದರು.
‘ರಾಜ್ಯಸಭೆಯಲ್ಲಿ ಅಮಿತ್ ಶಾ ಅಲ್ಲಿ ಬ್ಯುಝಿಯಾಗಿದ್ದಾರೆ. ಹಾಗಾಗಿ, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ, ಜೆ.ಪಿ.ನಡ್ಡಾ ಅವರನ್ನು ಮಂಗಳವಾರ ಭೇಟಿ ಮಾಡುವ ಉದ್ದೇಶವಿದ್ದು, ಕಾಲಾವಕಾಶ ಕೇಳಿದ್ದೇನೆ. ಶಾ ಅವರು ಮಂಗಳವಾರ ಸಮಯಾವಕಾಶ ಕೊಟ್ಟರೆ ಭೇಟಿಯಾಗುತ್ತೇನೆ’ ಎಂದರು.
‘ಸದ್ಯ ಸಂಸತ್ ಅಧಿವೇಶನ ನಡೆಯುತ್ತಿದೆ. ಐದು ರಾಜ್ಯಗಳ ಚುನಾವಣೆಗೆ ಸಿದ್ಧತೆ ನಡೆಸಬೇಕಿದೆ. ನಮ್ಮ ರಾಷ್ಟ್ರೀಯ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಬಗ್ಗೆ ಗಮನ ಹರಿಸಲಿದ್ದಾರೆ’ ಎಂದು ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದಾಗ, ಈ ರೀತಿ ಪ್ರತಿಕ್ರಿಯಿಸಿದರು.
ಬಸವರಾಜ ಬೊಮ್ಮಾಯಿಯವರು ಇಂದು(ಮಂಗಳವಾರ) ಹೈಕಮಾಂಡ್ ನಾಯಕರ ಭೇಟಿ ಮಾಡುವ ಸಾಧ್ಯತೆ ಇದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಮಯ ಕೇಳಿದ್ದಾರೆ. ಇಂದು ವರಿಷ್ಠರಿಂದ ಸಮಯ ಸಿಗುವ ಸಾಧ್ಯತೆ ಇದೆ. ಆದರೆ, ಅದು ಇನ್ನೂ ಅಧಿಕೃತಗೊಂಡಿಲ್ಲ.