ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ.
ನೇಪಾಳ ಗಡಿಗೆ ಹೊಂದಿಕೊಂಡಂತಿರುವ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ರೋಶನ್ ಘರ್ ಹೊರಠಾಣೆಯ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಸಬ್-ಇನ್ಸ್‌ಪೆಕ್ಟರ್ ನರೇಂದ್ರಾ ಸಿಂಗ್ ಅವರು ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನರೇಂದ್ರಾ ಸಿಂಗ್ ಅವರ ಎದೆ ಭಾಗಕ್ಕೆ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದೇಹದ ಬಳಿ ಕಾರ್ಬೈನ್ ಪತ್ತೆಯಾಗಿದೆ. ಆದರೆ, ಯಾವುದೇ ಡೆತ್‌ನೋಟ್ ಲಭ್ಯವಾಗಿಲ್ಲ ಎಂದು ಶ್ರಾವಸ್ತಿಯ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಚೌರಾಸಿಯಾ ತಿಳಿಸಿದ್ದಾರೆ.
ಕೌಟುಂಬಿಕ ಕಾರಣಗಳಿಂದಾಗಿ ನರೇಂದ್ರ ಸಿಂಗ್ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.