ಸಾಮ್ರಜ್ಯಶಾಹಿ ಮತ್ತು ರಾಜಪ್ರಭುತ್ವ ವ್ಯವಸ್ಥೆ ವಿರುದ್ಧ ಪತ್ರಿಕೋದ್ಯಮ ಆರಂಭವಾಗಿದೆ ಎಂದು ರಾಯಚೂರಿನ ಪ್ರಗತಿಪರ ಚಿಂತಕ ಡಾ. ಚಂದ್ರಗಿರೀಶ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ತಾಪುರ ತಾಲೂಕು ಘಟಕದಿಂದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಪತ್ರಿಕೋದ್ಯಮ ಅತ್ಯಂತ ಜವಾಬ್ದಾರಿಯುತವಾದ ಕೆಲಸ. ಅನ್ಯಾಯದ ವಿರುದ್ಧ ಧ್ವನಿಯಾಗುವ ಅಸ್ತ್ರವಾಗಿದೆ. ಆದರೆ, ಪತ್ರಿಕಾರಂಗ ಇಂದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಉಳಿದಿದೆಯಾ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ. ಸಾಮಾಜಿಕ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮಗಳ ನಡುವೆಯೂ ಪತ್ರಿಕೆಗಳು ಉಳಿದಿರುವುದು ನಂಬಿಕೆಗೆ ಸಾಕ್ಷಿಯಾಗಿದೆ. ಕನಿಷ್ಠ ಗೌರವಧನದಲ್ಲಿ ಗ್ರಾಮೀಣದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಬದುಕು ಸಂಕಷ್ಟ ಎದುರಿಸುವಂತಿದೆʼ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಪತ್ರಿಕೆ ಓದುವ ಖುಷಿ ಸಾಮಾಜಿಕ ಜಾಲತಾಣಗಳಿಂದ ಸಿಗುವುದಿಲ್ಲ. ಡಿಜಿಟಲ್ ಮಾಧ್ಯಮವನ್ನು ಸಾಮಾಜಿಕ ಮಾಧ್ಯಮ ಎನ್ನುವುದು ಸರಿಯಾದ ಪದ ಅಲ್ಲ. ಸಾಮಾಜಿಕ ಮಾಧ್ಯಮ ಅದೆಷ್ಟೇ ಮುಂದುವರೆದರೂ ಪತ್ರಿಕೆಗಳ ಓದುಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯಗಳ ಕೊರತೆಯಿದೆ. ಅತಿ ಹೆಚ್ಚು ಸುದ್ದಿ ಬರುವುದು ಗ್ರಾಮೀಣ ಪತ್ರಕರ್ತರು ಎಂದರೆ ತಪ್ಪಾಗಲಾರದು. ಸರ್ಕಾರ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ವಿತರಣೆಯ ಮಾನದಂಡ ಸಡಿಲಗೊಳಿಸುವ ಮೂಲಕ ಎಲ್ಲ ಪತ್ರಕರ್ತರಿಗೆ ಬಸ್ ಪಾಸ್ ಸಿಗುವಂತೆ ಮಾಡಬೇಕುʼ ಎಂದರು.
ಶಹಾಬಾದ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮಾತನಾಡಿ, ʼದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲ ಎಂಬ ಮಾತು ಸುಳ್ಳಾಗಿದೆ. ಸುದ್ದಿಯಲ್ಲಿ ನಿಖರತೆ, ಸ್ಪಷ್ಟತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಕಾರಣಕ್ಕೆ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವ ಕಾಪಾಡಿಕೊಂಡಿದೆʼ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ್ ಸತ್ಯಂಪೇಟೆ, ಸ್ಥಳೀಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜ ಎಸ್. ಮಲ್ಕಂಡಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಚಿತ್ತಾಪುರ ಪುರಸಭೆ ಅಧ್ಯಕ್ಷ ಅನ್ನಪೂರ್ಣ ನಾಗಪ್ಪ ಕಲ್ಲಕ್, ಭಾಜಪ ಚಿತ್ತಾಪುರ ಮಂಡಲ ಅಧ್ಯಕ್ಷ ರವಿಂದ್ರ ಸಜ್ಜನಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ತಾಲೂಕು ಪಂಚಾಯತ್ ಇಒ ಮಹ್ಮದ್ ಅಕ್ರಂ ಪಾಷಾ ಉಪಸ್ಥಿತರಿದ್ದರು.
ಇದನ್ನೂ ಓದಿ : ಯಾದಗಿರಿ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಆ.18ರಂದು ಬೃಹತ್ ಪ್ರತಿಭಟನೆ
ಈ ಸಂದರ್ಭದಲ್ಲಿ ವೀರೇಂದ್ರ ಕುಮಾರ ಕೊಲ್ಲೂರ, ಕಾಶಿನಾಥ ಗುತ್ತೇದಾರ, ಜಗದೇವ ಕುಂಬಾರ, ದಯಾನಂದ ಖಜೂರಿ, ಸಂತೋಷಕುಮಾರ ಕಟ್ಟಿಮನಿ, ಅನಂತನಾಗ ದೇಶಪಾಂಡೆ, ವಾಸುದೇವ ಚವ್ಹಾಣ, ಸೂರ್ಯಕಾಂತ ರದ್ದೇವಾಡಿ, ವೀರಣ್ಣ ಯಾರಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ರವಿಶಂಕರ ಬುರ್ಲಿ, ಚಂದ್ರಕಾಂತ ಬಳ್ಳಾ, ಲಕ್ಷ್ಮೀ ಕುಲಕರ್ಣಿ, ಸೀತಾ ಹೆರೂರು, ಮಂಜುಳಾ ಗುಡಬಾ, ಶೇಖ ಅಲ್ಲಾಭಕ್ಷ, ರವಿ ರಾಠೋಡ, ಅಣ್ಣರಾಯ ಮುಡಬೂಳ ಶಿವಕುಮಾರ ಕುಸಾಳೆ, ಸೇರಿದಂತೆ ಹಲವರಿದ್ದರು. ಜಗದೇವ ದಿಗ್ಗಾಂವಕರ ಸ್ವಾಗತಿಸಿದರು. ಮಡಿವಾಳಪ್ಪ ಹೆರೂರ ನಿರೂಪಿಸಿದರು. ರಾಯಪ್ಪ ಕೊಟಗಾರ ವಂದಿಸಿದರು.