ಮಾಲೇಗಾಂವ್ ಸ್ಫೋಟಗಳ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಮತ್ತು ಎನ್.ಐ.ಎ. 2017ರಲ್ಲಿ ಸಲ್ಲಿಸಿದ್ದ ಸಾಕ್ಷೀದಾರರ ಹೇಳಿಕೆಗಳು ಮತ್ತು ತನಿಖಾ ವರದಿಗಳಲ್ಲಿನ ವೈರುಧ್ಯಗಳತ್ತ ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಬೆರಳು ಮಾಡಿ ತೋರಿದ್ದವು.
2017ರ ಏಪ್ರಿಲ್ ನಲ್ಲಿ ಬಾಂಬೆ ಹೈಕೋರ್ಟು ಆಪಾದಿತರಲ್ಲೊಬ್ಬರಾದ ಪ್ರಗ್ಯಾಸಿಂಗ್ ಠಾಕೂರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಸಾಕ್ಷೀದಾರರು ತಮಗೆ ಚಿತ್ರಹಿಂಸೆ ನೀಡಿದ ಆಪಾದನೆಗಳಿಂದ ಹಿಂದೆ ಸರಿದಿರುವುದೇ ಅಲ್ಲದೆ, ಅವರು ನೀಡಿರುವ ಹೇಳಿಕೆಗಳು ಪರಸ್ಪರ ವ್ಯತಿರಿಕ್ತವಾಗಿವೆ ಎಂದು ಹೈಕೋರ್ಟು ಇದೇ ಸಂದರ್ಭದಲ್ಲಿ ಹೇಳಿದ್ದುಂಟು.
ಮತ್ತೊಬ್ಬ ಆಪಾದಿತ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರಿಗೆ ಸುಪ್ರೀಮ್ ಕೋರ್ಟು 2017ರ ಆಗಸ್ಟ್ ನಲ್ಲಿ ಜಾಮೀನು ಮಂಜೂರು ಮಾಡಿತ್ತು. ಎ.ಟಿ.ಎಸ್. ಮತ್ತು ಎನ್.ಐ.ಎ ಅನುಕ್ರಮವಾಗಿ ಸಲ್ಲಿಸಿದ್ದ ಆಪಾದನಾಪಟ್ಟಿ ಮತ್ತು ಪೂರಕ ಆಪಾದನಾಪಟ್ಟಿಯಲ್ಲಿ ವೈರುಧ್ಯಗಳಿವೆ. ಇವುಗಳನ್ನು ವಿಚಾರಣೆಯ ಸಂದರ್ಭದಲ್ಲಿ ಪರೀಕ್ಷಿಸಬಹುದು ಎಂದು ಸೂಚಿಸಿತ್ತು.
2008ರ ಮಾಲೇಗಾಂವ್ ಸ್ಫೋಟಕ್ಕೆ ಮುನ್ನ ನಡೆದ ಸಭೆಗಳಿಗೆ ತಾವು ಸೇನೆಯ ವತಿಯಿಂದ ಗೂಢಚಾರಿಕೆ ಮಾಡಲು ಹಾಜರಾದದ್ದಾಗಿ ಪುರೋಹಿತ್ 2021ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಮುಂದೆ ನಿವೇದಿಸಿಕೊಂಡಿದ್ದರು. ಅಭಿನವ್ ಭಾರತ್ ಎಂಬ ಬಲಪಂಥೀಯ ಸಂಘಟನೆಯ ಕುರಿತು ಗೋಪ್ಯ ಮಾಹಿತಿ ಸಂಗ್ರಹಿಸಲು ಸೇನೆಯೇ ತಮ್ಮನ್ನು ನಿಯುಕ್ತಿ ಮಾಡಿದ್ದಾಗಿಯೂ, ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಿದ್ದಾಗಿಯೂ ಅವರು ಹೇಳಿಕೊಂಡಿದ್ದರು.
ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂಬ ಪುರೋಹಿತ್ ಮನವಿಯನ್ನು ಹೈಕೋರ್ಟು 2023ರಲ್ಲಿ ವಜಾ ಮಾಡಿತ್ತು. ಪುರೋಹಿತ್ ಅವರು ಹೇಳಿರುವ ಸಂಗತಿಗಳನ್ನು ಒಪ್ಪಿದರೂ ಪ್ರಶ್ನೆಯೊಂದು ಉಳಿದೇ ಉಳಿಯುತ್ತದೆ. ಅದೆಂದರೆ, “ಆರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡು, ನೂರು ಮಂದಿಗೆ ಗಂಭೀರ ಗಾಯಗಳನ್ನು ಉಂಟು ಮಾಡಿದ ಬಾಂಬ್ ಸ್ಫೋಟವನ್ನು ಪುರೋಹಿತ್ ಯಾಕೆ ನಿಲ್ಲಿಸಲಿಲ್ಲ?”
ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಪುರೋಹಿತ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಮ್ ಕೋರ್ಟು 2023ರಲ್ಲೇ ವಜಾ ಮಾಡಿತ್ತು.
ಮಾಲೇಗಾಂವ್ ಸ್ಫೋಟದ ವಿಚಾರಣೆಯ ಉಸ್ತುವಾರಿ ನಡೆಸಿದ್ದ ಬಾಂಬೆ ಹೈಕೋರ್ಟು, ಎನ್.ಐ.ಎ. ಪ್ರತಿ ‘ಹಿಯರಿಂಗ್’ ಗೆ ಒಬ್ಬೊಬ್ಬರೇ ಸಾಕ್ಷೀದಾರರನ್ನು ಕರೆದು ನ್ಯಾಯಾಂಗದ ಸಮಯವನ್ನು ವ್ಯರ್ಥಗೊಳಿಸುತ್ತಿರುವ ಕುರಿತು ಕಾಳಜಿ ಪ್ರಕಟಿಸಿತ್ತು. ಪ್ರತಿ ಹಿಯರಿಂಗ್ ಗೆ ಒಂದಕ್ಕಿಂತ ಹೆಚ್ಚು ಮಂದಿ ಸಾಕ್ಷೀದಾರರನ್ನು ಕರೆದು ವಿಚಾರಣೆ ನಡೆಸಬೇಕೆಂದು ವಿಶೇಷ ನ್ಯಾಯಾಲಯಕ್ಕೆ ಆದೇಶ ನೀಡಿತ್ತು.
