ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್ 6ರಂದು ಬೀದರನಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸಮಾರಂಭ ಉದ್ಘಾಟಿಸಿ ʼಪರಿಸರ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರʼ ವಿಷಯ ಕುರಿತು ಮಾತನಾಡಲಿದ್ದಾರೆ. ಪೌರಾಡಳಿತ ಸಚಿವ ರಹೀಂ ಖಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ತರಬೇತಿಯಲ್ಲಿ ʼನ್ಯೂಸ್ ರೂಂ ನಲ್ಲಿ ಎಐ ಮತ್ತು ನಾನುʼ ಹಾಗೂ ʼಸುದ್ದಿಯಲ್ಲಿ ನಿಖರತೆ ಮತ್ತು ಪರಿಣಾಮಕಾರಿ ಸಂವಹನʼ ಎಂಬ ವಿಷಯಗಳ ಕುರಿತು ಗೋಷ್ಠಿ ಹಾಗೂ ಸಂವಾದ ನಡೆಯಲಿದೆ.
ʼಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪತ್ರಕರ್ತರು ಈ ತರಬೇತಿಯಲ್ಲಿ ಭಾಗವಹಿಸಬಹುದು. ಈ ತರಬೇತಿಯು ಪತ್ರಕರ್ತರ ವೃತ್ತಿಕೌಶಲ್ಯವನ್ನು ಉತ್ತಮಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಪತ್ರಕರ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳಿಂದ ಆಗಮಿಸುವ ಮುಂಚಿತವಾಗಿಯೇ ನೋಂದಾಯಿಸಿಕೊಂಡಿರುವ ಪತ್ರಕರ್ತರಿಗೆ ತರಬೇತಿ ದಿನದಂದು ವಸತಿ ಸೌಲಭ್ಯ ಒದಗಿಸಲಾಗುವುದು. ಆಸಕ್ತರು https://forms.gle/uwoA67T1b5gBPDuB8 ಗೂಗಲ್ ಫಾರ್ಮ್ ಭರ್ತಿ ಮಾಡಿ ಆಗಸ್ಟ್ 2 ರೊಳಗೆ ನೋಂದಾಯಿಸಿಕೊಳ್ಳುವಂತೆ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ವಿಶ್ವಾಸಾರ್ಹತೆ ಉಳಿಸಿಕೊಂಡ ಮುದ್ರಣ ಮಾಧ್ಯಮ : ದೇವಯ್ಯ ಗುತ್ತೇದಾರ್
ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪತ್ರಕರ್ತರು ಹಾಗೂ ಸಂಪಾದಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬೀದರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಅವರು ಕೋರಿದ್ದಾರೆ.