ಸುಮಾರು 17 ಸಾವಿರ ಕೋಟಿ ರೂ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯವು(ಇಡಿ) ಆಗಸ್ಟ್ 5ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
66 ವರ್ಷದ ಅಂಬಾನಿ ಅವರಿಗೆ ದೆಹಲಿಯಲ್ಲಿರುವ ಇಡಿ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ವರದಿಯಾಗಿದೆ. ಅನಿಲ್ ಅಂಬಾನಿ ಹೇಳಿಕೆಯನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ದಾಖಲಿಸಲಿದೆ.
ಇದನ್ನು ಓದಿದ್ದೀರಾ? ಅನಿಲ್ ಅಂಬಾನಿ ವಂಚನೆ ಪ್ರಕರಣ: ಮೋದಿ ಅತ್ಯಾಪ್ತನ ಸಹೋದರ ಬ್ಯಾಂಕ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಕಥೆ ಇದು!
ಕಳೆದ ವಾರ ಇಡಿ ಅನಿಲ್ ಅಂಬಾನಿ ಅವರ ಅನೇಕ ಕಂಪನಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಜುಲೈ 24ರಂದು ಪ್ರಾರಂಭವಾದ ಶೋಧ ಕಾರ್ಯಾಚರಣೆ ಮೂರು ದಿನಗಳ ಕಾಲ ನಡೆದಿದೆ. ಅದಾದ ಬಳಿಕ ಇದೀಗ ಸಮನ್ಸ್ ಜಾರಿ ಮಾಡಿದೆ.
50 ಕಂಪನಿಗಳು ಮತ್ತು ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳ ಹಲವು ಕಾರ್ಯನಿರ್ವಾಹಕರು ಸೇರಿ ಒಟ್ಟು 25 ಮಂದಿಯ ಕಚೇರಿ, ನಿವಾಸದಲ್ಲಿ ಶೋಧ ನಡೆದಿದೆ. ಮುಂಬೈನಲ್ಲಿ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ಅನಿಲ್ ಅಂಬಾನಿ ಅವರ ಎಡಿಎಜಿಯ ಭಾಗವಾಗಿರುವ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಹಾಗೂ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮೇಲೆ ಎಸ್ ಬ್ಯಾಂಕ್ ಬರೋಬ್ಬರಿ 3,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು. ಆದರೆ, ಸಾಲ ಪಡೆದ ಅನಿಲ್ ಅಂಬಾನಿ ಸಂಸ್ಥೆ ಆ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದು, ಬ್ಯಾಂಕ್‌ಗೆ ಮೋಸ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ಆರೋಪಗಳ ಮೇಲೆ ಇಡಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ತನಿಖೆ ಆರಂಭಿಸಿದೆ. ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
