ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಿದ್ದಕ್ಕೆ ಅದೇ ಗ್ರಾಮದ ಪ್ರಬಲ ಜಾತಿಯವರು ದಲಿತರ ಕಾಲೋನಿಗೆ ನುಗ್ಗಿ ಗಲಾಟೆ ಮಾಡಿ, ದಲಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ದಲಿತರು ತಮ್ಮ ವಾಸ ಪ್ರವೇಶದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಿದ್ದರು. ಅದನ್ನು ಖಂಡಿಸಿ ಅದೇ ಗ್ರಾಮದ ಕುರುಬ ಮತ್ತು ಒಕ್ಕಲಿಗ ಸಮುದಾಯದವರು ದಲಿತರ ಬೀದಿಗೆ ನಗ್ಗಿ ಗಲಾಟೆ ಮಾಡಿದ್ದಾರೆ. ಮಾತ್ರವಲ್ಲದೆ, ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗಲಾಟೆಯಲ್ಲಿ ಸುಮಾರು 26ಕ್ಕೂ ಹೆಚ್ಚು ದಲಿತರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ 20ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಹಾಗೂ 6ಜನ ಗಂಡು ಮಕ್ಕಳು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.