ಇದೇ ವರ್ಷದ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ವಯಸ್ಸು 75 ವರ್ಷ ಪೂರ್ಣಗೊಳ್ಳಲಿದೆ. ಮೋದಿ ಅವರು 75ನೇ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅವರ ಜನ್ಮ ದಿನಾಚರಣೆಯ ಅಂಗವಾಗಿ, ಸೆಪ್ಟೆಂಬರ್ 17ರಂದು ಒಡಿಶಾದಲ್ಲಿ 75 ಲಕ್ಷ ಗಿಡಗಳನ್ನು ನೆಡುವುದಾಗಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.
ಒಡಿಶಾ ಸರ್ಕಾರವು ಮೋದಿ ಜನ್ಮ ದಿನಾಚರಣೆಗಾಗಿ ʼಏಕ್ ಪೇಡ್ ಮಾ ಕೆ ನೇಮ್ʼ ಅಭಿಯಾನ ಆರಂಭಿಸುತ್ತಿದ್ದು, 75 ಲಕ್ಷ ಗಿಡಗಳನ್ನು ನೆಡುವ ಮೂಲಕ ಮೋದಿ ಹುಟ್ಟಿದ ದಿನವನ್ನು ಆಚರಿಸಲಿದೆ ಎಂದು ಮಾಝಿ ವಿವರಿಸಿದ್ದಾರೆ.
“ಕಳೆದ ೧೧ ವರ್ಷಗಳಿಂದ ಪ್ರಧಾನಿ ಮೋದಿ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಒಡಿಶಾದ ಮೇಲೆ ಅವರಿಗಿರುವ ಬದ್ಧತೆ ಮತ್ತು ಪ್ರೀತಿಯಲ್ಲಿ ಕೊರತೆಯಿಲ್ಲ. ಅವರು ಕಳೆದ ಬಾರಿ ತಮ್ಮ ಹುಟ್ಟುಹಬ್ಬದ ವೇಳೆ ಒಡಿಶಾಗ ಭೇಟಿ ನೀಡಿದಾಗ ರಾಜ್ಯ ಮಹಿಳಾ ಸಬಲೀಕರಣಕ್ಕಾಗಿ ʼಸುಭದ್ರಾ ಯೋಜನೆʼಯನ್ನು ಜಾರಿ ಗೊಳಿಸಿದ್ದರು” ಎಂದು ಮಾಝಿ ತಿಳಿಸಿದ್ದಾರೆ.
“ಪ್ರಧಾನಿಯವರಿಗೆ ಒಡಿಶಾದ ಜನತೆಯ ಮೇಲಿರುವ ಪ್ರೀತಿ ಮತ್ತು ಬದ್ಧತೆಯ ಗೌರವಾರ್ಥವಾಗಿ, ಜನರ ಉಡುಗೋರೆಯಾಗಿ ರಾಜ್ಯದಲ್ಲಿ ಸೆಪ್ಟೆಂಬರ್ 17ರಂದು ಒಂದೇ ದಿನದಲ್ಲಿ 75 ಲಕ್ಷ ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ” ಎಂದು ಅವರು ವಿವರಿಸಿದ್ದಾರೆ.
ʼಏಕ್ ಪೇಡ್ ಮಾ ಕೆ ನಾಮ್ 2.0ʼ ಯೋಜನೆಯ ಎರಡನೇ ಆವೃತಿಯು ಜೂನ್ 5 ರಂದು ಜಾರಿಗೊಂಡು ಸೆಪ್ಟೆಂಬರ್ 30ರವರೆಗೆ ಮುಂದುವರಿಯುತ್ತಿದೆ. ʼʼರಾಜ್ಯವು ಕಳೆದ ಬಾರಿ 6.72 ಕೋಟಿ ಗಿಡಗಳನ್ನು ನೆಡುವ ಮೂಲಕ ತನ್ನ ಗುರಿಯನ್ನು ಸಾಧಿಸಿದೆ. ದೇಶದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟ ರಾಜ್ಯಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. ಈ ಬಾರಿ 7.5 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಿದ್ದು, ಮೋದಿ ಜನ್ಮದಿನದಂದು ಒಂದೇ ದಿನದಲ್ಲಿ 75 ಲಕ್ಷ ಗಿಡಗಳನ್ನು ನೆಡಲಿದೆ” ಎಂದು ಅವರು ತಿಳಿಸಿದ್ದಾರೆ.
ʼʼಈ ದಾಖಲೆಯ ಯಶಸ್ಸಿಗೆ ಅರಣ್ಯ ಮತ್ತು ಕೃಷಿ ಇಲಾಖೆ, ಸರ್ಕಾರಿ ಕಚೇರಿಗಳು, ಸರ್ಕಾರೇತರ ಸಂಸ್ಥೆಗಳು, ಯುವ ಸಂಘಟನೆಗಳ ಪಾತ್ರ ಬಹು ಮುಖ್ಯವಾಗಿದೆ. ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಅವುಗಳನ್ನು ಉಳಿಸುವ ಪ್ರತಿಶತ ಹೊಣೆಗಾರಿಕೆಯೂ ಇದೆ. ಅವುಗಳ ರಕ್ಷಣೆಯ ಮತ್ತು ಪೋಷಣೆಯ ಜವಬ್ಧಾರಿಯನ್ನು ಕೂಡಾ ಪ್ರತಿಯೊಬ್ಬ ನಾಗರಿಕ ಹಾಗೂ ಸರ್ಕಾರಿ ಉದ್ಯೋಗಿಗಳು ತೆಗೆದುಕೊಳ್ಳಬೇಕುʼʼ ಎಂದಿದ್ದಾರೆ.