ಕೀಳಡಿ ಉತ್ಖನನದಲ್ಲಿ ಹೆಚ್ಚು ಪುರಾತನ ವಸ್ತುಗಳು ದೊರೆತಿದ್ದು, ಅವುಗಳ ಕಾಲಘಟ್ಟವು ಸುಮಾರು 2600 ವರ್ಷಗಳ ಪೂರ್ವಕ್ಕೆ ಅಂದರೆ ಬಿಸಿಇ 6ನೇ ಶತಮಾನವನ್ನು ಸೂಚಿಸುವ ಮೂಲಕ ಸಂಗಮ್ ಕವಿಗಳ ಕಾಲವನ್ನು ಹಿಂದಕ್ಕೆ ತಳ್ಳುವುದರ ಜೊತೆಗೆ ಪ್ರಾಚೀನ ನಗರ ಜೀವನಶೈಲಿ ಇತ್ತೆಂಬುದು ಕಂಡುಬಂದಿರುತ್ತದೆ. ಮತ್ತೊಂದು ವಿಶೇಷವೆಂದರೆ, ಇಲ್ಲಿ ಯಾವ ಧಾರ್ಮಿಕ ಚಿಹ್ನೆಗಳೂ ಇಲ್ಲಿಯ ತನಕ ಪತ್ತೆಯಾಗಿಲ್ಲದ ಕಾರಣ, ಇದು ಅಂದಿನ ನಾಗರಿಕತೆಯ ಮತಾತೀತ ಸ್ವರೂಪವನ್ನು ಸೂಚಿಸುತ್ತದೆಂದು ವಿಶ್ಲೇಷಿಸಲಾಗಿದೆ
ಹಿಂದಿನ ಆಗುಹೋಗುಗಳ ವಿಮರ್ಶಾತ್ಮಕ ಚಿಂತನೆಯ ಬೆಳಕಿನಲ್ಲಿ ಇಂದಿನ ಜೀವನವನ್ನು ಅರಿತು ಸುಧಾರಿಸಲು ಇತಿಹಾಸವು ನಮ್ಮನ್ನು ಮಾರ್ಗದರ್ಶಿಸುತ್ತದೆ. ಗತಕಾಲದ ಆಗುಹೋಗುಗಳನ್ನು ನಡೆದಂತೆಯೇ ಸಂಪೂರ್ಣವಾಗಿ ನಿರೂಪಿಸಲು ಸಾಧ್ಯವಿಲ್ಲದಿದ್ದರೂ, ಬದ್ಧತೆ ಮತ್ತು ಜವಾಬ್ದಾರಿಯುತ ವೈಜ್ಞಾನಿಕ ಸಂಶೋಧನೆಗಳಿಂದ ಸತ್ಯಕ್ಕೆ ಹತ್ತಿರವಾದ ಸ್ಥಿತಿಯು ಗೋಚರಿಸಬಹುದು. ಆದರೆ, ಕೆಲವೊಮ್ಮೆ ಸ್ವಾರ್ಥಕ್ಕಾಗಿ ಮಾಹಿತಿಯನ್ನು ತಿರುಚುವ ಅಥವಾ ಮುಚ್ಚಿಡುವ ಪ್ರಯತ್ನಗಳು ನಡೆದಾಗ ಸತ್ಯವು ಹೂತುಹೋಗುತ್ತದೆ. ಇಂತಹ ಪ್ರಯತ್ನವು ಕೀಳಡಿ ಉತ್ಖನನದ ಫಲಿತಾಂಶಗಳ ಕುರಿತಾಗಿ ನಡೆಯುತ್ತಿರಬಹುದೇ ಎಂಬ ಅನುಮಾನ ಹುಟ್ಟಿಸಿವೆ.
ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿರುವ ಕೀಳಡಿಯು ಪುರಾತತ್ವ ಸ್ಥಳವಾಗಿದೆ. ಮಧುರೈನಿಂದ ಸುಮಾರು 12 ಕಿ.ಮೀ. ದೂರದ ವೈಗೈ ನದಿಯ ತಟದಲ್ಲಿರುವ ಈ ಕೀಳಡಿಯಲ್ಲಿ 2013-14ರಿಂದ ಉತ್ಖನನ ಕಾರ್ಯವು ನಡೆಯುತ್ತಿದ್ದು, ಕುತೂಹಲಕಾರಿ ಸಂಗತಿಗಳು ಪತ್ತೆಯಾಗಿರುವ ಜೊತೆಗೆ ಅದು ವಿವಾದವನ್ನೂ ಸಹ ಸೃಷ್ಟಿಸಿದೆ.
2014ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಡಿ (ಎ.ಎಸ್.ಐ) ಹಿರಿಯ ಆರ್ಕಿಯಾಲಜಿಸ್ಟ್ ಆಗಿರುವ ಅಮರನಾಥ್ ರಾಮಕೃಷ್ಣ ಇವರು ಮೊದಲಿಗೆ ಉತ್ಖನನದ ಕಾರ್ಯವನ್ನು ಪ್ರಾರಂಭಿಸುತ್ತಾರೆ. ಇವರ ನೇತೃತ್ವದಲ್ಲಿ ನಡೆದ ಎರಡು ವರ್ಷಗಳ ಉತ್ಖನನದಲ್ಲಿ ಸುಮಾರು 5800 ಅವಶೇಷಗಳು ಪತ್ತೆಯಾಗುತ್ತವೆ. ಈ ಕುರುಹುಗಳು ಪ್ರಾಚೀನ ನಗರ ನಾಗರಿಕತೆಗೆ ಸಾಕ್ಷಿಯಾಗಿ, ಅದರ ಕಾಲಘಟ್ಟವು ಸುಮಾರು 2600 ವರ್ಷಗಳ ಪೂರ್ವಕ್ಕೆ ಅಂದರೆ ಬಿಸಿಇ 6ನೇ ಶತಮಾನವನ್ನು ಸೂಚಿಸಿದೆ. ಇದು ತಮಿಳುನಾಡು ಮತ್ತು ದಕ್ಷಿಣ ಭಾರತದ ಪ್ರಾಚೀನ ಸಂಸ್ಕೃತಿಯ ಬಗ್ಗೆ ಹೊಸ ಬೆಳಕನ್ನು ಚೆಲ್ಲಬಹುದೆಂಬ ಭರವಸೆಯು ಮೂಡುತ್ತಿರುವಾಗ, ರಾಮಕೃಷ್ಣರವರ ಹಠಾತ್ ವರ್ಗಾವಣೆಯು (2017) ಆಶ್ಚರ್ಯ ಮತ್ತು ಅಸಮಾಧಾನಕ್ಕೆ ಕಾರಣವಾಗಿ, ಫಲಿತಾಂಶದಲ್ಲಿ ಸೂಚಿಸಿದ ಈ ಕಾಲಘಟ್ಟದ ನಿಖರತೆ ಬಗ್ಗೆ ಕೇಂದ್ರ ಮತ್ತು ರಾಜ್ಯದ ನಡುವೆ ವಿವಾದವು ಹುಟ್ಟಿಕೊಂಡಿರುತ್ತದೆ.
ನಂತರ, 2017ರಲ್ಲಿ ಮೂರನೇ ಹಂತದ ಉತ್ಖನನ ಕೆಲಸ ಮುಂದುವರೆಸಲು ಪಿ.ಎಸ್. ಶ್ರಿರಾಮನ್ ಇವರನ್ನು ಕೇಂದ್ರ ಪುರಾತತ್ವ ಇಲಾಖೆಯು ಕಳಿಸುತ್ತದೆ. ಸುಮಾರು 400 ಚದರ ಮೀಟರ್ ಉತ್ಖನನದ ನಂತರ, ಹಿಂದಿನ ಉತ್ಖನನದಲ್ಲಿ ಕಂಡು ಬಂದಿದ್ದ ಇಟ್ಟಿಗೆ ರಚನೆಯು ಮುಂದುವರೆದಿಲ್ಲ ಎಂದು ಶ್ರಿರಾಮನ್ ವರದಿ ನೀಡುತ್ತಾರೆ. ಅದೇ ಕಾರಣವನ್ನು ನೀಡಿ ಕೇಂದ್ರ ಪುರಾತತ್ವ ಇಲಾಖೆಯು ಉತ್ಖನನ ಕಾರ್ಯವನ್ನು ನಿಲ್ಲಿಸುತ್ತದೆ. ಇದು, ಕೇಂದ್ರದ ಮೇಲಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿ, ಕೀಳಡಿ ಅನ್ವೇಷಣೆಯ ಮಹತ್ವವನ್ನು ಕುಗ್ಗಿಸುವ ಪ್ರಯತ್ನ ಇದಾಗಿದೆ ಎಂಬ ಆರೋಪಗಳು ತಮಿಳುನಾಡಿನಾದ್ಯಂತ ಕೇಳಿಬರುತ್ತದೆ.
ವಿವಾದವು ಮದ್ರಾಸಿನ ಉಚ್ಚನ್ಯಾಯಾಲಯದ ಮೆಟ್ಟಿಲೇರುತ್ತದೆ. ಸ್ಥಳ ವೀಕ್ಷಣೆ ಮಾಡಿದ ನ್ಯಾಯಾಧೀಶರು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಗೆ ಉತ್ಖನನವನ್ನು ಮುಂದುವರೆಸಲು ಅನುಮತಿ ನೀಡುವಂತೆ ಕೇಂದ್ರ ಪುರಾತತ್ವ ಇಲಾಖೆಗೆ ಆದೇಶ ನೀಡುತ್ತಾರೆ. ಅದರಂತೆ, ರಾಜ್ಯ ಪುರಾತತ್ವ ಇಲಾಖೆಯು ಉತ್ಖನನವನ್ನು ಮುಂದುವರೆಸಿ 2019ರಲ್ಲಿ ವರದಿ ನೀಡುತ್ತದೆ. ಇದು, ಸುಮಾರು 13,000 ಅವಶೇಷಗಳನ್ನು ಪತ್ತೆ ಮಾಡಿ, ಬಿಸಿಇ (ಪ್ರಸ್ತುತದ ಹಿಂದಿನ ಯುಗ ಅಥವಾ ಕ್ರಿ.ಪೂ.) 580ರಿಂದ ಸಿಇ (ಪ್ರಸ್ತುತ ಯುಗ ಅಥವಾ ಕ್ರಿ.ಶ.) 200ರ ನಡುವಿನ ಕಾಲಘಟ್ಟದಲ್ಲಿ ನಗರ ನಾಗರಿಕತೆ ಇತ್ತು ಎಂದು ಖಚಿತಪಡಿಸುತ್ತದೆ. ಉತ್ಖನನವು ಮುಂದುವರೆದು, ಒಟ್ಟು 110 ಎಕರೆಯ ಈ ಸಾಂಸ್ಕೃತಿಕ ಕಣಜದಲ್ಲಿ ಇಲ್ಲಿಯ ತನಕ ಕೇವಲ ಶೇ 4ರಷ್ಟು ಮಾತ್ರ ಶೋಧನೆ ನಡೆದಿದ್ದು, ಪ್ರಸ್ತುತ ಹನ್ನೊಂದನೆ ಹಂತದ ಕಾರ್ಯವು ಚಾಲನೆಯಲ್ಲಿದ್ದಂತೆ, ಈ ಕುರಿತಾದ ವಿವಾದವೂ ಸಹ ಬಿರುಸಾಗುತ್ತಿದೆ.

ಉತ್ಖನನದ ಅನ್ವೇಷಣೆಗಳಲ್ಲಿ ಕಂಡುಬಂದಿದ್ದೇನು?
ಉತ್ಖನನದಲ್ಲಿ ಹೆಚ್ಚು ಪುರಾತನ ವಸ್ತುಗಳು ದೊರೆತಿದ್ದು, ಅವುಗಳ ಕಾಲಘಟ್ಟವು ಸುಮಾರು 2600 ವರ್ಷಗಳ ಪೂರ್ವಕ್ಕೆ ಅಂದರೆ ಬಿಸಿಇ 6ನೇ ಶತಮಾನವನ್ನು ಸೂಚಿಸುವ ಮೂಲಕ ಸಂಗಮ್ ಕವಿಗಳ ಕಾಲವನ್ನು ಹಿಂದಕ್ಕೆ ತಳ್ಳುವುದರ ಜೊತೆಗೆ ಪ್ರಾಚೀನ ನಗರ ಜೀವನಶೈಲಿ ಇತ್ತೆಂಬುದು ಕಂಡುಬಂದಿರುತ್ತದೆ. ಮತ್ತೊಂದು ವಿಶೇಷವೆಂದರೆ, ಇಲ್ಲಿ ಯಾವ ಧಾರ್ಮಿಕ ಚಿಹ್ನೆಗಳೂ ಇಲ್ಲಿಯ ತನಕ ಪತ್ತೆಯಾಗಿಲ್ಲದ ಕಾರಣ, ಇದು ಅಂದಿನ ನಾಗರಿಕತೆಯ ಮತಾತೀತ ಸ್ವರೂಪವನ್ನು ಸೂಚಿಸುತ್ತದೆಂದು ವಿಶ್ಲೇಷಿಸಲಾಗಿದೆ.
ಸಂಗಮ್ ಎಂದರೆ ತಮಿಳುನಾಡಿನ ಪಾಂಡ್ಯ ರಾಜರು ಪೋಷಿಸಿದ ತಮಿಳು ಕವಿ ಹಾಗೂ ವಿದ್ವಾಂಸರ ಕೂಟಗಳು (ಸಂಗಮ). ಈ ತನಕ ಈ ಸಂಗಮ್ ಕಾಲವನ್ನು ಬಿಸಿಇ 3ನೇ ಶಕೆಯಿಂದ ಸಿಇ 3ನೇ ಶಕೆಯ ನಡುವಿನಲ್ಲಿದ್ದ ಕಾಲವೆಂದು ಆ ಸಾಹಿತ್ಯದ ಮೂಲಕ ತಿಳಿದುಕೊಳ್ಳಲಾಗಿತ್ತು. ಆದರೆ, ಕೀಳಡಿಯಲ್ಲಿ ದೊರೆತ ತಮಿಳ್-ಬ್ರಾಹ್ಮಿ ಲಿಪಿ ಇರುವ ಮಡಕೆ ಚೂರುಗಳ ರೇಡಿಯೋ ಕಾರ್ಬನ್ ದಿನಾಂಕವು ಇಲ್ಲಿಯವರೆಗೆ ತಿಳಿದುಕೊಂಡಿದ್ದ ಸಂಗಮ್ ಕಾಲಕ್ಕೂ 300 ವರ್ಷಗಳ ಹಿಂದಿನದಾಗಿದ್ದು, ಸಾಕ್ಷರತೆ ಮತ್ತು ಸಾಹಿತ್ಯವು ಅಂದೇ ಇತ್ತೆಂಬುದನ್ನು ತಿಳಿಸುತ್ತದೆ. (ರಾಮಕೃಷ್ಣರ ವರದಿಯು ಇದನ್ನು 500 ವರ್ಷ ಹಿಂದಿನದು ಎಂದಿರುವುದನ್ನು 22ನೇ ಫೆಬ್ರುವರಿಯ ದಿ ಹಿಂದು ಪತ್ರಿಕೆ ವರದಿ ಮಾಡಿದೆ) ಇಲ್ಲಿನ ಪಟ್ಟಣಗಳು, ಬೀದಿಗಳು, ಅರಮನೆ ರಚನೆ, ಅಲಂಕಾರ, ರತ್ನಗಳು ಮತ್ತು ಅಂತರಾಷ್ಟ್ರೀಯ ವ್ಯಾಪಾರವು ಸಂಗಮ್ ಸಾಹಿತ್ಯದ ಭಾಗವಾಗಿತ್ತು ಎಂದು ಹೇಳಲಾಗಿದೆ.
ಮುಖ್ಯವಾಗಿ ಕೀಳಡಿ ಉತ್ಖನನವು ಸುಮಾರು 2600 ವರ್ಷಗಳ ಹಿಂದೆಯೇ ಸುಧಾರಿತ ನಗರ ನಾಗರಿಕತೆಯನ್ನು ಹೊಂದಿತ್ತು ಎನ್ನಲಾಗಿದ್ದು, ಇದು ಭಾರತದ ಮೂರನೇ ಪ್ರಾಚೀನ ನಗರ ನಾಗರಿಕತೆ ಎನಿಸಿಕೊಳ್ಳುತ್ತದೆ. ಬಿಸಿಇ 3300 ರಿಂದ ಸಿಇ 1300 ಕಾಲದ ಸಿಂಧೂ ಕಣಿವೆ ನಾಗರಿಕತೆಯು ಪ್ರಥಮ ಪ್ರಾಚೀನ ನಗರ ನಾಗರಿಕತೆಯಾಗಿದ್ದರೆ, ಸಿಇ 6ನೇ ಶತಮಾನದ ಗಂಗಾ ಬಯಲು ಪ್ರದೇಶದ ನಾಗರಿಕತೆ ಎರಡನೆಯದಾಗಿದ್ದು, ಅದರ ಸಮಾನಾಂತರ ಅವಧಿಯ ಕೀಳಡಿಯ ಪ್ರಾಚೀನ ನಗರ ನಾಗರಿಕತೆಯು ಮೂರನೆಯದು ಎನಿಸಿಕೊಳ್ಳಬಹುದು.
ಕೀಳಡಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಟ್ಟಡಗಳು ಪತ್ತೆಯಾಗಿದ್ದು, ಜೊತೆಗೆ ಮೂರು ಮಾದರಿಯ ಒಳಚರಂಡಿಗಳು, ಸಂಗಮ್ ಕಾಲದ ಲೇಖನಿಗಳು, ಬಾಣಗಳು, ಮುದ್ರೆಗಳು, ಗೂಡುಬಾವಿಗಳು, ಮುತ್ತಿನ ಮಣಿಗಳು, ದಂತದ ತಾಯಿತ, ತಾಮ್ರ, ಕಬ್ಬಿಣ ಹಾಗೂ ಮೂಳೆಯ ಆಯುಧಗಳು, ತಕ್ಕಡಿ ಕಲ್ಲುಗಳು, ಪ್ರಾಚೀನ ತಮಿಳು ಬ್ರಾಹ್ಮಿ ಲಿಪಿಯ ಹೆಸರುಗಳು (ಉದಾ: ಉತ್ತಿರನ್, ದಿಸನ್), ಉತ್ತರ ಭಾರತದ ಪ್ರಾಕೃತ ಹೆಸರಿನ ಅಕ್ಷರಗಳು, ಸೂರ್ಯ ಮತ್ತು ಚಂದ್ರನ ಗೀಚು ಚಿತ್ರಗಳು, ಸಿಂಧೂ ಕಣಿವೆ ನಾಗರಿಕತೆಗೆ ಸಂಬಂಧ ಇರಬಹುದಾದ ಮಡಿಕೆಯ ಮೇಲಿನ ಚಿತ್ರ/ಲಿಪಿ, ಆಪ್ಘಾನಿಸ್ತಾನದ ಕಪ್ಪು ಹವಳದಿಂದ ಮಾಡಿದ ಮಣಿಗಳು ಮತ್ತು ರೋಮನ್ ಮಾದರಿ ಮಡಕೆಗಳು, ಜೊತೆಗೆ ಕೃಷಿ, ಕುಂಬಾರಿಕೆ, ನೇಯ್ಗೆ, ಬಣ್ಣ ಹಾಕುವಿಕೆ, ಮಣಿ ತಯಾರಿಕೆಯಂತಹ ಕೈಗಾರಿಕೆಗಳ ಅಸಂಖ್ಯಾತ ತಾಂತ್ರಿಕ ಉಪಕರಣಗಳನ್ನು ಬಳಸುವ ಉದ್ಯಮದ ಕುರುಹುಗಳು ಪತ್ತೆಯಾಗಿವೆ. ಇಲ್ಲಿ ಪತ್ತೆಯಾಗಿರುವ ಕಾರ್ನೆಲಿಯನ್ ಮತ್ತು ಅಗೇಟ್‍ನಂತಹ ಮಣಿ ಮತ್ತು ಆಭರಣಗಳು ಪಶ್ಚಿಮ ಭಾರತದೊಂದಿಗೆ ವ್ಯಾಪಾರ ಸಂಬಂಧ ಇದ್ದಿರಬಹುದು ಎಂಬುದನ್ನು ತಿಳಿಸುತ್ತದೆ. ಈ ಎಲ್ಲಾ ಕುರುಹುಗಳು ಇಲ್ಲಿ ಅತ್ಯಾಧುನಿಕ ನಗರ ಜೀವನಶೈಲಿ, ಸಾಕ್ಷರತೆ, ಕೃಷಿ, ಕೈಗಾರಿಕೆ, ಇತರೆ ದೇಶಗಳೊಂದಿಗೆ ವ್ಯಾಪಾರ ವ್ಯವಹಾರಗಳು, ಹಾಗೂ ಖಗೋಳಶಾಸ್ತ್ರದ ಅರಿವನ್ನು ಸೂಚಿಸುತ್ತವೆ ಎಂದಿದ್ದಾರೆ ತಜ್ಞರು.

ತಮಿಳುನಾಡು ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ತಾಣಗಳ ಕಾಯ್ದೆ 1966ರ ಪ್ರಕಾರ ರಾಜ್ಯ ಪುರಾತತ್ವ ಇಲಾಖೆಯು ಕೇಂದ್ರ ಪುರಾತತ್ವ ಇಲಾಖೆಯಂತೆ ಸಮಾನ ಅಧಿಕಾರವನ್ನು ಹೊಂದಿದ್ದು, ಅದು ಎಲ್ಲಾ ರೀತಿಯ ವೈಜ್ಞಾನಿಕ ಪರೀಕ್ಷೆಗಳನ್ನು ಸ್ವತಂತ್ರವಾಗಿ ನಡೆಸಬಹುದಾಗಿದೆ. ಕೇಂದ್ರವು ತನ್ನ ಅಧಿಕಾರದಡಿ ನಡೆಸಿದ ಶೋಧನೆಯಲ್ಲಿ ರಾಮಕೃಷ್ಣರವರು ನೀಡಿದ ಕಾಲವನ್ನು ಪ್ರಶ್ನಿಸುತ್ತಿದೆ. ಆದರೆ, ರಾಜ್ಯ ಪುರಾತತ್ವ ಇಲಾಖೆಯೂ ಸಹ ಅದೇ ಕಾಲವನ್ನು ಅಂದರೆ ಬಿಸಿಇ 6ನೇ ಶತಮಾನ ಎಂಬುದನ್ನು ಖಾತ್ರಿ ಪಡಿಸಿದ ನಂತರವೂ ರಾಮಕೃಷ್ಟ ಅವರು ಸೂಚಿಸಿರುವ ಕಾಲವನ್ನು ಒಪ್ಪದಿರದ ಮತ್ತು ಈ ಎರಡೂ ಶೋಧನೆಗಳ ಸತ್ಯಾಸತ್ಯತೆಗಳನ್ನು ಪರಾಮರ್ಶಿಸದಿರುವ ಹಿಂದಿನ ಕಾರಣಗಳು ಸ್ಪಷ್ಟವಾಗುತ್ತಿಲ್ಲ.
2019ರಲ್ಲಿ, ನ್ಯಾಯಾಲಯವು ಉತ್ಖನನವನ್ನು ರಾಜ್ಯ ಪುರಾತತ್ವ ಇಲಾಖೆಯು ಮುಂದುವರೆಸಲು ಹಾಗೂ ರಾಮಕೃಷ್ಟ ಅವರನ್ನು ಮರಳಿ ಕೀಳಡಿಗೆ ಕಳುಹಿಸುವಂತೆ ಕೇಂದ್ರ ಪುರಾತತ್ವ ಇಲಾಖೆಗೆ ಆದೇಶ ನೀಡುತ್ತದೆ. 2017ರಲ್ಲಿ ಮಧ್ಯಂತರ ವರದಿಯನ್ನು ಕೇಂದ್ರದ ಇಲಾಖೆಗೆ ನೀಡಿದ್ದ ರಾಮಕೃಷ್ಣರವರು ತಮ್ಮ ಅಂತಿಮ ವರದಿಯನ್ನು 2023ರಲ್ಲಿ ಕೇಂದ್ರಕ್ಕೆ ಸಲ್ಲಿಸುತ್ತಾರೆ. ಆ ವರದಿಯನ್ನು ಇನ್ನೂ ಬಿಡುಗಡೆ ಮಾಡಿರದ ಕೇಂದ್ರ ಪುರಾತತ್ವ ಇಲಾಖೆಯು ರಾಮಕೃಷ್ಣರವರಿಗೆ ‘ಬಿಸಿಇ 8ನೇ ಶತಮಾನದಿಂದ ಕ್ರಿ.ಪೂ 5ನೇ ಶತಮಾನದ ಅವಧಿಯ ನಿಖರತೆಗೆ ಸೂಕ್ತ ಸಮರ್ಥನೆ ಬೇಕೆಂದೂ, ಲಭ್ಯವಿರುವ ವೈಜ್ಞಾನಿಕ ದಿನಾಂಕಗಳಿಗೆ ಕೇವಲ ಆಳವನ್ನು ನಮೂದಿಸಿದರೆ ಸಾಲದು, ಅದರ ಹೋಲಿಕೆಯ ಸ್ಥಿರ ವಿಶ್ಲೇಷಣೆಗಾಗಿ ಪದರ ಸಂಖ್ಯೆಯನ್ನೂ ಸಹ ಗುರುತಿಸಬೇಕು ಮತ್ತು ದಿನಾಂಕಗಳನ್ನು ಪ್ರಸ್ತುತಪಡಿಸಿದ ವಿಧಾನವನ್ನು ತಿಳಿಸಬೇಕು ಎಂದು ಹೇಳುವ ಮೂಲಕ ವರದಿಯಲ್ಲಿ ತಿದ್ದುಪಡಿಗೆ ಆಗ್ರಹ ಮಾಡಿರುವುದಾಗಿ ಹಲವು ಪತ್ರಿಕೆಗಳು ವರದಿ ಮಾಡಿವೆ. ಈ ತಿದ್ದುಪಡಿಗೆ ಒಪ್ಪದ ರಾಮಕೃಷ್ಣರವರು ತಮ್ಮ ಸಂಶೋಧನೆಯು ವೈಜ್ಞಾನಿಕವಾಗಿ ದೃಢಪಟ್ಟಿದ್ದು, ಪುರಾತತ್ವ ಮಾನದಂಡಗಳಿಂದ ಬೆಂಬಲಿತವಾಗಿದೆ. ಅಲ್ಲದೆ ವರದಿಯಲ್ಲಿನ ಕಾಲಾನುಕ್ರಮವನ್ನು (Chronology) ಭೌತಿಕ ಸಂಸ್ಕೃತಿ (Material Culture) ಸ್ತರವಿನ್ಯಾಸದ ಅನುಕ್ರಮಗಳು (Stratigraphic Sequences) ಹಾಗೂ ಆಕ್ಷಲರೇಟರ್ ಮಾಸ್ ಸ್ಪೆಕ್ಟ್ರೋಮೆಟ್ರಿಯ (AMS) ಪರೀಕ್ಷೆಗಳಿಂದ ದೃಢಪಟ್ಟಿರುವ ಕಾರಣ ತಿದ್ದುಪಡಿಯ ಅವಶ್ಯಕತೆ ಇಲ್ಲ ಎಂದಿರುವುದೂ ಸಹ ವರದಿಯಾಗಿದೆ. ಕಳೆದ ವರ್ಷವೇ ಮದ್ರಾಸ್ ಉಚ್ಛ ನ್ಯಾಯಾಲಯವು ಕೇಂದ್ರ ಪುರಾತತ್ವ ಇಲಾಖೆಗೆ ರಾಮಕೃಷ್ಣರ ಅಂತಿಮ ವರದಿಯನ್ನು ಬಿಡುಗಡೆ ಮಾಡಲು ಆದೇಶ ನೀಡಿದ್ದರೂ ಸಹ ಅದಿನ್ನೂ ಬಿಡುಗಡೆ ಕಂಡಿರುವುದಿಲ್ಲ.
2017ರಿಂದ ರಾಮಕೃಷ್ಣರವರನ್ನು ಸುಮಾರು 8 ಬಾರಿ ವರ್ಗಾವಣೆ ಮಾಡಿದ್ದು, ಪ್ರಸ್ತುತ ಅವರನ್ನು ಗ್ರೇಟರ್ ನೋಯ್ಡಾದ ಬಹುತೇಕ ನಿಷ್ಕ್ರಿಯವಾಗಿರುವ ರಾಷ್ಟ್ರೀಯ ಸ್ಮಾರಕಗಳು ಹಾಗೂ ಪುರಾತನ ವಸ್ತುಗಳ ಮಿಷನ್ (NMMA)ನಿರ್ದೇಶಕರನ್ನಾಗಿ ಮಾಡಲಾಗಿದೆ ಎಂದು ಜೂನ್ 19ರ ದಿ ಹಿಂದು ಪತ್ರಿಕೆಯು ವರದಿ ಮಾಡಿದೆ. ಈ ನಡುವೆ, ನ್ಯಾಯಾಲಯ ನೀಡಿದ ಆದೇಶದಂತೆ ತಮಿಳುನಾಡು ಸರ್ಕಾರವು ಕೀಳಡಿಯಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿರುತ್ತದೆ.
ಕೀಳಡಿಯ ಕಾಲವನ್ನು ವೈಜ್ಞಾನಿಕವಾಗಿ ಸಮರ್ಥಿಸಲಾಗಿದೆಯೇ ಎಂಬುದು ಮುಖ್ಯವಾಗುತ್ತದೆ. ಕೀಳಡಿಯಲ್ಲಿ ದೊರೆತ ಅವಶೇಷಗಳ ಸಹಾಯದಿಂದ ಬಿಸಿಇ 580ರ ಕಾಲಘಟ್ಟದ ಜೀವನವನ್ನು ಪುನರಾವರ್ತಿಸಲು ರಾಜ್ಯ ಪುರಾತತ್ವ ಇಲಾಖೆಯೊಂದಿಗೆ ಭಾರತ ಮತ್ತು ವಿದೇಶಗಳ 20ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಅಮೆರಿಕದ ಬೀಟಾ ಅನಾಲಿಟಿಕ್ ಲ್ಯಾಬೊರೇಟರಿಯು ಕೀಳಡಿಯ ಒಂದು ಕಲಾಕೃತಿಯು ಬಿಸಿಇ 580ಕ್ಕೂ ಹಿಂದಿನ ಕಾಲಕ್ಕೆ ಸೇರಿದೆ ಎಂದು ದೃಢಪಡಿಸಿರುತ್ತದೆ. ಕಾರ್ಬನ್ ಡೇಟಿಂಗ್ (Accelerator Mass Spectrometry – AMS) ವಿಧಾನವನ್ನು ಬಳಸಿ ಪತ್ತೆ ಮಾಡಿದ ಈ ಕಾಲಘಟ್ಟವು ಗಂಗಾ ಬಯಲು ಪ್ರದೇಶದಲ್ಲಿ ಕಂಡುಬಂದ ನಗರೀಕರಣದ ಸಮಕಾಲೀನದಾಗಿದೆ ಎಂದು ಹೇಳಲಾಗಿದೆ. 2017-18ರ ಅವಧಿಯಲ್ಲಿನ ರಾಜ್ಯ ಪುರಾತತ್ವ ಇಲಾಖೆಯ 29 ರೇಡಿಯೊಕಾರ್ಬನ್ ಮಾದರಿಗಳಲ್ಲಿ ಅತ್ಯಂತ ಹಳೆಯದು ಬಿಸಿಇ 580 ಮತ್ತು ಅತ್ಯಂತ ಇತ್ತೀಚಿನದು ಸಿಇ 200 ಎಂದಾಗಿದ್ದು, ಈ ಕಾಲದ ನಡುವೆ ರೋಚಕ ನಗರ ಮತ್ತು ಕೈಗಾರಿಕಾ ನಾಗರಿಕತೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಸಾವಿರಾರು ಕುರುಹುಗಳು ಪತ್ತೆಯಾಗಿರುವುದು ಕಂಡುಬಂದಿದೆ.
ಮಧುರೈ ಕಾಮರಾಜ ಮತ್ತು ಬ್ರಿಟನ್ನಿನ ಲಿವರ್ ಪೂಲ್ ಜಾನ್ ಮೂರ್ಸ್ ವಿಶ್ವವಿದ್ಯಾಲಯಗಳ ತಜ್ಞರು ಫೋರೆನ್ಸಿಕ್ ತಂತ್ರಜ್ಞಾನ ಬಳಸಿ ಕೀಳಡಿಯಿಂದ 800 ಮೀಟರ್ ದೂರದ ಕೊಂಡಗೈ ಸಮಾಧಿ ಸ್ಥಳದಲ್ಲಿ ದೊರೆತ ಎರಡು ತಲೆಬುರುಡೆಗಳ ಮುಖದ 3ಡಿ ಮಾದರಿಯನ್ನು ಪುನರ್ ನಿರ್ಮಾಣ ಮಾಡಿದ್ದು, 2500 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಬದುಕಿದ್ದಾಗಿಯೂ ಹಾಗೂ ಈ ಬುರುಡೆಗಳ ಡಿಎನ್‍ಎ ಅಗತ್ಯತೆ ಬಗ್ಗೆ ಹೇಳಿರುತ್ತಾರೆ.

ದೊಡ್ಡ ಇಟ್ಟಿಗೆ ಕಟ್ಟಡಗಳು ಸಂಗಮ್ ಸಾಹಿತ್ಯದಲ್ಲಿ ಚರ್ಚಿಸಲಾದ ಅಭಿವೃದ್ಧಿಗೆ ಪುರಾವೆ ಒದಗಿಸಿವೆ ಎನ್ನಲಾಗಿದೆ. ಪುರಾತತ್ವ ಶಾಸ್ತ್ರಜ್ಞ ಕೆ. ರಾಜನ್ ಅವರು ಇಟ್ಟಿಗೆ ರಚನೆಗಳ ಮೇಲಿರುವ ಹೆಚ್ಚಿನ ಮಾದರಿಗಳು ಬಿಸಿಇ 3ನೇ ಶತಮಾನದ ನಂತರದ ಕಾಲಕ್ಕೆ ಸೇರಿದರೆ, ಕೆಳಗಿನ ರಚನೆಗಳು ಬಿಸಿಇ 6ನೇ ಶತಮಾನದ ಹಿಂದಕ್ಕೆ ಹೋಗುತ್ತವೆ’ ಎಂದಿರುವುದನ್ನು ಜೂನ್ 13ರ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕೀಳಡಿ ಸಂಶೋಧನೆಯ ಸುತ್ತ ಪುರಾತತ್ವ ವಿಷಯಕ್ಕಿಂತ ಹೆಚ್ಚಾಗಿ ರಾಜಕೀಯ ಬಣ್ಣದ ವಿವಾದವೇ ಸುತ್ತಿಕೊಂಡಿದೆ.
ತಮಿಳುನಾಡು ರಾಜ್ಯದ ಪ್ರಸ್ತುತ ಆಡಳಿತಾರೂಢ ಡಿಎಂಕೆ ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷಗಳು ಮತ್ತು ಶಿಕ್ಷಣತಜ್ಞರು ಕೇಂದ್ರದ ನಡೆಗಳನ್ನು ತೀವ್ರವಾಗಿ ಖಂಡಿಸುತ್ತಾ, ಇದು ರಾಜಕೀಯ ಪ್ರೇರಿತವಾದ ತಮಿಳು ಸಂಸ್ಕೃತಿಯನ್ನು ಹತ್ತಿಕ್ಕುವ ಪ್ರಯತ್ನವಲ್ಲದೆ, ಕೀಳಡಿ ಸಂಶೋಧನೆಯ ಮಹತ್ವವನ್ನು ಕುಗ್ಗಿಸುವ ಕ್ರಮವೆಂದು ಅರೋಪಿಸಿದ್ದಾರೆ.
ಇತ್ತ ಕಡೆ ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್‍ರವರು ರಾಮಕೃಷ್ಣರವರ ವರದಿಯಲ್ಲಿನ ಪಲಿತಾಂಶಗಳ ಸಮರ್ಥನೆಯಲ್ಲಿ ತಾಂತ್ರಿಕ ಮಾಹಿತಿಗಳ ಕೊರತೆ ಇದ್ದು, ವಿಜ್ಞಾನಿಗಳು ಒಪ್ಪಬಹುದಾದ ಮತ್ತು ಬಲವಾದ ಪುರಾವೆ ನೀಡಲು ಇನ್ನೂ ಹೆಚ್ಚಿನ ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆಯೆಂದೂ, ಹಾಗೂ ಭಾರತದ ಪ್ರಮುಖ ಭಾಗವಾದ ತಮಿಳುನಾಡು ಇತಿಹಾಸವನ್ನು ರಾಜಕೀಯ ದ್ರುವೀಕರಣಕ್ಕಿಂತ, ವೈಜ್ಞಾನಿಕ ಜ್ಞಾನದಿಂದ ಗೌರವಿಸಬೇಕು ಎಂದಿರುವುದಲ್ಲದೆ, ಯಾವುದೇ ವರದಿಗಳನ್ನು ಪ್ರಕಟಿಸಲು ಮತ್ತು ಬೆಂಬಲಿಸಲು ಕೇಂದ್ರವು ತಯಾರಿದೆ. ಆದರೆ ರಾಜಕಾರಣಿಗಳ ಬದಲಿಗೆ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು ಮತ್ತು ತಾಂತ್ರಿಕ ತಜ್ಞರು ಈ ಚರ್ಚೆಯಲ್ಲಿ ಭಾಗವಹಿಸಲಿ ಎಂದಿದ್ದಾರೆ.
ರಾಜ್ಯ ಪುರಾತತ್ವ ಇಲಾಖೆಯ ಸಚಿವರಾದ ತಂಗಮ್ ತೆನರಸುರವರು ತಮಿಳು ಜನಾಂಗದ ಹೆಮ್ಮೆ ಮತ್ತು ಪ್ರಾಚೀನತೆಗೆ ಬೆದರಿಕೆಯೊಡ್ಡುವ ಅನೇಕ ಅಡೆತಡೆಗಳನ್ನು ದಾಟಿ, ವೈಜ್ಞಾನಿಕ ಪುರಾವೆಗಳಿಂದ ನಮ್ಮ ಪರಂಪರೆ ಮತ್ತು ಭಾಷೆಯ ಶ್ರೀಮಂತಿಕೆ ಬಗ್ಗೆ ಜಗತ್ತಿಗೆ ಅರಿವು ಮೂಡಿಸುತ್ತಿದ್ದೇವೆ ಎಂದರೆ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‍ರವರು ತಮಿಳು ಜನಾಂಗದ ಪ್ರಾಚೀನತೆಯನ್ನು ವೈಜ್ಞಾನಿಕವಾಗಿ ಸಮರ್ಥಿಸಿರುವುದು ಕೆಲವು ಮನಸ್ಸುಗಳಿಗೆ ಒಪ್ಪಿಗೆಯಾಗುತ್ತಿಲ್ಲ. ಬದಲಾಗಬೇಕಿರುವುದು ಹೇಳಿಕೆಯಲ್ಲ, ಅವರ ಮನಸ್ಥಿತಿ ಎಂದಿದ್ದಾರೆ. ಕಮ್ಯೂನಿಸ್ಟ್ ಪಕ್ಷದ ಸಂಸದ ಎಸ್.ವೆಂಕಟೇಸನ್ ಇವರು, ರಾಮಕೃಷ್ಣರ ಅಂತಿಮ ವರದಿ ರಚಿಸಲು ನ್ಯಾಯಾಲಯ ಮಧ್ಯ ಪ್ರವೇಶಿಸಬೇಕಾಯಿತು, ಅಲ್ಲದೆ, ಅದರ ಆದೇಶದ ಹೊರತಾಗಿಯೂ ವರದಿಯನ್ನು ಇನ್ನೂ ಬಿಡುಗಡೆ ಮಾಡಿರದೆ, ಕೇಂದ್ರವು ಈಗ ಹೆಚ್ಚಿನ ಪುರಾವೆ ಕೇಳುತ್ತಿರುವುದು ತಮಿಳುನಾಡು ಮತ್ತು ದಕ್ಷಿಣ ಭಾರತೀಯ ಇತಿಹಾಸ ವಿರೋಧಿ ತಾರತಮ್ಯವಾಗಿದೆ ಎಂದು ಆರೋಪಿಸಿರುವ ಕುರಿತು ವರದಿಯಾಗಿದೆ.

ಪರಿಸ್ಥಿತಿಯ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ತಮಿಳುನಾಡಿನ ಆಡಳಿತ ಮತ್ತು ವಿರೋಧ ಪಕ್ಷಗಳೂ ಸಹ ತಮ್ಮೊಳಗೆ ಸೆಣಸಾಡುತ್ತಿವೆ.
ಇದನ್ನೂ ಓದಿ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ
ಇಲ್ಲಿಯವರೆಗಿನ ಭಾರತೀಯ ಇತಿಹಾಸದ ಪ್ರಾಚೀನ ನಾಗರಿಕತೆಗಳ ಅಧಿಕೃತ ನಿರೂಪಣೆಗೆ ಹೊಂದಿಕೆಯಾಗದ ಕೀಳಡಿ ಪ್ರಾಚೀನ ನಾಗರಿಕತೆಯನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ ಇದಾಗಿದೆಯೇ? ಉತ್ತರ ಭಾರತೀಯ ಕೇಂದ್ರಿತವಾದ ಭಾರತೀಯ ನಾಗರಿಕತೆ ಮತ್ತು ಪ್ರಾಚೀನತೆಯ ಅಧಿಕೃತ ನಿರೂಪಣೆಯಲ್ಲಿ ಮತ್ತೊಂದು ಸತ್ಯವಿರುವುದು ಬೇಡವಾಗಿದೆಯೇ? ಸಿಂಧೂ ನಾಗರಿಕತೆಯು ಅಳಿದ ನಂತರ, ಅಲ್ಲಿನವರು ದಕ್ಷಿಣಕ್ಕೆ ವಲಸೆ ಬಂದರೆಂಬ ಕಲ್ಪನೆಯು ನಿಜವಾಗುವ ಭಯವೇ? ದಕ್ಷಿಣ ಭಾರತದಲ್ಲಿ ಸಮಾನಾಂತರ ಮತ್ತು ಸ್ವತಂತ್ರ ಬೆಳವಣಿಗೆಯನ್ನು ಸೂಚಿಸುವ ನಗರ ನಾಗರಿಕತೆ ಇತ್ತೆಂಬ ಕೀಳಡಿ ಫಲಿತಾಂಶಗಳು ಉತ್ತರದ ಶ್ರೇಷ್ಠತೆಯನ್ನು ಕುಗ್ಗಿಸಬಹುದೇ? ಅಥವಾ ಇದೆಲ್ಲವೂ ತಮಿಳು ಸಂಸ್ಕೃತಿ ಅತಿ ಪ್ರಾಚೀನವೆಂಬ ಗರಿಮೆಯನ್ನು ಸಾರುವ ಹಾಗೂ ಅದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವೇ?
ಯಾವುದಿದ್ದರೂ, ಜನರಿಗೆ ಈ ವಿವಾದಲ್ಲಿ ಯಾವ ಹುರುಳೂ ಕಾಣಿಸುತ್ತಿಲ್ಲ. ರಾಜ್ಯ ಪುರಾತತ್ವ ಇಲಾಖೆಯು ದೃಢಪಡಿಸಿರುವ ಪಲಿತಾಂಶಗಳನ್ನು ಕೇಂದ್ರವು ಪ್ರಶ್ನಿಸದ ಕಾರಣ ಕೀಳಡಿಯಲ್ಲಿ ಬಿಸಿಇ 582 ರಿಂದ ಸಿಇ 200ರ ಕಾಲಘಟ್ಟದಲ್ಲಿ ಪ್ರಾಚೀನ ನಗರ ಸಂಸ್ಕೃತಿ ಇತ್ತೆಂಬ ಫಲಿತಾಂಶವನ್ನು ಒಪ್ಪಬೇಕಾಗುತ್ತದೆ. ಕೀಳಡಿಯ ಫಲಿತಾಂಶವು ವೈಜ್ಞಾನಿಕವಾಗಿ ಸಾಬೀತಾಗಿದ್ದರೆ, ತಮಿಳುನಾಡಿಗಷ್ಟೇ ಅಲ್ಲ, ಅದು ಇಡೀ ಭಾರತದ ಹೆಮ್ಮೆಯಾಗಿದ್ದು, ರಾಜ್ಯ ಮತ್ತು ಕೇಂದ್ರಗಳು ಹಾಗೆಯೇ ಸಂಭ್ರಮಿಸಬೇಕಾಗಿದೆ. ಧರ್ಮ, ಸಂಸ್ಕೃತಿ, ಇತಿಹಾಸವನ್ನು ಬಳಸಿಕೊಂಡು ಎಲ್ಲದರಲ್ಲಿಯೂ ಒಡಕು ತರುವಂತಹ ಈ ರಾಜಕೀಯ ನಾಟಕಗಳನ್ನು ಜನರು ತೀವ್ರವಾಗಿ ಖಂಡಿಸಬೇಕು. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು ರಾಜಕೀಯದಿಂದ ಹೊರಗುಳಿದು ಪಲಿತಾಂಶಗಳ ವೈಜ್ಞಾನಿಕ ಖಚಿತತೆಯ ಕಡೆ ಗಮನ ಹರಿಸುವ ಮೂಲಕ ಸತ್ಯವು ಮಾತ್ರವೇ ಇತಿಹಾಸದ ಪುಟ ಸೇರುವಂತೆ ಮಾಡುವ ಜವಾಬ್ದಾರಿ ಮೆರೆಯಲಿ.

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು