ಮಾಲೆಗಾಂವ್ ಸ್ಫೋಟ ಪ್ರಕರಣ: 1,087 ವಿಚಾರಣೆಗಳು, ನಾನಾ ಆದೇಶಗಳ ನಡುವೆ ಸಂತ್ರಸ್ತರ ಹೋರಾಟ ನಡೆದದ್ದು ಹೀಗೆ!

Date:

Advertisements
2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯು ಬರೋಬ್ಬರಿ 17 ವರ್ಷಗಳ ಕಾಲ ನಡೆದಿದ್ದು, ಅಂತಿಮವಾಗಿ ಜುಲೈ 31ರಂದು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆದರೆ, ಭೀಕರ ಕೃತ್ಯ ಎಸಗಿದವರು ಯಾರು? ಕೃತ್ಯದ ಹಿಂದಿದ್ದವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದುಹೋಗಿದೆ.

”ಇದು ಕೇವಲ ಏಳು ಆರೋಪಿಗಳ ವಿರುದ್ಧದ ವಿಚಾರಣೆಯಾಗಿರಲಿಲ್ಲ, ಭಯೋತ್ಪಾದಕ ದಾಳಿಯಲ್ಲಿ ಭಾಗವಹಿಸಿದ ಮತ್ತು ಕಾರ್ಯಗತಗೊಳಿಸಿದ ಆರೋಪಿಗಳ ವಿರುದ್ಧದ ಪ್ರಕರಣವಾಗಿತ್ತು. ಆದರೆ, ಕೊಲ್ಲಲ್ಪಟ್ಟವರ ಕುಟುಂಬಗಳು ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತರೂ ಸಹ ವಿಚಾರಣೆಗೆ ಒಳಗಾದ ಪ್ರಕರಣವಾಗಿತ್ತು” ಎಂದು ವಕೀಲ ಶಾಹಿದ್ ನದೀಮ್ ಹೇಳುತ್ತಾರೆ.

2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯು ಬರೋಬ್ಬರಿ 17 ವರ್ಷಗಳ ಕಾಲ ನಡೆದಿದ್ದು, ಅಂತಿಮವಾಗಿ ಜುಲೈ 31ರಂದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆದರೆ, ಭೀಕರ ಕೃತ್ಯ ಎಸಗಿದವರು ಯಾರು? ಕೃತ್ಯದ ಹಿಂದಿದ್ದವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದುಹೋಗಿದೆ.

ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಧೀಶ ಎ.ಕೆ ಲಾಹೋಟಿ ಈ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಬಿಜೆಪಿ ನಾಯಕಿ, ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಸೇನೆಯ ಮಾಜಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಅಭಿನವ ಭಾರತ ಸಂಘಟನೆಯ ಸುಧಾಕರ್ ಧರ್ ದ್ವಿವೇದಿ, ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸುಧಾಕರ್ ಚತುರ್ವೇದಿ ಹಾಗೂ ಸಮೀರ್ ಕುಲಕರ್ಣಿ ಅವರನ್ನು ನಿರ್ದೋಷಿಗಳು ಎಂದು ಖುಲಾಸೆಗೊಳಿಸಿದ್ದಾರೆ.

Advertisements

ಅಂದಹಾಗೆ, 2008ರಲ್ಲಿ, ಮುಸ್ಲಿಮರ ಪವಿತ್ರ ತಿಂಗಳಾದ ರಂಜಾನ್ ಹಬ್ಬವು ಹಿಂದೂಗಳ ಪ್ರಮುಖ ಹಬ್ಬವಾದ ನವರಾತ್ರಿ ಸಮಯದಲ್ಲಿಯೇ ಇತ್ತು. ಆ ಸಮಯದಲ್ಲಿ, ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಮಾಲೆಗಾಂವ್‌ನ ಭಿಕ್ಕು ಚೌಕ್‌ನಲ್ಲಿ ಭೀಕರ ಬಾಂಬ್ ಸ್ಫೋಟಗೊಂಡಿತು. ಘಟನೆಗೂ ಮುನ್ನವೇ ಕೋಮು ಉದ್ವಿಗ್ನ ಪ್ರದೇಶವಾಗಿದ್ದ ಮಾಲೆಗಾಂವ್‌ನಲ್ಲಿ ಸ್ಪೋಟ ಕೃತ್ಯ ಎಸಗಲು ಮೋಟರ್‌ಸೈಕಲ್‌ನಲ್ಲಿ ಸ್ಫೋಟಕ ಸಾಧನವನ್ನು ಅಳವಡಿಸಲಾಗಿತ್ತು. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದರು. 101 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಪ್ರಕರಣದ ವಿಚಾರಣೆ 2018ರಲ್ಲಿ ಆರಂಭವಾಯಿತು. ವಿಚಾರಣೆ ವೇಳೆ ಒಟ್ಟು 323 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಅಲ್ಲದೆ, ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತರ ವೈದ್ಯಕೀಯ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅವರು ಕೋರ್ಟ್‌ನಲ್ಲಿ ದೈಹಿಕವಾಗಿ ಹಾಜರಾಗಬೇಕಿಲ್ಲ ಎಂದು ಹೇಳಲಾಗಿತ್ತು. ಆದಾಗ್ಯೂ, ಕೆಲವು ಸಂತ್ರಸ್ತರನ್ನು, ಸಾಕ್ಷ್ಯ ನೀಡಲು ತಮ್ಮ ಊರಾದ ಮಾಲೆಗಾಂವ್‌ನಿಂದ ಎನ್‌ಐಎ ನ್ಯಾಯಾಲಯವಿರುವ ಮುಂಬೈಗೆ ದೀರ್ಘ ಪ್ರಯಾಣ ಮಾಡುವಂತೆ ಮಾಡಲಾಯಿತು.

ಎನ್‌ಐಎ ಪ್ರಕಾರ, ಪ್ರಮುಖ 7 ಆರೋಪಿಗಳಲ್ಲಿ ಒಬ್ಬನಾದ ಪ್ರಸಾದ್ ಪುರೋಹಿತ್‌ನನ್ನು ದೇಶಾದ್ಯಂತ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಡೆಸಲು ನೇಮಿಸಲಾಗಿತ್ತು. ಇದರ ಗುರಿ ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವುದಾಗಿತ್ತು. ಅದರ ಭಾಗವಾಗಿಯೇ ಮಾಲೆಗಾಂವ್ ಸ್ಫೋಟ ನಡೆಸಿದ್ದರು.

ಪ್ರಮುಖ ಆರೋಪಿಗಳಲ್ಲಿ ಕೇವಲ ಒಬ್ಬ ಆರೋಪಿ ಸುಧಾಕರ್ ಧರ್ ದ್ವಿವೇದಿ ಮಾತ್ರವೇ ತನ್ನ ವಿರುದ್ಧದ ಪ್ರಕರಣವನ್ನು ಪ್ರಶ್ನಿಸಿದ್ದರು. ಅವರು ಈ ಘಟನೆಯು ಸಿಲಿಂಡರ್ ಸ್ಫೋಟದಿಂದ ಸಂಭವಿಸಿದೆ ಎಂದು ವಾದಿಸಿದ್ದರು. ಈ ವಾದವು ಸುಳ್ಳು ಎಂದು ಸಾಬೀತು ಮಾಡಲು ಸಂತ್ರಸ್ತರು ಹಲವಾರು ಬಾರಿ ತಮ್ಮೂರಿನಿಂದ ಮುಂಬೈಗೆ ಪ್ರಯಾಣಿಸಬೇಕಾಯಿತು.

”ರಾಜ್ಯ ಸರ್ಕಾರವು ಗಾಯಗೊಂಡ ಬಾಧಿತರ ಪ್ರಯಾಣ ವೆಚ್ಚವನ್ನು ಭರಿಸಲು ಒಮ್ಮೆಯ ಪ್ರಯಾಣಕ್ಕೆ ಕೇವಲ 250 ರೂಪಾಯಿಗಳನ್ನು ಮಂಜೂರು ಮಾಡಿತ್ತು. ಆದರೆ, ತಮ್ಮ ಮನೆಯಿಂದ ಸುಮಾರು 350 ಕಿ.ಮೀ. ದೂರದ ನ್ಯಾಯಾಲಯಕ್ಕೆ ಹೋಗಿ-ಬರಲು ಈ ಮೊತ್ತವು ಸಾಕಾಗಿರಲಿಲ್ಲ. ಸಂತ್ರಸ್ತರು ಸಮಾಜದ ತಳವರ್ಗಕ್ಕೆ ಸೇರಿದವರು. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಿಸಲು ಸಾಧ್ಯವಿರಲಿಲ್ಲ. ಆದ್ದರಿಂದ, ಸಾಮಾಜಿಕ-ಧಾರ್ಮಿಕ ಸಂಸ್ಥೆಯಾದ ಜಮಿಯತ್ ಉಲೆಮಾ-ಇ-ಹಿಂದ್, ಸಾಕ್ಷಿಗಳಿಗೆ ಪ್ರಯಾಣದ ನೆರವು ನೀಡಿದರು” ಎಂದು ನದೀಮ್ ಹೇಳಿದ್ದಾರೆ.

ಸಂತ್ರಸ್ತರು ಕೇವಲ ಸಾಕ್ಷಿಗಳಾಗಿ ಭಾಗವಹಿಸದೆ, ವಿಚಾರಣೆಯು ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಈ ಭಯೋತ್ಪಾದಕ ಕೃತ್ಯದ ದೀರ್ಘಕಾಲದ ವಿಚಾರಣೆಯನ್ನು ಆರಂಭದಲ್ಲಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ನಡೆಸಿತು. ಬಳಿಕ, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕೈಗೆತ್ತಿಕೊಂಡಿತು. ಸಂತ್ರಸ್ತರ ಕುಟುಂಬಗಳು ಮಧ್ಯಪ್ರವೇಶಿಸದಿದ್ದರೆ ಬಹಳ ಹಿಂದೆಯೇ ಪ್ರಕರಣ ಮುಕ್ತಾಯಗೊಂಡಿರುತ್ತಿತ್ತು. ಸಂತ್ರಸ್ತರ ನಿರಂತರ ಹೋರಾಟದಿಂದಾಗಿ ವಿಚಾರಣೆಯು ಮುಂದುವರೆಯಿತು ಎಂದು ನದೀಮ್ ವಿವರಿಸಿದ್ದಾರೆ.

2016ರಲ್ಲಿ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದ ಎನ್‌ಐಎ– ಪ್ರಜ್ಞಾ ಸಿಂಗ್ ಠಾಕೂರ್, ಶ್ಯಾಮ್ ಸಾಹು, ಪ್ರವೀಣ್ ತಕಲ್ಕಿ ಮತ್ತು ಶಿವನಾರಾಯಣ ಕಲ್ಸಂಗ್ರಾ ಸೇರಿದಂತೆ ಮೂವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ, ಜಗದೀಶ್ ಮಾತ್ರೆ ಮತ್ತು ರಾಕೇಶ್ ಧಾವ್ಡೆ ಕೂಡ ಎಲ್ಲ ಭಯೋತ್ಪಾದಕ ಆರೋಪಗಳಿಂದ ಮುಕ್ತರಾದರು. ಈ ಇಬ್ಬರೂ ಕೇವಲ ಶಸ್ತ್ರಾಸ್ತ್ರ ಕಾಯ್ದೆಯಡಿ ಇನ್ನೊಂದು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಈ ಚಾರ್ಜ್‌ಶೀಟ್‌ ವಿರುದ್ಧ ಸ್ಫೋಟದಲ್ಲಿ ಹತ್ಯೆಯಾದ 19 ವರ್ಷದ ಸಯ್ಯದ್ ಅಜರ್‌ ಅವರ ತಂದೆ ನಿಸಾರ್ ಅಹಮದ್ ಸಯ್ಯದ್ ಬಿಲಾಲ್ ಅವರು ಮಧ್ಯಪ್ರವೇಶಿಸಿದರು, ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದರು.

75 ವರ್ಷದ ನಿಸಾರ್ ಅಹಮದ್ ಈಗ ಕಷ್ಟಪಟ್ಟು ಮಾತನಾಡಬಲ್ಲರು. ಕಳೆದ ಎರಡು ದಶಕಗಳಲ್ಲಿ, ನ್ಯಾಯಕ್ಕಾಗಿನ ಹೋರಾಟದಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಆದರೆ, ಅವರ ಆರೋಗ್ಯ ಅವರ ಹೋರಾಟಕ್ಕೆ ಅಡ್ಡಿಯಾಗಲಿಲ್ಲ.

ನಿಸಾರ್ ಅಹಮದ್‌ರ ಮೊದಲ ಅರ್ಜಿಯು ಪ್ರಜ್ಞಾ ಸಿಂಗ್ ಠಾಕೂರ್‌ರನ್ನು ಪ್ರಕರಣದಿಂದ ಖುಲಾಸೆಗೊಳಿಸುವುದನ್ನು ವಿರೋಧಿಸಿತ್ತು. ಮೂಲ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ್ಕೆ ಬಳಸಿದ ಎಲ್‌ಎಂಎಲ್‌ ಮೋಟಾರ್‌ಸೈಕಲ್‌ಗೆ ಮಾಲೀಕರು ಪ್ರಜ್ಞಾ ಸಿಂಗ್ ಠಾಕೂರ್‌ ಅವರೇ ಆಗಿದ್ದು, ಆ ಬೈಕ್‌ಅನ್ನು ತಮ್ಮ ಸಹ ಆರೋಪಿಯಾದ ರಾಮಚಂದ್ರ ಕಲ್ಸಂಗ್ರಾಗೆ ಕೊಟ್ಟಿದ್ದರು ಎಂದು ವಿವರಿಸಿತ್ತು. ಆದರೆ, 2016ರಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಯಾವುದೇ ಪೂರಕ ಸಾಕ್ಷ್ಯಗಳು ಕಂಡುಬಂದಿಲ್ಲವೆಂದು ಎನ್‌ಐಎ ಕ್ಲೀನ್‌ ಚಿಟ್ ನೀಡಿತ್ತು.

ಪ್ರಜ್ಞಾ ಠೂಕೂರ್‌ಗೆ ಕ್ಲೀನ್‌ ಚಿಟ್‌ ನೀಡುವ ಎನ್‌ಐಎ ನಿರ್ಧಾರದ ವಿರುದ್ಧ ನಿಸಾರ್ ಅಹಮದ್ ಅರ್ಜಿ ಸಲ್ಲಿಸಿದ್ದರಿಂದ ಬಾಂಬೆ ಹೈಕೋರ್ಟ್‌ ಪ್ರಜ್ಞಾರನ್ನು ಖುಲಾಸೆಗೊಳಿಸಲು ನಿರಾಕರಿಸಿತು. ಆದರೆ, ಜಾಮೀನು ನೀಡಿತು. ಈ ಕಾರಣದಿಂದಾಗಿ, ಆಗಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಡಿ ಟೆಕಾಲೆ ಅವರು ಪ್ರಜ್ಞಾ ಠಾಕೂರ್‌ರನ್ನು ಪ್ರಕರಣದಿಂದ ಮುಕ್ತಗೊಳಿಸುವ ಎನ್‌ಐಎ ಅರ್ಜಿಯನ್ನು ತಿರಸ್ಕರಿಸಿದರು. ಇದಾದ ಕೆಲವೇ ಸಮಯದಲ್ಲಿ ಟೆಕಾಲೆ ಅವರನ್ನು ವರ್ಗಾವಣೆ ಮಾಡಲಾಯಿತು.

ಟೆಕಾಲೆ ಅವರು ವಿಶೇಷ ನ್ಯಾಯಾಲಯದಲ್ಲಿ ಇದ್ದಾಗಲೇ, ಆರೋಪಿಗಳ ವಿರುದ್ಧ ‘ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ’ (ಎಂಸಿಒಸಿಎ) ಅಡಿ ದಾಖಲಾಗಿದ್ದ ಆರೋಪಗಳನ್ನು ಪ್ರಕರಣದಿಂದ ಕೈಬಿಡಲಾಯಿತು. ಪರಿಣಾಮವಾಗಿ, ಆರೋಪಿ ಪುರೋಹಿತ್ ಎಂಬಾತ ಸೇನಾ ನಿಯಮಗಳಿಗೆ ವಿರುದ್ಧವಾಗಿ ’21 ಲಕ್ಷ ರೂಪಾಯಿಗಳಷ್ಟು ಹಣವನ್ನು ಸಂಗ್ರಹಿಸಿದ್ದ’ ಎಂಬ ಆರೋಪವೂ ದುರ್ಬಲಗೊಂಡಿತು. ಆತನ ವಿರುದ್ಧದ ವಿಚಾರಣೆಯು ಕೇವಲ ಅಕ್ರಮ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳಿಗೆ ಸೀಮಿತಗೊಂಡಿತು.

ಬಾಂಬೆ ಹೈಕೋರ್ಟ್‌, ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ನಿಸಾರ್ ಅಹಮದ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದರೆ, ”ಎನ್‌ಐಎ ಜಾಮೀನನ್ನು ವಿರೋಧಿಸಲಿಲ್ಲ. ಏಕೆಂದರೆ, ಆರೋಪಿಗಳನ್ನು ಪ್ರಕರಣದಿಂದ ಕೈಬಿಡಲು ಎನ್‌ಐಎ ಈಗಾಗಲೇ ಬಯಸಿ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಆದರೆ, ಜಾಮೀನನ್ನು ಸಂತ್ರಸ್ತ ತಂದೆಯೇ ವಿರೋಧಿಸಿ, ಕೋರ್ಟ್‌ ಮೆಟ್ಟಿಲೇರಿದರು” ಎಂದು ನದೀಮ್ ಹೇಳುತ್ತಾರೆ.

ಅಂತೆಯೇ, ಪುರೋಹಿತ್ ಪ್ರಕರಣದಲ್ಲೂ, ಜಾಮೀನು ನೀಡುವುದನ್ನು ವಿರೋಧಿಸಿ ನಿಸಾರ್ ಅಹಮದ್ ಸುಪ್ರೀಂ ಕೋರ್ಟ್‌ವರೆಗೂ ಹೋದರು. ಆದರೆ, ಅಂತಿಮವಾಗಿ 2017ರಲ್ಲಿ ಪುರೋಹಿತ್‌ಗೆ ಜಾಮೀನು ದೊರೆಯಿತು. ಪ್ರಕರಣ ಘಟಿಸಿದ ಒಂಬತ್ತು ವರ್ಷಗಳಲ್ಲಿ ಎಲ್ಲ ಆರೋಪಿಗಳು ಜೈಲಿನಿಂದ ಬಿಡುಗಡೆಯಾದರು.

2008ರಲ್ಲಿ ಪಚ್ಮಾರಿಯಲ್ಲಿ ಸೇನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪುರೋಹಿತ್, 2007 ಫೆಬ್ರವರಿ 2ರಂದು ‘ಹಿಂದೂ ರಾಷ್ಟ್ರ’ದ ಪ್ರಚಾರಕ್ಕಾಗಿ ಸ್ಥಾಪಿತವಾದ ‘ಅಭಿನವ ಭಾರತ’ ಸಂಘಟನೆಯ ಸಂಸ್ಥಾಪಕ ಎಂದು ಆರೋಪಿಸಲಾಗಿದೆ.

2021ರಲ್ಲಿ, ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ಅವರು ಪುರೋಹಿತ್‌ ಪರವಾಗಿ ನ್ಯಾಯಾಲಯಕ್ಕೆ ಹಾಜರಾದಾಗ ಅವರನ್ನು ನಿಸಾರ್ ಅಹಮದ್ ವಿರೋಧಿಸಿದರು. ”ರೋಹತ್ಗಿಯವರು ಈ ಹಿಂದೆಯೇ ಎಂಸಿಒಸಿಎ ಕಾಯ್ದೆಯ ಬಗ್ಗೆ ಕಾನೂನು ಅಭಿಪ್ರಾಯವನ್ನು ನೀಡಿದ್ದಾರೆ. ಹೀಗಾಗಿ, ಅವರ ಹೇಳಿಕೆಗಳು ಇಡೀ ವಿಚಾರಣೆಗೆ ಪೂರ್ವಗ್ರಹವನ್ನು ಉಂಟುಮಾಡುತ್ತದೆ” ಎಂದು ನಿಸಾರ್ ಅಹಮದ್‌ ವಾದಿಸಿದರು. ಪರಿಣಾಮವಾಗಿ, ರೋಹತ್ಗಿಯವರನ್ನು ಪ್ರಕರಣದಿಂದ ಹೊರಗಿಡಲಾಯಿತು.

ಈ ಲೇಖನ ಓದಿದ್ದೀರಾ?: ನಟಿ ರಮ್ಯಾಗೆ ಅತ್ಯಾಚಾರದ ಬೆದರಿಕೆ; ಯಥಾ ಹೀರೋ ತಥಾ ಫ್ಯಾನ್ಸು

ಆರೋಪಿಗಳು, ಎಲ್ಲ ರೀತಿಯ ಪ್ರಕರಣದಲ್ಲಿ ತಮ್ಮ ರಕ್ಷಣೆಗಾಗಿ ಮಾಡುವಂತೆಯೇ, ತಮ್ಮ ವಿರುದ್ಧದ ಪ್ರಕರಣದಲ್ಲಿ ‘ಅಕ್ರಮ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ– ಯುಎಪಿಎ’ಯ ಹಲವು ಸೆಕ್ಷನ್‌ಗಳನ್ನು ಸೇರಿಸಿದ್ದರ ವಿರುದ್ಧ ಆಕ್ಷೇಪಗಳನ್ನು ಎತ್ತಿದರು. ಆರೋಪಿಗಳಲ್ಲಿ ಒಬ್ಬರಾದ ಸಮೀರ್ ಕುಲಕರ್ಣಿ, ‘ಯುಎಪಿಎ’ ಸೆಕ್ಷನ್‌ಗಳ ಉಲ್ಲೇಖದ ವಿರುದ್ಧ ‘ಸ್ಟೇ’ ಆದೇಶಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದರು. ನ್ಯಾಯಾಲಯವು ಕುಲಕರ್ಣಿ ವಿರುದ್ಧದ ವಿಚಾರಣೆಯಲ್ಲಿ ಮಾತ್ರವೇ ಯುಎಪಿಎ ಸೆಕ್ಷನ್‌ಗಳಿಗೆ ತಡೆ ನೀಡಿತು. ಉಳಿದ ಆರೋಪಿಗಳ ವಿರುದ್ಧ ವಿಚಾರಣೆಯನ್ನು ಮುಂದುವರೆಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು. ಇಲ್ಲಿಯೂ ನಿಸಾರ್ ಅಹಮದ್ ಮಧ್ಯಪ್ರವೇಶಿಸಿದ್ದರು. ಪರಿಣಾಮ, ಕುಲಕರ್ಣಿ ತಂದಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯವು ರದ್ದುಗೊಳಿಸತು. ಆತನ ವಿರುದ್ಧವೂ ವಿಚಾರಣೆ ನಡೆಸಲು ಅವಕಾಶ ನೀಡಿತು.

ಎನ್‌ಐಎ ಪ್ರಮುಖ 13 ಸಾಕ್ಷಿಗಳ ಹೇಳಿಕೆಗಳನ್ನು ಸಿಆರ್‌ಪಿಸಿಯ ಸೆಕ್ಷನ್ 164ರಡಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿತು. ಆದರೆ, ಎಂಸಿಒಸಿಎ ಅಡಿ ದಾಖಲಾದ ಎರಡು ಆರೋಪಿಗಳ ಹೇಳಿಕೆಗಳು ಕಾಣೆಯಾಗಿವೆ ಎಂದು ಎನ್‌ಐಎ ಹೇಳಿಕೊಂಡಿತು. ತನಿಖೆ ಮತ್ತು ವಿಚಾರಣೆ ವೇಳೆ ನಾಸಿಕ್‌ನಿಂದ ಸುಪ್ರೀಂ ಕೋರ್ಟ್‌ವರೆಗೆ ವಿವಿಧ ನ್ಯಾಯಾಲಯಗಳಿಗೆ ದಾಖಲೆಗಳನ್ನು ಸಾಗಿಸುವಾಗ ಕಾಣೆಯಾಗಿವೆ ಎಂದು ಎನ್‌ಐಎ ಕಾರಣ ನೀಡಿತು. ಆ ಸಮಯದಲ್ಲಿಯೂ ನಿಸಾರ್ ಅಹಮದ್ ಮೊದಲಿಗೆ ಮಧ್ಯಪ್ರವೇಶಿಸಿದರು. ಆಗ, ವಿಚಾರಣಾ ನ್ಯಾಯಾಲಯವು ಕಾಣೆಯಾದ ಕಾಗದಗಳ ಬದಲಿಗೆ ಫೋಟೊಕಾಪಿಗಳನ್ನು ದ್ವಿತೀಯ ಸಾಕ್ಷ್ಯವಾಗಿ ಬಳಸುವಂತೆ ಎನ್‌ಐಎಗೆ ಸೂಚಿಸಿತು.

ಸೆಷನ್ ನ್ಯಾಯಾಲಯ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಜಾಮೀನು ಅರ್ಜಿ, ಚಾರ್ಜ್‌ಶೀಟ್‌, ಮೇಲ್ಮನವಿ, ಆಕ್ಷೇಪಗಳ ವಿಚಾರಣೆ ನಡೆದು, ಎಲ್ಲ ಆರೋಪಿಗಳಿಗೆ ಜಾಮೀನು ದೊರೆತ ಬಳಿಕ, 2018ರಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಆರಂಭಿಸಿತು. ಪ್ರಕರಣವನ್ನು ತ್ವರಿತಗೊಳಿಸುವಂತೆ ಕೋರಿ ನಿಸಾರ್ ಅಹಮದ್ ಅರ್ಜಿ ಸಲ್ಲಿಸಿದ್ದರು. ಅಂದಿನಿಂದ ಇಂದಿನವರೆಗೆ ಎಂಟು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದ ಆರೋಪಿಗಳು ಹಲವಾರು ನ್ಯಾಯಾಲಯದ ವಿಚಾರಣೆಗಳಲ್ಲಿ ಹಾಜರಾಗಲಿಲ್ಲ. ”2008ರಿಂದ ಈವರೆಗೆ ನ್ಯಾಯಾಲಯಗಳಲ್ಲಿ ಬರೋಬ್ಬರಿ 1,087 ಬಾರಿ ವಿಚಾರಣೆಗಳು ನಡೆದಿದ್ದು, ಪ್ರಜ್ಞಾ ಸಿಂಗ್ ಠಾಕೂರ್ ಕೇವಲ 34 ಬಾರಿ ಹಾಜರಾಗಿದ್ದಾರೆ. ಆದರೆ, ಎನ್‌ಐಎ ಎಂದಿಗೂ ಅವರ ಗೈರುಹಾಜರಿಯನ್ನು ವಿರೋಧಿಸಲಿಲ್ಲ. ಎನ್‌ಐಎ ಮೌನದ ಕಾರಣದಿಂದಾಗಿ ಸಂತ್ರಸ್ತ ಕುಟುಂಬಗಳು ಆರೋಪಿಗಳ ಗೈರುಹಾಜರಿಯನ್ನು ವಿರೋಧಿಸಿದವು,” ಎಂದು ನದೀಮ್ ಹೇಳಿದ್ದಾರೆ.

ಒಟ್ಟಾರೆ, ಐವರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಪ್ರಕರಣವನ್ನು ವೈ.ಡಿ ಶಿಂಧೆ ವಿಚಾರಣೆ ನಡೆಸಿದರು, ನಂತರ ಎಸ್.ಡಿ. ಟೆಕಾಲೆ ಅವರು ವಿಚಾರಣೆ ನಡೆಸಿದರು, ಅವರ ವರ್ಗಾವಣೆಯಾದ ನಂತರ ವಿ.ಎಸ್ ಪದಾಲ್ಕರ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರ ನಂತರ, ಪಿ.ಆರ್ ಸಿತ್ರೆ ನೇಮಕಗೊಂಡರು. ಅಂತಿಮವಾಗಿ ಎ.ಕೆ ಲಾಹೋಟಿ ವಿಚಾರಣೆಯನ್ನು ಮುಂದುವರೆಸಿದರು. ಈಗ, ಎಲ್ಲ ಆರೋಪಿಗಳನ್ನು ಲಾಹೋಟಿ ಅವರು ಖುಲಾಸೆಗೊಳಿಸಿದ್ದಾರೆ.

ಮಾಹಿತಿ ಕೃಪೆ: ದಿ ವೈರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸಂಪೂರ್ಣ ಎಕಪಕ್ಷದ ನಿರ್ಧಾರ, ವಿಚಾರಣೆಗೆ ಯಾರು ಸರಿಯಾಗಿ ಹಾಜರಿರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಆರೋಪಿಗಳು ಬಚಾವಾಗಿದ್ದರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X