ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬುದೂರು ಗ್ರಾಮದ ಅಂಗನವಾಡಿ ಕೇಂದ್ರ-1ರ ಸಹಾಯಕಿಯೊಬ್ಬರು ಅಂಗನವಾಡಿಗೆ ಬಂದ ಮಕ್ಕಳನ್ನು ಅಂಗನವಾಡಿಯಲ್ಲಿ ಬಿಟ್ಟು ಬೀಗ ಹಾಕಿಕೊಂಡು ಜಮೀನಿಗೆ ತೆರಳಿದ ಆರೋಪ ಕೇಳಿ ಬಂದಿದೆ.
ಅಂಗನವಾಡಿ ಕಾರ್ಯಕರ್ತೆ ಸರೋಜ ಕಂದಕೂರ ಅವರು ಇಲಾಖೆ ಸಭೆ ನಿಮಿತ್ಯ ಬೇರೆ ಗ್ರಾಮಕ್ಕೆ ತೆರಳಿದರು. ಈ ವೇಳೆ ಮಕ್ಕಳನ್ನು ಸಹಾಯಕಿ ನೋಡಿಕೊಳ್ಳುತ್ತಿದ್ದರು. ಆದರೆ ಸಹಾಯಕಿ ಸಾವಿತ್ರಮ್ಮ ಎಂಬುವವರು ಮಕ್ಕಳನ್ನು ಕೇಂದ್ರದಲ್ಲಿ ಬಿಟ್ಟು ಬೀಗ ಹಾಕಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಕೇಂದ್ರದಿಂದ ಹೊರಗಡೆ ಬರಲಾಗದಕ್ಕೆ ಭೀತಿಗೊಂಡ ಮಕ್ಕಳು ಅಳಲಾರಂಭಿಸಿದ್ದಾರೆ. ಇದನ್ನು ಕೇಳಿದ ಸ್ಥಳೀಯರು ತಕ್ಷಣ ಅಂಗನವಾಡಿ ಕೇಂದ್ರದೆಡೆಗೆ ದಾವಿಸಿ ಮಕ್ಕಳಿಗೆ ಸಮಾಧಾನ ಪಡಿಸಿದ್ದಾರೆ.
ಬಳಿಕ ಅಂಗನವಾಡಿ ಸಹಾಯಕಿಯ ನಿರ್ಲಕ್ಷ್ಯವನ್ನು ಖಂಡಿಸಿ ಸಭೆಗೆಂದು ತೆರಳಿದ ಅಂಗನವಾಡಿ ಕಾರ್ಯಕರ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಕಾರ್ಯಕರ್ತೆ ಸರೋಜ ಕೇಂದ್ರಕ್ಕೆ ಬಂದು ಬೀಗ ತೆಗೆದ ಬಳಿಕ ಮಕ್ಕಳು ನಿಟ್ಟುಸಿರು ಬಿಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ : ಬಳ್ಳಾರಿ | ಆಸ್ತಿಗಾಗಿ ಅಕ್ಕನನ್ನು ಕೊಂದ ತಮ್ಮನಿಗೆ ಕಠಿಣ ಜೀವಾವಧಿ ಶಿಕ್ಷೆ