ಒಳಮೀಸಲಾತಿ ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಮಾದಿಗ ಸಂಘಟನೆಗಳಿಂದ ಬೀದರ್ ನಗರದಲ್ಲಿ ಶುಕ್ರವಾರ ಬೃಹತ್ ಅರೆಬೆತ್ತಲೆ ಮೆರವಣಿಗೆ, ಪ್ರತಿಭಟನೆ ನಡೆಯಿತು.
ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಅರೆಬೆತ್ತಲೆ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ನಡೆಯಿತು.
ಪ್ರತಿಭಟನೆಯಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಅಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾರ್ಯಕರ್ತರು ಕೇಶಮುಂಡನ ಮಾಡಿಸಿಕೊಂಡು ಸರ್ಕಾರ ವಿರುದ್ಧ ಆಕ್ರೋಶ ದಾಖಲಿಸಿದರು.
ಬಳಿಕ ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಮಾತನಾಡಿ, ʼಕಳೆದ 35 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಪರಿಶಿಷ್ಟ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ದತ್ತಾಂಶಗಳ ಆಧಾರದ ಮೇಲೆ ಆಯಾ ರಾಜ್ಯಗಳು ಒಳಮೀಸಲಾತಿ ಜಾರಿ ಮಾಡಿ ಎಂದು ತೀರ್ಪು ನೀಡಿದರೂ ರಾಜ್ಯ ಸರ್ಕಾರ ಕುಂಟು ನೆಪವೊಡ್ಡಿ ವಿಳಂಬ ನೀತಿ ಅನುಸರಿಸುತ್ತಿದೆʼ ಎಂದು ಖಂಡಿಸಿದರು.
ಮುಖಂಡರು ಮಾತನಾಡಿ, ʼಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿಯಲ್ಲಿವೆ. ಇದೇ ಆಗಸ್ಟ್ 11ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಸರ್ಕಾರ ವಿಳಂಬ ಮಾಡದೇ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಜನಾಕ್ರೋಶ ಉಗ್ರ ಸ್ವರೂಪ ತಾಳುತ್ತದೆʼ ಎಂದು ಎಚ್ಚರಿಸಿದರು.
ಒಳಮೀಸಲಾತಿ ಹೋರಾಟಗಾರರ ಮೇಲೆ ಹಾಕಲಾದ ರೌಡಿಶೀಟರ್ ಪ್ರಕರಣ ಹಿಂಪಡೆಯಬೇಕು. ಸುರಕ್ಷತಾ ಪರಿಕರ ಇಲ್ಲದೆ ಮ್ಯಾನ್‌ಹೋಲ್‌ಗೆ ಇಳಿಸಿದ ಘಟನೆ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಾಂಸ್ಥಿಕ ಹತ್ಯೆಗಳಲ್ಲವೇ?
ವಿವಿಧ ಸಂಘಟನೆಗಳ ಪ್ರಮುಖರಾದ ವಿಜಯಕುಮಾರ ಹಿಪ್ಪಳಗಾಂವ, ರಾಜು ಕಡ್ಯಾಳ, ಪ್ರಭುರಾವ ತಾಳಮಡಗಿ, ಕಮಲಾಕರ ಹೆಗಡೆ, ಪರಮೇಶ್ವರ ಕಾಳಮದರಗಿ, ಡೇವಿಡ್ ವಾಡೆಕರ್, ಪೀಟರ್ ಶ್ರೀಮಂಡಲ, ವಿಶಾಲ ಜೋಶಿ, ಜಯಶೀಲ ಮೇತ್ರೆ, ಪೀಟರ್ ಚಿಟಗುಪ್ಪ, ಜೈಶೀಲ ಕಲವಾಡೆ, ವೀರಶೆಟ್ಟಿ ಬಂಬುಳಗಿ, ದಯಾನಂದ ರೇಕುಳಗಿ, ಯುವರಾಜ ಬೆಂಡೆ, ತುಕಾರಾಮ ಲಾಡೆ, ಯೋಹಾನ್ ಡಿಸೋಜಾ, ಹರಿಹರ ಗೋಖಲೆ, ಸ್ವಾಮಿದಾಸ ಕೆಂಪೇನೂರ್, ಪ್ರದೀಪ ಹೆಗಡೆ, ವೀರಶೆಟ್ಟಿ, ಗೋರಖ ನಿಂಬೂರ, ರವಿ ಸೂರ್ಯವಂಶಿ
ವಿಜಯಕುಮಾರ ಸೂರ್ಯವಂಶಿ, ಸ್ವಾಮಿದಾಸ ಚಂಡಿಕೆ, ಲಾಲಪ್ಪ ನಿರ್ಣಾ, ಸಚಿನ ಅಂಬೆಸಿಂಗೆ, ರಾಜು ಸೋನೆ, ಜೀವನ ರಿಕ್ಕೆ ಸೇರಿದಂತೆ ವಿವಿಧ ತಾಲೂಕಿನ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು..