ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ವೈಯಕ್ತಿಕ ರಾಜಕೀಯ ವೈಷಮ್ಯ ಬಿಟ್ಟು ರೈತರಿಗೆ ಸಮರ್ಪಕವಾದ ಗೊಬ್ಬರ ವಿತರಿಸುವ ಕೆಲಸ ಮಾಡಲಿ ಎಂದು ಎಐಕೆಕೆಎಮ್‌ಎಸ್ ರೈತ ಸಂಘಟನೆ ಒತ್ತಾಯಿಸಿತು.
ರಾಜ್ಯದ ಎಲ್ಲಾ ರೈತರಿಗೆ ಕೈಗೆಟಕುವ ದರದಲ್ಲಿ ಮತ್ತು ಅಗತ್ಯವಿರುವಷ್ಟು ಯೂರಿಯಾ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿ ಕೇಂದ್ರ ರಸಗೊಬ್ಬರಗಳ ಸಚಿವರಿಗೆ ಹಾಗೂ ರಾಜ್ಯದ ಕೃಷಿ ಸಚಿವರಿಗೆ ಜಿಲ್ಲಾಧಿಕಾರಿಗಕ ಮೂಲಕ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡಿ, “ರಾಜ್ಯದಲ್ಲಿ ಪ್ರತಿ ವರ್ಷವೂ ಸಹ ಮುಂಗಾರಿನ ಸಮಯದಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ತಲೆದೂರುತ್ತಿದೆ. ರಾಜ್ಯದ ರೈತರು ಭತ್ತ, ಜೋಳ, ದ್ವಿದಳ ಧಾನ್ಯ, ಮೆಕ್ಕೆಜೋಳ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಎಲ್ಲಾ ಬೆಳೆ ಬೆಳೆಯಲು ಯೂರಿಯಾ ಸೇರಿದಂತೆ ಇತರ ಗೊಬ್ಬರದ ಅವಶ್ಯಕತೆ ಇದೆ. ಈಗ ರೈತರಿಗೆ ಈ ಗೊಬ್ಬರ ಪೂರೈಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗೊಬ್ಬರ ಪೂರೈಸುವುದೇ , ಒಬ್ಬರ ಮೇಲೊಬ್ಬರು ಕೇಸರೇರಾಚಾಡುತ್ತಿವೆ ಇದು ಖಂಡನಾರ್ಹವಾಗಿದೆ. ಹಿಂದೆ ಇದೇ ರೀತಿಯ ಅಭಾವ ಸೃಷ್ಟಿಯಾದಾಗ ರಾಜ್ಯದಲ್ಲಿ ಅದರ ವಿರುದ್ಧ ತೀವ್ರ ಹೋರಾಟ ನಡೆದಿತ್ತು, ಅಂದಿನ ಸರ್ಕಾರವು ಈ ಹೋರಾಟವನ್ನು ಹತ್ತಿಕ್ಕಲು ರೈತರ ಮೇಲೆ ಗೋಲಿಬಾರ್ ಮಾಡಿ, ಕೆಲವು ರೈತರನ್ನು ಹತ್ಯೆಗೈದಿತ್ತು. ಈ ರೀತಿಯ ಘಟನೆಗಳು ನಡೆದಿದ್ದರೂ ರಸಗೊಬ್ಬರ ಪೂರೈಕೆಯ ಸಮಸ್ಯೆ ಇದುವರೆಗೂ ಬಗೆಹರಿಯದೆ ಹಾಗೆ ಉಳಿದುಕೊಂಡಿದೆ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಳ್ಳಾರಿ | ಈಶ್ವರಚಂದ್ರ ವಿದ್ಯಾಸಾಗರರ ಜನ್ಮದಿನ ಆಚರಿಸಿದ ಎಐಡಿಎಸ್‌ಒ
ರಾಜ್ಯ ಸಮಿತಿ ಸದಸ್ಯ ಈ ಹನುಮಂತಪ್ಪ ಮಾತನಾಡಿ, “ಯೂರಿಯಾ ಬಿಕ್ಕಟ್ಟಿಗೆ ಕಾರಣ ಭ್ರಷ್ಟಾಚಾರ ಹಾಗೂ ರಸಗೊಬ್ಬರ ತಯಾರಿಕಾ ಕಂಪನಿಗಳ ದುರಾಸೆಯೂ ಕಾರಣವಾಗಿದೆ. ಸದ್ಯದಲ್ಲಿ 258 ರೂ ಇರುವ ಯೂರಿಯಾ ಬೆಲೆ ರೂ 400-500 ಕ್ಕಿಂತ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಯೂರಿಯಾ ಜೊತೆಗೆ ಇತರ ಉಪ ಉತ್ಪನ್ನಗಳನ್ನು ಖರೀದಿಸುವಂತೆ ಮಾರಾಟಗಾರರು ರೈತರನ್ನು ಒತ್ತಾಯಿಸುತ್ತಿದ್ದು, ಯೂರಿಯಾ ಒಂದೇ ಬೇಕಾದಲ್ಲಿ ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಯೂರಿಯಾ ಜೊತೆ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಖರಿಧಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಇಂತಹ ಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಗೊಬ್ಬರವನ್ನು ಮಾರಿಕೊಳ್ಳಲಾಗುತ್ತಿದೆ. ಹಾಗಾಗಿ, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಸಗೊಬ್ಬರ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯ ವ್ಯಾಪಾರದ ಬಗ್ಗೆ ಹಾಗೂ ಹೆಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಯೂರಿಯಾ ಸೇರಿದಂತೆ ಇನ್ನಿತರೆ ಎಲ್ಲಾ ರಸಗೊಬ್ಬರಗಳನ್ನು ಪೂರೈಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಜಿಲ್ಲಾ ಸಮಿತಿ ಸದಸ್ಯರಾದ ಈರಣ್ಣ, ಹೊನ್ನೂರಪ್ಪ, ಖಾಸಿಂ ಸಾಬ್, ಬಸವರಾಜ್, ಮಲ್ಲಪ್ಪ ಹಾಗೂ ಇತರರು ಉಪಸ್ಥಿತರಿದ್ದರು.