ಟ್ರೋಲರ್‌ಗಳಿಂದಾಗಿ ನನ್ನ ಕನ್ನಡ ಈಗ ಸುಧಾರಿಸಿದೆ ; ಮಾಧ್ಯಮ ಸಂವಾದದಲ್ಲಿ ಯು ಟಿ ಖಾದರ್‌

Date:

Advertisements
  • “ನಾನು ಬಲವೂ ಅಲ್ಲ, ಎಡವೂ ಅಲ್ಲ, ಎಲ್ಲರೊಂದಿಗೂ ಚೆನ್ನಾಗಿದ್ದೇನೆ”
  • “ಮೊದಲ ಅಧಿವೇಶನದಲ್ಲಿ ಹೊಸ ಸದಸ್ಯರಿಗೆ ಮಾತನಾಡಲು ಎರಡು ದಿನ ಮೀಸಲಿರಿಸಿದ್ದೆ”

“ಟ್ರೋಲರ್‌ಗಳಿಂದಾಗಿ ಈಗ ನನ್ನ ಕನ್ನಡ ಸುಧಾರಿಸಿದೆ. ಈಗ ಎಲ್ಲರಿಗೂ ಅರ್ಥವಾಗುವ ರೀತಿ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ” ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್‌ ಹೇಳಿದರು. ಮಂಗಳವಾರ ಪ್ರೆಸ್‌ ಕ್ಲಬ್‌ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಲಘು ಹಾಸ್ಯದಿಂದಲೇ ಉತ್ತರಿಸಿದರು.

“ನಾವು ದಕ್ಷಿಣ ಕನ್ನಡದವರು, ಶಾಲೆಯಲ್ಲಿ ಮಾತ್ರ ಕನ್ನಡ. ಮನೆಯಲ್ಲಿ ಹಿಂದೂಗಳು ತುಳು ಮಾತನಾಡುತ್ತಾರೆ, ಮುಸ್ಲಿಮರು ಬ್ಯಾರಿ ಭಾಷೆ ಮಾತನಾಡುತ್ತಾರೆ, ಕ್ರಿಶ್ಚಿಯನ್ನರು ಕೊಂಕಣಿ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಬಂದ ತಕ್ಷಣ ಎಲ್ಲರೂ ತುಳು ಮಾತನಾಡುತ್ತೇವೆ. ಹಾಗಾಗಿ ನಮ್ಮ ಉಚ್ಛಾರಣೆ ಸ್ವಲ್ಪ ತಪ್ಪಾಗುತ್ತದೆ. ಆದರೆ, ಟ್ರೋಲ್‌ಗಳಿಂದ ಬೇಸರವಾಗಿಲ್ಲ. ಅವರಿಂದಾಗಿ ನನ್ನ ಭಾಷೆ ಪರಿಪಕ್ವವಾಗಲು ಸಹಾಯವಾಗಿದೆ” ಎಂದರು. ಸಂವಾದದುದ್ದಕ್ಕೂ ಅವರು ಬಹಳ ಎಚ್ಚರದಿಂದ ಭಾಷಾ ಬಳಕೆ ಮಾಡುತ್ತಿದ್ದುದು ಗಮನಕ್ಕೆ ಬಂತು.

“ವಿಧಾನಸಭಾ ಸ್ಪೀಕರ್‌ ಆಗಿ ನಾನು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಒಟ್ಟಾಗಿ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಮೊದಲ ಅಧಿವೇಶನದಲ್ಲಿ ಹೊಸ ಸದಸ್ಯರಿಗೆ ಮಾತನಾಡಲು ಎರಡು ದಿನ ಮೀಸಲಿರಿಸಿದ್ದೆ. ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಆದರೂ ಎಲ್ಲ ವಿಧೇಯಕಗಳನ್ನು ಚರ್ಚೆಗಿಟ್ಟೇ ಅನುಮೋದಿಸಿದ್ದೇನೆ. ಆಡಳಿತ ಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿದ ದಿನವೇ ಅನುಮೋದಿಸಲು ಆಡಳಿತ ಪಕ್ಷದವರು ಹೇಳಿದರೂ ನಾನು ಅದನ್ನು ಚರ್ಚೆಗಿಟ್ಟು ಮರುದಿನ ಅನುಮೋದಿಸಿದೆ. ಸದಸ್ಯರ ಅನುಮಾನಗಳಿಗೆ ಕೃಷಿ ಸಚಿವರು ಉತ್ತರಿಸಿದ್ದಾರೆ” ಎಂದು ವಿವರಿಸಿದರು.

Advertisements

“ಸಭಾಧ್ಯಕ್ಷನಾಗಿ ನಾನು ಎಷ್ಟೇ ವಿರೋಧ ಪಕ್ಷದವರ ಮಿತ್ರನಾದರೂ ಅವರಿಗೆ ಸಂಶಯವೇ ಹೆಚ್ಚು. ಪ್ರತಿಪಕ್ಷಕ್ಕೆ ಹೆಚ್ಚು ಸಮಯ ಮಾತನಾಡಲು ಕೊಟ್ಟು ಸರ್ಕಾರವನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡುವುದು ನನ್ನ ಕರ್ತವ್ಯ. ಆದರೆ, ಕೆಲವು ಬಿಲ್‌ ಪಾಸು ಮಾಡುವಾಗ ನಾನು ಆಡಳಿತ ಪಕ್ಷದ ಪರ ನಿಲ್ಲಲೇ ಬೇಕಾಗುತ್ತದೆ. ಇಲ್ಲದಿದ್ದರೆ ಜನರಿಗೆ ತೊಂದರೆಯಾಗುತ್ತದೆ” ಎಂದು ವಿವರಿಸಿದರು.

“ನಾನು ಬಲವೂ ಅಲ್ಲ, ಎಡವೂ ಅಲ್ಲ. ನನ್ನ ಕ್ಷೇತ್ರದಲ್ಲಿ ಎಲ್ಲರೊಂದಿಗೂ ನಾನು ಚೆನ್ನಾಗಿದ್ದೇನೆ. ಬಲದವರು ಕಷ್ಟದಲ್ಲಿದ್ದರೆ ಅವರಿಗೂ ಸಹಾಯ ಮಾಡುತ್ತೇನೆ. ಎಡದವರು ಕಷ್ಟದಲ್ಲಿದ್ದಾಗ ಅವರಿಗೂ ಸಹಾಯ ಮಾಡುತ್ತೇನೆ. ಕಷ್ಟದಲ್ಲಿರುವ ಎಲ್ಲರನ್ನೂ ಮೇಲಕ್ಕೆತ್ತುವುದು ನನ್ನ ಜವಾಬ್ದಾರಿ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲೋಕಸಭೆಯಲ್ಲಿ ಸಂಸದ್‌ ಟಿವಿ ಇರುವಂತೆ ಕರ್ನಾಟಕ ವಿಧಾಸಭೆಯಲ್ಲೂ ಅಧಿವೇಶದ ಪ್ರಸಾರ ಮಾಡುವ ಚಾನೆಲ್‌ ಸ್ಥಾಪಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, “ಆ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೇನೆ. ಅದಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ವರ್ಷದಲ್ಲಿ ಹೆಚ್ಚೆಂದರೆ 60 ದಿನ ಅಧಿವೇಶನ ನಡೆಯುತ್ತದೆ. ಆದರೆ ಅದನ್ನು ಇಡೀ ವರ್ಷ ನಿರ್ವಹಣೆ ಮಾಡುವುದು, ಸಿಬ್ಬಂದಿಗಳ ನಿಯೋಜನೆಗೆಲ್ಲ ಕೋಟ್ಯಂತರ ಹಣ ವ್ಯರ್ಥವಾಗುತ್ತದೆ. ಹಾಗಾಗಿ ಆ ಯೋಜನೆ ನಮ್ಮ ಮುಂದೆ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಬೇಸರದ ನರ ಕಟ್‌ ಮಾಡಿಕೊಂಡು ರಾಜಕೀಯಕ್ಕೆ ಬಂದಿದ್ದೇನೆ

ಮುಸ್ಲಿಂ ಸಮುದಾಯದ ಶಾಸಕರೇ ಕಡಿಮೆ ಇರುವುದು. ಅದರಲ್ಲಿ ನಿಮ್ಮನ್ನು ಮಂತ್ರಿ ಮಾಡದೇ ಸ್ಪೀಕರ್‌ ಮಾಡಿ ಕೂರಿಸಿದ್ದು ಬೇಸರ ತಂದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್‌, “ಸ್ಪೀಕರ್‌ ಸ್ಥಾನ ವಹಿಸಿಕೊಂಡಿದ್ದೇ ಖುಷಿಯ ಘಟನೆ. ಬೇಸರದ ಘಟನೆ ಯಾವುದೂ ಇಲ್ಲ. ರಾಜಕೀಯದಲ್ಲಿ ಇರುವವರೆಗೂ ಬೇಸರ ಆಗುವುದೂ ಇಲ್ಲ. ಬೇಸರ ಎಂಬ ನರ ಕಟ್‌ ಮಾಡಿಕೊಂಡೇ ರಾಜಕೀಯಕ್ಕೆ ಬಂದಿದ್ದೇನೆ” ಎಂದು ಉತ್ತರಿಸಿದರು.

ಹಿಂದಿನಂತೆ ಓಡಾಡಲು ಆಗುತ್ತಿಲ್ಲ

ಈಗ ಕ್ಷೇತ್ರದ ಜನರ ಜೊತೆ ಒಡನಾಟ ಹೇಗಿದೆ ಎಂಬ ಪ್ರಶ್ನೆಗೆ, “ಹಿಂದೆ ಕ್ಷೇತ್ರದ ತುಂಬ ಓಡಾಡುತ್ತಿದ್ದೆ. ಕೆಲವೊಮ್ಮೆ ಬೈಕ್‌ನಲ್ಲೂ ಕ್ಷೇತ್ರ ಸುತ್ತಾಡುತ್ತಿದ್ದೆ. ಗೂಡಂಗಡಿಯಲ್ಲಿ ಟೀ ಕುಡಿಯುತ್ತಿದ್ದೆ. ಈಗ ಹಾಗಾಗುತ್ತಿಲ್ಲ. ಇತ್ತೀಚೆಗೆ ಧರ್ಮಸ್ಥಳದ ಕಡೆ ಹೋಗಿದ್ದೆ. ಅಲ್ಲಿ ನನ್ನ ಸ್ನೇಹಿತನ ಚಿಕ್ಕ ಹೋಟೆಲ್‌ ಇದೆ. ಅಲ್ಲಿಗೆ ಬರುವುದಾಗಿ ತಿಳಿಸಿದ್ದೆ. ಆದರೆ, ನಾನು ಅಲ್ಲಿಗೆ ತಲುಪುವುದಕ್ಕೂ ಒಂದು ಗಂಟೆ ಮೊದಲೇ ಪೊಲೀಸರು ತಲುಪಿದ್ದರು. ಅದರಿಂದಾಗಿ ಅಲ್ಲಿಗೆ ನಿತ್ಯ ಟೀ ಕುಡಿಯಲು ಬರುತ್ತಿದ್ದ ಲಾರಿ ಡ್ರೈವರ್‌ಗಳೆಲ್ಲ ಅಂದು ಲಾರಿ ನಿಲ್ಲಿಸದೇ ಹೋಗಿದ್ದರು. ನನ್ನಿಂದಾಗಿ ಅವನ ವ್ಯಾಪಾರಕ್ಕೆ ತೊಂದರೆ ಆಗಿತ್ತು” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X