“ಲೈಂಗಿಕ ದೌರ್ಜನ್ಯ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ವಿಕೃತ ರಾಸಲೀಲೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಕಳೆದ ವರ್ಷದಿಂದ ನಡೆದಿದ್ದ ಪ್ರಕರಣ ಅಂತಿಮವಾಗಿ ತೀರ್ಪು ನೀಡಿದ್ದು, ನಾಳೆ ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ತಿಳಿಸಿದೆ. ಈ ತೀರ್ಪನ್ನು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ಪಟ್ಟಣದಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ಜನಪ್ರತಿನಿಧಿಯಾಗಿ ಹಲವಾರು ಮಹಿಳೆಯರ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ ವೆಸಗಿರುವ ಅಪರಾಧಿ ಪ್ರಜ್ವಲ್ ರೇವಣ್ಣನಿಗೆ ಗರಿಷ್ಟ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕೆಂದು ಕೋರುತ್ತದೆ” ಎಂದು ಹೇಳಿದರು.
“ಪ್ರಜ್ವಲ್ ರೇವಣ್ಣನ ಈ ವಿಕೃತ ಪ್ರಕರಣವು ಹೊರಬಂದಾಗಿನಿಂದ ಮಹಿಳಾ ಸಂಘಟನೆಗಳು, ಡಿವೈಎಫ್ಐ ಸೇರಿದಂತೆ ರಾಜ್ಯದ ಎಲ್ಲ ಜನಪರ ಚಳುವಳಿಗಳು ರಾಜ್ಯದ್ಯಂತ ಪ್ರತಿಭಟನೆ ನಡೆಸಿ ಪ್ರಜ್ವಲ್ ರೇವಣ್ಣನಿಗೆ ಸೂಕ್ತ ಶಿಕ್ಷೆ ವಿಧಿಸಲು ಒತ್ತಾಯಿಸಿದ್ದವು. ಹಾಸನದಲ್ಲೂ ಹಲವು ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಂತಿಮವಾಗಿ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ 2024 ಮೇ 30 ರಂದು ಹಾಸನ ನಗರದಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ನಾಡಿನಾದ್ಯಂತ ಆಗಮಿಸಿದ್ದ ಹತ್ತಾರು ಸಾವಿರ ಜನರು ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಮತ್ತು ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯಲು ಆಗ್ರಹಿಸಿದ್ದರು” ಎಂದರು.
“ದೌರ್ಜನ್ಯಗಳಲ್ಲಿ ನೊಂದ ಸಂತ್ರಸ್ತರಿಗೆ ಈ ಪ್ರಕರಣದಲ್ಲಿ ನ್ಯಾಯಾಲಯವು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಆರೋಪವನ್ನು ಸಾಬೀತುಪಡಿಸುವ ಜೊತೆಯಲ್ಲಿ ನೊಂದ ಸಂತ್ರಸ್ತರಿಗೆ ನ್ಯಾಯ ಒದಗಿಸಿರುವುದು ನಿಜಕ್ಕೂ ಸಮಾಧಾನದ ಸಂಗತಿಯಾಗಿದೆ. ಅಲ್ಲದೇ ಸಂತ್ರಸ್ತರು ಧೈರ್ಯವಾಗಿ ಎದುರಿಸಿದರೆ ನ್ಯಾಯ ಸಿಗುತ್ತದೆ, ಎಂಬುದಕ್ಕೆ ಸಾಕ್ಷಿಯಾಗಿದೆ. ಮನೆಗೆಲಸದ ಮಹಿಳೆಯ ಮೇಲೆ ನಡೆದ ಅತ್ಯಾಚಾರದ ಒಂದು ಪ್ರಕರಣದಲ್ಲಿ ಮಾತ್ರ ಈಗ ತೀರ್ಪು ಹೊರಬಂದಿದ್ದು ಉಳಿದ ಪ್ರಕರಣಗಳ ತೀರ್ಪು ಕೂಡ ಶೀಘ್ರವಾಗಿ ಹೊರಬಂದು ಸಂತ್ರಸ್ತರಿಗೆ ನ್ಯಾಯ ಸಿಗಬೇಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಿಇಓ ಭರತ್ ಎಸ್ ಭೇಟಿ
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಮಹಿಳೆಯರ ಘನತೆಗೆ ಧಕ್ಕೆ ತಂದೊಡ್ಡಿರುವ ಅಶ್ಲೀಲ ವಿಡಿಯೋಗಳನ್ನು ಪೆನ್ ಡ್ರೈವ್ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿರುವ ಹೀನ ಮನಸ್ಥಿತಿಯ ದುರುಳರಿಗೂ ಸೂಕ್ತ ಶಿಕ್ಷೆ ನೀಡಬೇಕು” ಡಿವೈಎಫ್ಐ ರಾಜ್ಯ ಒತ್ತಾಯಿಸಿದ್ದಾರೆ.