ರಾಯಚೂರು ಜಿಲ್ಲೆಯ ಪ್ರಮುಖ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನವಾದರೂ ಫಲಿತಾಂಶವಿಲ್ಲದ ಕಾರಣಕ್ಕೆ ಮುಖ್ಯಮಂತ್ರಿ ಅವರು ಹಟ್ಟಿ ಚಿನ್ನದ ಗಣಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರಿಗೆ ಘೇರಾವ್ ಹಾಕಲಾಗುವುದು ಎಂದು ಸಿಪಿಐ(ಎಂಎಲ್ )ರೆಡ್ ಸ್ಟಾರ್ ಮುಖಂಡರಾದ ಆರ್ ಮಾನಸಯ್ಯ ಅವರು ಹೇಳಿದರು.
ಲಿಂಗಸೂಗೂರು ನಗರದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಳೆದ ಬಾರಿ ಮುಖ್ಯಮಂತ್ರಿ ಅವರು ಜಿಲ್ಲೆಯ ಪ್ರವಾಸ ಕೈಗೊಂಡಾಗ ಜಿಲ್ಲೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಸಲ್ಲಿಸಿದರು ಪರಿಹಾರ ದೊರಕಿಲ್ಲ ಎಂದು ಆರೋಪಿಸಿದರು.
ತುಂಗಭದ್ರ ಕಾರ್ಮಿಕರಿಗೆ ಕಳೆದ 7 ತಿಂಗಳ ಬಾಕಿ ವೇತನ ಪಾವತಿ ಹಾಗೂ ಜೆಡಿಎಸ್ ಮಾಜಿಮಂತ್ರಿ ವೆಂಕಟರಾವ್ ನಾಡಗೌಡರ ಅವರ ವಶದಲ್ಲಿದ್ದ ಜವಳಗೇರಾ1064 ಎಕರೆ ಹೆಚ್ಚುವರಿ ಭೂಮಿಯನ್ನು ಭೂ ರಹಿತರಿಗೆ ಕೂಡಲೇ ಹಂಚಬೇಕು ಎಂದು ಕಾಲಾವಕಾಶ ನೀಡಿದರು ಈಡೇರಿಸಿಲ್ಲ. ಜಿಲ್ಲೆಯಾದ್ಯಂತ ಕಂದಾಯ ಹಾಗೂ ಅರಣ್ಯ ಭೂಮಿ ಸಮೀಕ್ಷೆ ಹೆಸರಲ್ಲಿ, ಐವತ್ತು ವರ್ಷಗಳಿಂದ ಸಾಗುವಳಿ ಮಾಡಿದ ಸಾವಿರಾರು ಭೂ ರಹಿತರ ಫಾರ್ಮ್ 57 ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ಹಟ್ಟಿ ಚಿನ್ನದ ಗಣಿಯ ಆಪತ್ಕಾಲದ 985.5 ಕೋಟಿ ಮೀಸಲು ನಿಧಿಯನ್ನು ಗಣಿಯೇತರ ದೇವದುರ್ಗ ತಾಲ್ಲೂಕಿನ ವಂದಲಿ, ಮಸ್ಕಿ ತಾಲೂಕಿನ ಸಾನಬಾಳ ಹಳೆ ಗಣಿ ಹಾಗೂ ಚಿಕ್ಕನಗನೂರನಲ್ಲಿ ಹೊಸ ಚಿನ್ನದ ಗಣಿ ಆರಂಭಿಸಿ ಈ ಭಾಗದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಭದ್ರತೆವಾಗಬೇಕು ಎಂದು ತಿಳಿಸಿದರು.
ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜನರಿಗೆ ಸೇರಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ನಿರ್ಮಾಣ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಅನೇಕ ಕುಟುಂಬಗಳು ತಮ್ಮ ಜೀವನೋಪಾಯದ ಮೂಲವಾದ ಭೂಮಿಯನ್ನು ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ಕುಟುಂಬಗಳು ಈಗ ಬದುಕಿನ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರವು ತಕ್ಷಣವೇ ಸೂಕ್ತ ಪರಿಹಾರದ ಹಣವನ್ನು ಘೋಷಿಸಿ, ಸಂತ್ರಸ್ತರಿಗೆ ಬದಲಿ ಸಾಗುವಳಿ ಭೂಮಿಯನ್ನು ಮಂಜೂರಿ ಮಾಡಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಾಡ ತಹಶೀಲ್ದಾರ್ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ; ದಾಖಲೆಗಳು ಭಸ್ಮ
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಅಮೀರ ಅಲಿ, ರಾಜ್ಯ ಉಪಾಧ್ಯಕ್ಷರು ಎಂ.ಗಂಗಾಧರ, ಮಲ್ಲಯ್ಯ ಕಟ್ಟಿಮನಿ, ಆದೇಶ ಹಿರೇನಗನೂರು, ಇನ್ನಿತರರು ಇದ್ದರು.