ದಲಿತರ ಅಭಿವೃದ್ಧಿಗೆ ಮೀಸಲಿರುವ ಎಸ್‌ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಲು ಹೊರಟಿರುವುದು ಖಂಡನೀಯ ಎಂದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ) ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಎಂದರು.
2013ರಲ್ಲಿ ಸಿದ್ರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ವಿಶೇಷ ಹಂಚಿಕೆ ಮತ್ತು ಬುಡಕಟ್ಟುಗಳ ಉಪಹಂಚಿಕೆ ಅಧಿನಿಯಮವನ್ನು ಜಾರಿಗೆ ತರಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆಗೆ ತಕ್ಕಂತೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಹಂಚಿಕೆ ಮಾಡಬೇಕಾಗುತ್ತದೆ. ದಲಿತರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ಖರ್ಚು ಮಾಡಬೇಕಾಗುತ್ತದೆ. ಸರಕಾರ ಈ ಕಾಯ್ದೆ ಉಲ್ಲಂಘಿಸಿ ಅನ್ಯ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದು ಖಂಡನೀಯʼ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು.
ʼರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಎಸ್‌ಸಿಎಸ್‌ಪಿ, ಟಿಎಸ್ಪಿ ಅನುದಾನ ಬೇರೆ ಯೋಜನೆಗಳಿಗೆ ಬಳಸಿಕೊಳ್ಳಬಾರದು. ಈ ಬಗ್ಗೆ ಎಲ್ಲ ದಲಿತಪರ ಸಂಘಟನೆಗಳು ಒಗ್ಗೂಡಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಇಚ್ಚಾಶಕ್ತಿ ಪ್ರದರ್ಶಿಸಬೇಕು. ಇದರ ವಿರುದ್ಧ ದಲಿತ ಸಂಘಟನೆಗಳು ಐಕ್ಯತೆಯಿಂದ ಹೋರಾಡಬೇಕು. ಇಲ್ಲದಿದ್ದರೆ ಯೋಜನೆಯ ಉದ್ದೇಶವೇ ಬುಡಮೇಲಾಗುವ ಸಾಧ್ಯತೆ ಇದೆ ಎಂದ ಅವರು, ಈ ಬಗ್ಗೆ ಚಳುವಳಿ ರೂಪಿಸಲು ಆಗಸ್ಟ್ 5 ರಂದು ರಂದು ಸಭೆ ಸೇರಲಾಗುವುದುʼ ಎಂದು ಮಾಹಿತಿ ನೀಡಿದರು.