ಬೀದರ್ ಜಿಲ್ಲೆ ಸೇರಿ ಕರ್ನಾಟಕ ರಾಜ್ಯದಲ್ಲಿ ಎದುರಾಗಿರುವ ರಸಗೊಬ್ಬರ ಕೊರತೆಯನ್ನು ನಿವಾರಿಸುವಂತೆ ಕಾಂಗ್ರೆಸ್ ಸಂಸದರ ನಿಯೋಗ ಒತ್ತಾಯಿಸಿದೆ.
ನವದೆಹಲಿಯಲ್ಲಿ ಸಂಸದರಾದ ಸಾಗರ ಖಂಡ್ರೆ, ಡಾ.ಪ್ರಭಾ ಮಲ್ಲಿಕಾರ್ಜುನ, ಜಿ.ಕುಮಾರ ನಾಯಕ ಮತ್ತು ಇ.ತುಕಾರಾಮ ಅವರನ್ನು ಒಳಗೊಂಡ ಕಾಂಗ್ರೆಸ್ ಸಂಸದರ ನಿಯೋಗ ಕೇಂದ್ರದ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ʼರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಆಗಿರುವುದರಿಂದ ಬಿತ್ತನೆ ಪ್ರಮಾಣ ಪೂರ್ಣಗೊಂಡು ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದರು. ಆದರೆ, ಕೇಂದ್ರ ಸರಕಾರ ಸಕಾಲದಲ್ಲಿ ರಸಗೊಬ್ಬರ ಪೂರೈಸದ ಕಾರಣ ರಾಜ್ಯದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ವರ್ಷ ಯೂರಿಯಾ ಪೂರೈಕೆ ಪ್ರಮಾಣ ಶೇ.50ರಷ್ಟು ಕಡಿಮೆ ಆಗಿದೆ. ಇದರಿಂದ ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆʼ ಎಂದು ಗಮನ ಸೆಳೆದರು.
ಇದನ್ನೂ ಓದಿ : ಬೀದರ್ | ಒಳಮೀಸಲಾತಿ ಜಾರಿ ವಿಳಂಬ : ಮಾದಿಗ ಸಂಘಟನೆಗಳಿಂದ ಅರೆಬೆತ್ತಲೆ ಮೆರವಣಿಗೆ
ರಸಗೊಬ್ಬರ ಅಭಾವ ಸೃಷ್ಟಿಸಿದರಿಂದ ರೈತರು ದುಬಾರಿಯಲ್ಲಿ ಬೆಲೆಯಲ್ಲಿ ರಸಗೊಬ್ಬರ ಖರೀದಿಸುವಂತಾಗಿದೆ. ಕೇಂದ್ರ ಸರಕಾರ ತಕ್ಷಣ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಿದರೆ ರೈತರ ಸಮಸ್ಯೆಗೆ ಪರಿಹಾರ ಸಿಗಲಿದೆ ಕಾಂಗ್ರೆಸ್ ಸಂಸದರ ನಿಯೋಗ ಕೇಂದ್ರಕ್ಕೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದೆ.