ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಯಚೂರು ನಗರದ ಡಾ. ಬಿ. ಆರ್ ಅಂಬೇಡ್ಕರ್ ವೃತ್ತದಲ್ಲಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಾದಿಗ ಸಮಾಜದ ಮುಖಂಡರು ಅರೆಬೆತ್ತಲೆಯಾಗಿ ಬೃಹತ್ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ನಂತರ ಅರೆಬೆತ್ತಲೆಯಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಸುಪ್ರಿಂಕೋರ್ಟ್ ಒಳ ಮೀಸಲಾತಿ ಜಾರಿಗೆ ನಿರ್ದೇಶನ ನೀಡಿದ್ದರೂ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಎಂ.ವಿರುಪಾಕ್ಷಿ ಮಾತನಾಡಿ, ಒಳಮೀಸಲಾತಿಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಾಲಹರಣ ಮಾಡಿ ಸಮಾಜವನ್ನು ನಿರ್ಲಕ್ಷ್ಯ ವಹಿಸಿದೆ. ಮುಂದಿನ 15 ದಿನಗಳಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಮಾದಿಗ ಸಮುದಾಯದ 10 ರಿಂದ 15 ಲಕ್ಷ ಜನರು ಇಡೀ ಬೆಂಗಳೂರಿಗೆ ಮುತ್ತಿಗೆ ಹಾಕಿ ಬೆಂಗಳೂರು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನೋರ್ವ ಮುಖಂಡ ಜೆ.ಬಿ. ರಾಜು ಮಾತನಾಡಿ, ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ ಸರ್ಕಾರಗಳು ಈಗಾಗಲೇ ಒಳ ಮೀಸಲಾತಿ ಜಾರಿಗೊಳಿಸಿದ್ದು, ಕೂಡಲೇ ರಾಜ್ಯ ಸರ್ಕಾರ ಕಾಲಹರಣ ಮಾಡದೇ ಜಾರಿಗೊಳಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜ್ವಲಂತ ಸಮಸ್ಯೆಗಳ ನಿರ್ಲಕ್ಷ್ಯ- ಸಿಎಂಗೆ ಘೇರಾವ್ : ಆರ್. ಮಾನಸಯ್ಯ
ಪ್ರತಿಭಟನೆಯಲ್ಲಿ ಪ್ರಮುಖರಾದ ರವೀಂದ್ರ ಜಲ್ದಾರ್, ರಾಮಣ್ಣ, ತಿಮ್ಮಪ್ಪ ಪಿರಂಗಿ, ಪಿ.ಎಲ್ಲಪ್ಪ, ಜೆ.ತಿಮ್ಮಪ್ಪ, ಶಂಶಾಲಂ, ಎಸ್.ರಾಜು, ಈರಣ್ಣ ಭಂಡಾರಿ, ಚಂದ್ರು ಭಂಡಾರಿ, ಎಂ.ಕೆ.ನಾಗರಾಜ, ಸತ್ಯನಾಥ, ಭೀಮಣ್ಣ ಮಂಚಾಲ, ಅನೀಲ್ ಕುಮಾರ, ರಂಜಿತ್ ದಂಡೋರಾ, ದುಳ್ಳಯ್ಯ ಗುಂಜಳ್ಳಿ, ಮಾನಪ್ಪ ಮೇಸ್ತ್ರಿ, ನರಸಪ್ಪ ಆಶಾಪೂರ, ಆಂಜನೇಯ ಕುರುಬದೊಡ್ಡಿ, ಸತೀಶ, ಮೌನೇಶ, ರವಿಕುಮಾರ ಸೇರಿದಂತೆ ಅನೇಕರಿದ್ದರು.
