ಸರ್ವೋಚ್ಚ ನ್ಯಾಯಾಲಯದ ಆದೇಶದ ಪರಿಶಿಷ್ಟಜಾತಿ ಸಮುದಾಯಗಳಿಗೆ ಒಳಮೀಸಲಾತಿ ನೀಡಬೇಕು ಎಂದು ಕೊಪ್ಪಳ ಜಿಲ್ಲೆಯ ಮಾದಿಗ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನಕ್ಕೆ ಒಳಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಹೋರಾಟಗಾರರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ತಹಶೀಲ್ದಾರ್ ವಿಠಲ ಚೌಗುಲಾ ಅವರ ಬಹುದಿನಗಳ ಬೇಡಿಕೆಯಾದ ಒಳಮೀಸಲಾತಿ ಜಾರಿಗೊಳಿಸಲು ಮನವಿ ಸಲ್ಲಿಸಿದರು.
“ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಕೈಬಿಡಬೇಕು. ಆಗಸ್ಟ್ 11ರಂದು ಅರಂಭವಾಗುವ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ತರಬೇಕು. ಇಲ್ಲದಿದ್ದರೆ, 16 ಆಗಸ್ಟ್‌ರಿಂದ ರಾಜ್ಯಾದ್ಯಂತ ಅಸಹಕಾರ ಹೋರಾಟ ಆರಂಭಿಸಲಾಗುವುದು. ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಯಾವ ಅಧಿಕಾರಕ್ಕೆ ಬರುವ ಮುನ್ನ ಒಳಮೀಸಲಾತಿ ಜಾರಿ ಮಾಡುತ್ತೇವೆ ತಪ್ಪಿ ನಡೆಯುವುದಿಲ್ಲವೆಂದು ಹೇಳುತ್ತವೆ. ಅಧಿಕಾರಕ್ಕೆ ಬಂದ ಮೇಲೆ ತಮ್ಮ ವರಸೆಯನ್ನೇ ಬದಲಾಯಿಸಿಬಿಡುತ್ತವೆ. ನಮ್ಮ ತಾಳ್ಮೆ ಪರೀಕ್ಷೀಸಬೇಡಿ” ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಜಿಲ್ಲಾ ಕಚೇರಿ ಒಳನುಗ್ಗಲು ಪ್ರಯತ್ನ ಹೆಚ್ಚುತ್ತಿದ್ದರಿಂದ ಪೊಲೀಸರು ಮಾಜಿ ಶಾಸಕ ಬಸವರಾಜ್ ದಡೆಸೂರು ಸೇರಿದಂತೆ ಹಲವು ಪ್ರತಿಭಟನೆ ನಿರತ ಹೋರಾಟಗಾರರನ್ನು ವಶಕ್ಕೆ ಪಡೆದು ಸಾರಿಗೆ ವಾಹನದಲ್ಲಿ ಕರೆದುಕೊಂಡು ಹೋದರು. ಇದರಿಂದ ಆಕ್ರೋಶಗೊಂಡ ಜನರು ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿ ಭಿತ್ತಪತ್ರಗಳನ್ನು ಪ್ರದರ್ಶಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಒಳಮೀಸಲಾತಿ ಜಾರಿಗೆ ಅರೆಬೆತ್ತಲೆ ಮೆರವಣಿಗೆ: ಕೇಶ ಮುಂಡನೆ ಮಾಡಿಕೊಂಡು ವಿನೂತನ ಪ್ರತಿಭಟನೆ
ಜಿಲ್ಲಾಡಳಿತಭವನ ಪ್ರವೇಶಿಸುವ ಮುನ್ನ ಕಚೇರಿ ಎದುರು ವೇದಿಕೆ ಕಾರ್ಯಕ್ರಮದಲ್ಲಿ ಬಸವರಾಜ್ ದಡೆಸೂರು ಮಾತನಾಡಿ, “ಶೋಷಿತರಲ್ಲೇ ಶೋಷಿತ ಸಮುದಾಯಗಳಿಗೆ ಒಳಮೀಸಲಾತಿ ಜಾರಿ ಮಾಡುವಂತೆ ಸುಮಾರು 35 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದೆ. ಆದರೆ, ಯಾವ ಸರ್ಕಾರಗಳು ನಮ್ಮ ಹೋರಾಟವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ನಾಳೆಯ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.