ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮಾದಿಗ ಸಮುದಾಯಕ್ಕೆ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿ ಬಳ್ಳಾರಿ ಜಿಲ್ಲೆಯ ಮಾದಿಗ ಜನಾಂಗದ ಹಿರಿಯ ಮುಖಂಡರಿಂದ ಅರೆಬೆತ್ತಲೆ ಮೆರವಣಿಗೆ ಹಾಗೂ ಕೇಶ ಮುಂಡನೆ ಮಾಡಿಕೊಂಡು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ಕಾಂಪ್ಲೆಕ್ಸ್‌ನಿಂದ ಆರಂಭಗೊಂಡ ಮೆರವಣಿಗೆ ಗಡಿಗೆ ಚನ್ನಪ್ಪ ವೃತ್ತದ ಮೂಲಕ ಹಾದು ಜಿಲ್ಲಾಧಿಕಾರಿ ಕಚೇರಿ ಎದುರು ಜನಾಕ್ರೋಶ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಮಾದಿಗ ಸಮಾಜದ ಹಿರಿಯ ಮುಖಂಡ ನಾರಾಯಣಸ್ವಾಮಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಮಾದಿಗರನ್ನು ‘ನಾವು ಉದ್ಧಾರ ಮಾಡಿದ್ದೇವೆ’ ಎಂದು ಕೊಚ್ಚಿಕೊಳ್ಳುತ್ತಿದೆ. ಕೇವಲ ರಾಜಕಾರಣಕ್ಕಾಗಿ ಹಾಗೂ ಚುನಾವಣಾ ಸಂದರ್ಭದಲ್ಲಿ ಮಾದಿಗರ ಮತಗಳಿಗಾಗಿ ಅವರ ಮೂಗಿಗೆ ತುಪ್ಪ ಸವರುತ್ತ ಎಪ್ಪತ್ತು ವರ್ಷಗಳನ್ನು ಕಳೆದಿದೆ. ಆದರೆ ಈವರೆಗೂ ಮಾದಿಗ ಜನಾಂಗಕ್ಕೆ ಸಮರ್ಪಕವಾಗಿ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಅತ್ಯಂತ ಮುಖ್ಯವಾಗಿ ಸರ್ವೋಚ್ಚ ನ್ಯಾಯಾಲಯ ಮಾದಿಗರಿಗೆ ಒಳಮೀಸಲಾತಿ ಜಾರಿಗೊಳಿಸುವಂತೆ ಆದೇಶ ನೀಡಿ ವರ್ಷ ಕಳೆದರೂ ಅದನ್ನು ಜಾರಿಗೊಳಿಸುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ಕೂಡಲೇ ಮಾದಿಗರಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು” ಎಂದು ಕೇಶ ಮುಂಡನೆ ಮಾಡಿಸಿಕೊಂಡು ಪ್ರತಿಭಟಿಸಿದರು.
“ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳಮೀಸಲಾತಿ ಬೇಡಿಕೆ ಹಾಗೂ ಹೋರಾಟ 35 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಈಗಾಗಲೇ ಒಳಮೀಸಲಾತಿಯನ್ನು ಜಾರಿಗೊಳಿಸಿವೆ. ಆ ಪ್ರಕಾರ ಕೂಡಲೇ ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
“ರಾಜ್ಯ ಸರ್ಕಾರವು ಈ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಳಂಬ ನೀತಿಯಿಂದಾಗಿ ಒಳಮೀಸಲಾತಿ ಅಪೇಕ್ಷಿತ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ರಾಜ್ಯ ಸರ್ಕಾರ ಮಾತ್ರ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ಪರಿಶಿಷ್ಟ ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾದಿಗ ಸಮುದಾಯದ ಜತೆಗೆ ಇತರೆ 29 ಉಪಜಾತಿಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ” ಎಂದು ತಿಳಿಸಿದರು.
ಮುಖಂಡ ಟಿ ಪಂಪಾಪತಿ ಮಾತನಾಡಿ, “ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿಯ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆ ಮತ್ತು ಸಮುದಾಯಗಳ ನಡುವಿನ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಯೋಗ ಎಲ್ಲ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ಜನವರಿಯಲ್ಲಿ ಕೇಳಿದ್ದು, ರಾಜ್ಯ ಸರ್ಕಾರದ ನಿರೀಕ್ಷೆಯಿಂದಾಗಿ 6 ತಿಂಗಳಾದರೂ ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ. ಕೆಲವು ಇಲಾಖೆಗಳ ಮಾಹಿತಿ ಅಪೂರ್ಣವಾಗಿದೆ. ಆಯೋಗ ನಡೆಸಿದ ಸಮೀಕ್ಷೆ ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟುಹಾಕಿ ನಗೆಪಾಟಲಿಗೆ ಗುರಿಯಾಗಿವೆ. ಮೂರು ವಾರದಲ್ಲಿ ಸಮೀಕ್ಷೆ ಮುಗಿಸಿ ವರದಿ ಸಿದ್ಧಪಡಿಸಲಾಗುವುದೆಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
“ಕಾಂತರಾಜ್ ಆಯೋಗದ ಜಾತಿಗಣತಿಯ ವರದಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದ ಕೊನೆಗೆ ಕಸದ ಬುಟ್ಟಿ ಸೇರಿತ್ತು. ನಾಗಮೋಹನ್ ದಾಸ್ ವರದಿಯ ಬಗೆಗಿನ ಗೊಂದಲಗಳು ಸರ್ಕಾರದ ನಿರ್ಲಕ್ಷ್ಯದ ದೋರಣೆಯ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸುತಿದ್ದೇವೆ. ಸರ್ಕಾರ ಸರಿದಾರಿಗೆ ಬರಬೇಕು, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕೆಂಬುದು ನಮ್ಮ ಅಗ್ರಹ. ಹಾಗಾಗಿ ಆಗಸ್ಟ್ 11ರಿಂದ ಪ್ರಾರಂಭವಾಗುವ ಅಧಿವೇಶನಲ್ಲಿ ಸರ್ಕಾರದ ಮೀಸಲಾತಿ ಕುರಿತು ನಿರ್ಲಕ್ಷ್ಯ ದೋರಣೆ ತಾಳಿದರೆ, ಜನಕ್ರೋಶ ತೀವ್ರ ಸ್ವರೂಪ ತಾಳುವುದು ನಿಶ್ಚಿತ” ಎಂದು ಎಚ್ಚರಿಸಿದರು.
ದಾನಪ್ಪ, ಟಿ ದುರ್ಗಪ್ಪ, ಬಿ ರಾಜೇಶ, ಶಿವಶಂಕರ, ಷಣ್ಮುಖ, ಮಹಾನಂದಿ ಕೊಟ್ಟಂ ಪ್ರಸಾದ, ಪ್ರತಾಪ್ ಅಸುಂಡಿ, ಲಕ್ಷ್ಮಣ ಭಂಡಾರಿ, ದುರ್ಗಪ್ಪ ಸಿರುಗುಪ್ಪ, ಪಕೀರಪ್ಪ ತೆಕ್ಕಲಕೋಟೆ, ಕೆಂಚಪ್ಪ, ಅರುಣಾಚಲಂ, ಚಂದ್ರಶೇಖರ, ವೀರೇಶ, ಇನ್ನು ಮುಂತಾದ ದಲಿತ ಮುಖಂಡರು ವಿದ್ಯಾರ್ಥಿಗಳು ಮಾದಿಗ ಸಂಘಟನೆಗಳ ಒಕ್ಕೂಟದ ಸದಸ್ಯರು ಸೇರಿದಂತೆ ಸಮುದಾಯದ ನೂರಾರು ಜನ ಇದ್ದರು.