ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣ ಯಾವ ಭಯೋತ್ಪಾದಕ ಕೃತ್ಯಗಳಿಗೂ ಕಡಿಮೆಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಗೂ ಫೇಸ್ಬುಕ್ ಪೋಸ್ಟ್ ಮಾಡಿರುವ ಸಿಎಂ, ‘ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹೂವಿನಕೋಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.

ಹತ್ತಾರು ಎಳೆಯ ಮಕ್ಕಳ ಮಾರಣ ಹೋಮ ನಡೆಸುವ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕೃತ್ಯಗಳಿಗೂ ಕಡಿಮೆಯಿಲ್ಲ ಎನ್ನುವುದು ನನ್ನ ಭಾವನೆ’ ಎಂದಿದ್ದಾರೆ.ಕುಡಿಯುವ ನೀರಿಗೆ ವಿಷ ಬೆರೆಸುವ ಮನಸ್ಥಿತಿ ನಮ್ಮ ನಡುವೆ ಮಾನವೀಯತೆಯ ಅಧಃಪತನವನ್ನು ತೋರಿಸುತ್ತದೆ. ಈ ಬಗ್ಗೆ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ’ ಎಂದಿದ್ದಾರೆ.
‘ಅಡುಗೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಘಟಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ. ಶಾಲೆಯ ಅಡುಗೆ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.
ವಿಶಪ್ರಾಶಣ ಪ್ರಕರಣ ತನಿಖೆಗೆ 3 ತಂಡ, 18 ಪೊಲೀಸ್ ಸಿಬ್ಬಂದಿ ನೇಮಕ
ತೀವ್ರ ಗಂಭೀರತೆಯಿಂದ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯನಿರ್ವಹಣೆ ಆರಂಭಿಸಿದ್ದು, ತನಿಖೆಗೆ ಹಲವು ಆಯಾಮಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ ಕೆ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಪ್ರಕರಣ ಭೇಧಿಸಲು ಮೂರು ತನಿಖಾ ತಂಡಗಳನ್ನು ರಚಿಸಲಾಗಿದೆ. ಈ ಕಾರ್ಯಾಚರಣೆಗೆ ಒಟ್ಟು 18 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವ ವಹಿಸಲಿದ್ದಾರೆ.ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಲು ವಿಶೇಷ ತಂಡವನ್ನು ಕಳುಹಿಸಲಾಗಿದೆ.ಟವರ್ ಡಂಪ್ ಮತ್ತು ಸಿಸಿ ಟಿವಿ ದೃಶ್ಯಾವಳಿಗಳ ವಿಶ್ಲೇಷಣೆಗಾಗಿ ಐದು ಮಂದಿ ಪೊಲೀಸರನ್ನು ನೇಮಿಸಲಾಗಿದೆ.ಹೂವಿನಕೋಣೆ ಹಾಗೂ ಸುತ್ತಲ ಪರಿಸರದಿಂದ ಮಾಹಿತಿ ಸಂಗ್ರಹಣೆಗಾಗಿ ಎಂಟು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆಗಾಗಿ ಇನ್ನೊಂದು ಐದು ಮಂದಿ ಪೊಲೀಸರ ತಂಡವನ್ನು ರೂಪಿಸಲಾಗಿದೆ.
ಇಂದು ಘಟನೆ ನಡೆದ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಲಿದ್ದು, ಸ್ಥಳೀಯರಿಂದ ಮಾಹಿತಿ ಪಡೆದು ತನಿಖೆಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.